ಪ್ರಿಯಾಂಕಾ ಪ್ರವೇಶ: ಮೆದುಳಿನ ಗೆಡ್ಡೆ ಇದ್ದ ಮಗು ಚಿಕಿತ್ಸೆಗೆ ವಿಶೇಷ ವಿಮಾನದಲ್ಲಿ ದಿಲ್ಲಿಗೆ

Update: 2019-05-11 14:09 GMT

ಪ್ರಯಾಗರಾಜ್, ಮೇ 11 : ಮೆದುಳಿನ ಟ್ಯೂಮರ್ ನಿಂದ ಪ್ರಾಣ ಕಳೆದುಕೊಳ್ಳುವ ಬೀತಿಯಲ್ಲಿದ್ದ ಮಗುವಿನ ಪಾಲಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಆಪತ್ಬಾಂಧವರಾಗಿ ಬಂದಿರುವ ಘಟನೆ ಇತ್ತೀಚಿಗೆ ನಡೆದಿದೆ. ಪ್ರಿಯಾಂಕಾ ಮಧ್ಯ ಪ್ರವೇಶದಿಂದ ಮಗು ಹಾಗು ಅದರ ಹೆತ್ತವರು ವಿಶೇಷ ವಿಮಾನದ ಮೂಲಕ ದಿಲ್ಲಿಗೆ ತಲುಪಿ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗಿದೆ. 

ಪ್ರಯಾಗ್ ರಾಜ್ ನ ಕಮಲಾ ನೆಹರೂ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಗುವೊಂದು ಮೆದುಳಿನ ಟ್ಯೂಮರ್ ಸಮಸ್ಯೆಯಿಂದ ಬಳಲುತ್ತಿತ್ತು. ಪರಿಸ್ಥಿತಿ ಬಿಗಡಾಯಿಸಿ ಮಗು ಬದುಕುಳಿಯುವುದು ಕಷ್ಟ ಎಂದು ವೈದ್ಯರು ಹೇಳಿದ್ದರು. ವಿಷಯ ತಿಳಿದ ಕಾಂಗ್ರೆಸ್ ಮುಖಂಡ ರಾಜೀವ್ ಶುಕ್ಲ ಉತ್ತರ ಪ್ರದೇಶದಲ್ಲಿ ಪ್ರಚಾರಕ್ಕೆ ಬಂದಿದ್ದ ಪ್ರಿಯಾಂಕಾ ಗಾಂಧಿಗೆ ಮಾಹಿತಿ ನೀಡಿ ಸಹಾಯ ಮಾಡುವಂತೆ ಕೋರಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪ್ರಿಯಾಂಕಾ ಮಗುವನ್ನು ದಿಲ್ಲಿಗೆ ಕೂಡಲೇ ಕಳುಹಿಸಲು ವಿಶೇಷ ವಿಮಾನದ ವ್ಯವಸ್ಥೆ ಮಾಡಿದ್ದಾರೆ. 

ಸ್ಥಳೀಯ ಕಾಂಗ್ರೆಸ್ ಮುಖಂಡರು ಪ್ರಿಯಾಂಕಾ ಆದೇಶದಂತೆ ಉಳಿದ ವ್ಯವಸ್ಥೆ ಮಾಡಿ ಮಗುವನ್ನು ಅದರ ಪೋಷಕರ ಜೊತೆ ವಿಶೇಷ ವಿಮಾನದಲ್ಲಿ ದಿಲ್ಲಿಗೆ ಕಳುಹಿಸಿದ್ದಾರೆ. ಅಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಚಿಕಿತ್ಸೆ ಕೊಡಿಸಲು ಪ್ರಿಯಾಂಕಾ ವ್ಯವಸ್ಥೆ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ. ಮಗುವಿನ ಜೊತೆ ಪ್ರಿಯಾಂಕಾ ಸೂಚನೆಯಂತೆ ಕಾಂಗ್ರೆಸ್ ಮಾಜಿ ಸಂಸದ ಅಝರುದ್ದೀನ್ ಕೂಡ ವಿಮಾನದಲ್ಲಿ ತೆರಳಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News