ತಮಾಷೆಯಲ್ಲ, ಈ ಹಾಲಿನ ಬೆಲೆ ಲೀಟರ್‌ಗೆ 7,000 ರೂ. ಎಂದರೆ ನೀವು ನಂಬಲೇಬೇಕು!

Update: 2019-05-11 12:21 GMT

ಈಜಿಪ್ಟಿನ ರಾಣಿಯಾಗಿದ್ದ ಕ್ಲಿಯೊಪಾತ್ರಾ ಅದ್ಭುತ ಸುಂದರಿಯಾಗಿದ್ದಳು ಎಂದು ಇತಿಹಾಸವು ಬಣ್ಣಿಸಿದೆ. ದಂತಕಥೆಯಾಗಿರುವ ತನ್ನ ಸೌಂದರ್ಯವನ್ನು ಕಾಯ್ದುಕೊಳ್ಳಲು ಆಕೇ ಇದೇ ಹಾಲಿನಿಂದ ಸ್ನಾನ ಮಾಡುತ್ತಿದ್ದಳು. ಅಂದಿಗೂ ಇಂದಿಗೂ ನಡುವೆ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳು ಸರಿದುಹೋಗಿವೆ. ಕ್ಲಿಯೊಪಾತ್ರಾಳಿಂದಾಗಿ ಹೆಸರಾಗಿದ್ದ ಆ ಹಾಲು ಈಗ ಮತ್ತೆ ತನ್ನ ಗತವೈಭವದತ್ತ ಮರಳುತ್ತಿದೆ. ಸೌಂದರ್ಯ ಉತ್ಪನ್ನಗಳಲ್ಲಿ ಮಾತ್ರವಲ್ಲ,‘ಸೂಪರ್ ಫುಡ್’ಎಂದೂ ಹೆಸರಾಗುತ್ತಿದೆ. ಈ ದುಬಾರಿ ಹಾಲಿನ ಬೆಲೆ 100 ಮಿ.ಲೀ.ಗೆ 700 ರೂ.ವರೆಗೂ ಇದೆ. ಇದು ಯಾವ ಹಾಲು ಎಂಬ ಅಚ್ಚರಿಯೇ? ಇದು ಕತ್ತೆ ಹಾಲು ಎಂದರೆ ನಂಬಲು ಕಷ್ಟವಾಗಬಹುದು,ಆದರೆ ನಂಬಲೇಬೇಕು!

ಕತ್ತೆಯ ಹಾಲು ಶತಮಾನಗಳಿಂದಲೂ ಸೌಂದರ್ಯ ಹೆಚ್ಚಿಸುವ ಜೊತೆಗೆ ಔಷಧಿಯಾಗಿ ಮತ್ತು ತನ್ನ ಚಿಕಿತ್ಸಾ ಗುಣಗಳಿಂದಾಗಿ ಬಳಕೆಯಾಗುತ್ತಲೇ ಬಂದಿದೆ. ವಯಸ್ಸಾಗುವುದನ್ನು ತಡೆಯುವ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿರುವ ಕತ್ತೆಯ ಹಾಲಿನ ಸಾಂಪ್ರದಾಯಕತೆಯನ್ನು ನಗದು ಮಾಡಿಕೊಳ್ಳಲು ದೇಶಾದ್ಯಂತ ಆಯ್ದ ನವೋದ್ಯಮಿಗಳು ಮುಗಿಬಿದ್ದಿದ್ದಾರೆ. ಕತ್ತೆಯ ಹಾಲಿನೊಂದಿಗೆ ಅದರಿಂದ ತಯಾರಾದ ಫೇರ್‌ನೆಸ್ ಕ್ರೀಮ್‌ಗಳು,ಸಾಬೂನುಗಳು ಮತ್ತು ಶಾಂಪೂಗಳಂತಹ ಸೌಂದರ್ಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ.

ಕತ್ತೆಯ ಹಾಲಿನ ಬಗ್ಗೆ ತುಂಬ ಆಸಕ್ತಿ ಮತ್ತು ಬೇಡಿಕೆಯಿದೆ. ಗ್ರಾಹಕರು ಈಗ ತಮ್ಮ ಪೂರ್ವಜರು ಕಾಯಿಲೆಗಳಿಂದ ಮುಕ್ತಿ ಹೊಂದಲು ಬಳಸುತ್ತಿದ್ದ ಸಾಂಪ್ರದಾಯಿಕ ಪದ್ಧತಿಗಳಿಗೆ ಮರಳುತ್ತಿದ್ದಾರೆ ಎನ್ನುತ್ತಾರೆ ಕತ್ತೆಯ ಹಾಲಿನಿಂದ ತಯಾರಿಸಲ್ಪಟ್ಟ ಪ್ರಮುಖ ಸೌಂದರ್ಯ ಉತ್ಪನ್ನಗಳನ್ನು ಮಾರಾಟ ಸಂಸ್ಥೆ ಡಾಲ್ಫಿನ್ ಐಬಿಎದ ಸ್ಥಾಪಕ ಅಬಿ ಬೇಬಿ. ಕತ್ತೆಯ ಹಾಲಿನಲ್ಲಿ ಉತ್ಕೃಷ್ಟ ಗುಣಗಳಿವೆ. ಶಿಶುಗಳಿಗೆ,ವಿಶೇಷವಾಗಿ ವಾಯು ಸಮಸ್ಯೆಗಳಿರುವ ಶಿಶುಗಳಿಗೆ ಮತ್ತು ಚರ್ಮದ ಅಲರ್ಜಿಗಳಿಂದ ಬಳಲುತ್ತಿರುವವರಿಗೆ ತುಂಬ ಒಳ್ಳೆಯದು ಎನ್ನುತ್ತಾರೆ ಅವರು.

ದೇಶದಲ್ಲಿ ಕತ್ತೆಯ ಹಾಲಿನ ಉದ್ಯಮವನ್ನು ವಿಧಿವತ್ತಾಗಿಸಲು ಸರಕಾರವು ಯೋಜನೆಯನ್ನು ಸಿದ್ಧಗೊಳಿಸುತ್ತಿದೆ. ಭಾರತದಲ್ಲಿ ಕತ್ತೆಯ ಹಾಲನ್ನು ಉತ್ತೇಜಿಸುವ ಸಾಧ್ಯತೆಗಳನ್ನು ಕಂಡುಕೊಳ್ಳುವಂತೆ ನಾವು ಭಾರತೀಯ ಕೃಷಿ ಸಂಶೋಧನಾ ಮಂಡಳಿಗೆ ಸೂಚಿಸಿದ್ದೇವೆ. ಕಡಿಮೆ ಪ್ರಮಾಣದಲ್ಲಿ ಲಭ್ಯತೆ,ಹೆಚ್ಚು ಬಾಳಿಕೆ ಇಲ್ಲದಿರುವುದು,ರುಚಿಯನ್ನು ಹೆಚ್ಚಿಸುವುದು ಮತ್ತು ಮಾರುಕಟ್ಟೆಯನ್ನು ಕಂಡುಕೊಳ್ಳುವುದು ಇವೇ ಮುಂತಾದ ಸವಾಲುಗಳು ಈ ಹೊಸ ಡೇರಿ ಉತ್ಪನ್ನದ ಮುಂದಿವೆ ಎಂದು ಪಶು ಸಂಗೋಪನಾ ಇಲಾಖೆಯ ಕಾರ್ಯದರ್ಶಿ ತರುಣ ಶ್ರೀಧರ ಹೇಳಿದ್ದಾರೆ.

ಈಗಾಗಲೇ ಕತ್ತೆಗಳನ್ನು ಸಾಕುತ್ತಿರುವರು ಮತ್ತು ಅದರ ಹಾಲನ್ನು ಮಾರುತ್ತಿರುವವರು ಭರ್ಜರಿ ದುಡ್ಡು ಮಾಡುತ್ತಿದ್ದಾರೆ. ಅಬಿ ಬೇಬಿ ಕತ್ತೆಯ ಹಾಲಿನಿಂದ ತಯಾರಾದ ಸೋರಿಯಾಟಿಕ್ ಆರ್ಥರಿಟಿಸ್‌ಗಾಗಿ ಚರ್ಮದ ಕ್ರೀಮಿನ 88ಗ್ರಾಂ ಪ್ಯಾಕ್‌ನ್ನು 4,840 ರೂ.,ಕಜ್ಜಿಯ ಚಿಕಿತ್ಸೆಯಲ್ಲಿ ಬಳಸುವ ಫರ್ಮ್‌ನೆಸ್ ಕ್ರೀಮ್‌ನ್ನು 6,136 ರೂ. ಮತ್ತು 200 ಮಿ.ಲೀ.ಶಾವರ್ ಜೆಲ್ ಶಾಂಪೂವನ್ನು 2,400 ರೂ.ಗೆ ಮಾರಾಟ ಮಾಡುತ್ತಿದ್ದಾರೆ.

 ಕತ್ತೆಯ ಹಾಲಿನಿಂದ ತಯಾರಾದ ಸಾಬೂನು ಮತ್ತು ಇತರ ಸೌಂದರ್ಯ ಸಾಧನಗಳನ್ನು ಆರ್ಗಾನಿಕೊ ಬ್ರಾಂಡ್‌ನಡಿ ಮಾರಾಟ ಮಾಡುತ್ತಿರುವ ಪೂಜಾಕೌಲ್ ಅವರು ಉತ್ತರ ಪ್ರದೇಶದ ಗಾಝಿಯಾಬಾದ್,ಪಂಜಾಬಿನ ಬಾರ್ಮೇರ್ ಮತ್ತು ಮಹಾರಾಷ್ಟ್ರದ ಸೋಲಾಪುರಗಳಲ್ಲಿಯ ಕತ್ತೆಗಳನ್ನು ಸಾಕುತ್ತಿರುವ ಬುಡಕಟ್ಟು ಸಮುದಾಯಗಳಿಂದ ಕತ್ತೆಯ ಹಾಲನ್ನು ಪಡೆದುಕೊಳ್ಳುತ್ತಿದ್ದಾರೆ

 ಪುಣೆಯಲ್ಲಿ ರೈತ ರಮೇಶ ಜಾಧವ ಅವರು ಪ್ರತಿ 100 ಎಂಎಲ್‌ಗೆ 700 ರೂ.ದರದಲ್ಲಿ ಕತ್ತೆಯ ಹಾಲನ್ನು ಮಾರಾಟ ಮಾಡುತ್ತಿದ್ದಾರೆ. ಶಿಶುಗಳ ಹೆತ್ತವರು ಮತ್ತು ಕೆಮ್ಮು,ಹೊಟ್ಟೆಸೋಂಕು ಹಾಗೂ ಚರ್ಮದ ಸೋಂಕುಗಳಿಂದ ಬಳಲುತ್ತಿರುವವರು ಅವರ ಪ್ರಮುಖ ಗ್ರಾಹಕರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News