ವಿದ್ಯುತ್ ಪೂರೈಕೆ ಸಮಸ್ಯೆ: ಒಡಿಶಾದಲ್ಲಿ ಚಂಡಮಾರುತ ಸಂತ್ರಸ್ತರಿಂದ ರಸ್ತೆ ತಡೆ

Update: 2019-05-11 16:41 GMT

ಭುವನೇಶ್ವರ, ಮೇ 11: ಕಳೆದ ವಾರ ಒಡಿಶಾಕ್ಕೆ ಅಪ್ಪಳಿಸಿದ ಘನಿ ಚಂಡಮಾರುತದಿಂದ ರಾಜ್ಯದ ಹಲವೆಡೆ ವಿದ್ಯುತ್ ಪೂರೈಕೆ ವ್ಯವಸ್ಥೆಗೆ ಹಾನಿಯಾಗಿದ್ದು ಇದನ್ನು ಸರಿಪಡಿಸಲು ಅಧಿಕಾರಿಗಳು ವಿಳಂಬಧೋರಣೆ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಜಗತ್‌ಸಿಂಗ್‌ಪುರ ಜಿಲ್ಲೆಯ ಚೋಪಡ ಗ್ರಾಮಸ್ಥರು ಶನಿವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದಾರೆ.

ರಾಜ್ಯದ ಹಲವೆಡೆ ಚಂಡಮಾರುತದಿಂದ ಸಂತ್ರಸ್ತರಾದವರು ವಿದ್ಯುಚ್ಛಕ್ತಿ ಅಥವಾ ಆಹಾರದ ಸಮರ್ಪಕ ಪೂರೈಕೆಯಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಚಂಡಮಾರುತ ಅಪ್ಪಳಿಸಿ ಒಂದು ವಾರ ಕಳೆದರೂ ಇನ್ನೂ ವಿದ್ಯುಚ್ಛಕ್ತಿಯ ಪೂರೈಕೆ ಸಮರ್ಪಕಗೊಂಡಿಲ್ಲ. ಬಿಸಿಲ ಧಗೆಯ ಮಧ್ಯೆ ವಿದ್ಯುಚ್ಛಕ್ತಿಯ ಪೂರೈಕೆಯಿಲ್ಲದೆ ನರಕಯಾತನೆ ಅನುಭವಿಸುತ್ತಿದ್ದೇವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲವೆಡೆ ವಿದ್ಯುತ್ ಪೂರೈಕೆ ವ್ಯವಸ್ಥೆಯನ್ನು ಮರು ಸ್ಥಾಪಿಸಲಾಗಿದ್ದರೂ ಲೋ ವೋಲ್ಟೇಜ್ ಸಮಸ್ಯೆಯ ಬಗ್ಗೆ ದೂರು ವ್ಯಕ್ತವಾಗಿದೆ. ಸುಮಾರು 3.5 ಮಿಲಿಯ ಜನತೆಯಲ್ಲಿ ಅರ್ಧಾಂಶದಷ್ಟು ಜನತೆಗೆ ವಿದ್ಯುತ್ ಪೂರೈಕೆ ವ್ಯವಸ್ಥೆಯನ್ನು ಸರಿಪಡಿಸಬೇಕಿದ್ದು ಇದಕ್ಕಾಗಿ ಸಮರೋಪಾದಿಯಲ್ಲಿ ಕೆಲಸ ನಡೆಯುತ್ತಿದೆ . ಪುರಿ, ಖುರ್ಡ, ಜಗತ್‌ಸಿಂಗ್‌ಪುರ ಮತ್ತು ಜೈಪುರ ಜಿಲ್ಲೆಗಳಲ್ಲಿ ಮೂಲ ಸೌಕರ್ಯಗಳಿಗೆ ಹಾನಿಯಾಗಿದ್ದು 5030 ಕಿ.ಮೀನಷ್ಟು 33 ಕೆವಿ ಲೈನ್‌ಗಳು, 38,613 ಕಿ.ಮೀ.ನಷ್ಟು 11 ಕೆವಿ ಲೈನ್‌ಗಳು ಹಾಗೂ 79485 ಕಿ.ಮೀ.ನಷ್ಟು ಎಲ್‌ಟಿ ಲೈನ್‌ಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ 400 ಕೆವಿ ಸಾಮರ್ಥ್ಯದ 5 ವಿದ್ಯುತ್ ಗೋಪುರಗಳು, 130 ಕೆವಿ ಸಾಮರ್ಥ್ಯದ 21 ವಿದ್ಯುತ್ ಗೋಪುರಗಳು, 63,304 ವಿತರಣಾ ಪರಿವರ್ತಕಗಳು ಹಾನಿಗೊಳಗಾಗಿವೆ. ಭುವನೇಶ್ವರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ವಿತರಿಸುವ 220 ಕೆವಿ ಸಾಮರ್ಥ್ಯದ 4 ವಿದ್ಯುತ್ ಜಾಲ(ಗ್ರಿಡ್)ಗಳಿಗೆ, ಪುರಿ, ನಿಮಪಾದ, ಮಂಚೇಶ್ವರ ಮತ್ತು ರಣಸಿಂಗಪುರದಲ್ಲಿ 132 ಕೆವಿ ಸಾಮರ್ಥ್ಯದ ವಿದ್ಯುತ್ ಗ್ರಿಡ್‌ಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News