×
Ad

ಉತ್ತರ ಸಿಕ್ಕಿಂನಲ್ಲಿ ಭಾರೀ ಹಿಮಪಾತದಿಂದಾಗಿ ಹಸಿವೆಯಿಂದ 300ಕ್ಕೂ ಅಧಿಕ ಯಾಕ್‌ಗಳ ಸಾವು

Update: 2019-05-12 18:26 IST

ಹೊಸದಿಲ್ಲಿ,ಮೇ 12: ಉತ್ತರ ಸಿಕ್ಕಿಂ‌ನ ಎತ್ತರದ ಪ್ರದೇಶಗಳಲ್ಲಿ ಹಸಿವಿನಿಂದ ಸಾವನ್ನಪ್ಪಿದ 300ಕ್ಕೂ ಅಧಿಕ ಯಾಕ್‌ಗಳ ಕಳೇಬರಗಳು ಪತ್ತೆಯಾಗಿವೆ.ಲಾಚೆನ್ ಪ್ರದೇಶದ ಸುಮಾರು 25 ರೈತ ಕುಟುಂಬಗಳು ಸಾಕಿದ್ದ ಈ ಯಾಕ್‌ಗಳು ಕಳೆದ ಡಿಸೆಂಬರ್‌ನಲ್ಲಿ ಮೇಯಲೆಂದು ಭಾರತ-ಚೀನಾ ಗಡಿ ಸಮೀಪದ ಮುಕುಥಾಂಗ್ ಮತ್ತು ಯುಮಥಾಂಗ್ ಕಣಿವೆ ಪ್ರದೇಶಗಳಿಗೆ ತೆರಳಿದ್ದವು. ಆದರೆ ಭಾರೀ ಹಿಮಪಾತದಿಂದಾಗಿ ರಸ್ತೆಯು ಮುಚ್ಚಲ್ಪಟ್ಟಿತ್ತು ಮತ್ತು ಈ ಯಾಕ್‌ಗಳು ಆಹಾರವಿಲ್ಲದೆ ಅಲ್ಲಿಯೇ ಸಿಕ್ಕಿಹಾಕಿಕೊಂಡಿದ್ದವು.

ಯಾಕ್‌ಗಳ ಮಾಲಿಕರು ಕೆಳಗಿನ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವ ಮುನ್ನ ಈ ವಿಷಯವನ್ನು ಸ್ಥಳೀಯಾಡಳಿತಕ್ಕೆ ತಿಳಿಸಿದ್ದರಾದರೂ,15,000 ಅಡಿಗಳೆತ್ತರದ ಪ್ರದೇಶಗಳಿಗೆ ತೆರಳುವ ರಸ್ತೆಯನ್ನು ಭಾರೀ ಹಿಮಪಾತದಿಂದಾಗಿ ಸಂಚಾರಯೋಗ್ಯವಾಗಿಸಲು ಸಾಧ್ಯವಾಗಿರಲಿಲ್ಲ. ಹೆಲಿಕಾಪ್ಟರ್ ಮೂಲಕ ಯಾಕ್‌ಗಳಿಗೆ ಆಹಾರವನ್ನು ಪೂರೈಸಲು ಪ್ರಯತ್ನಿಸಲಾಗಿತ್ತಾದರೂ ಪ್ರತಿಕೂಲ ಹವಾಮಾನದಿಂದಾಗಿ ಅದೂ ಸಾಧ್ಯವಾಗಿರಲಿಲ್ಲ.

ರಸ್ತೆಯು ಪುನರಾರಂಭಗೊಂಡ ಬಳಿಕ ಈ ವಾರದ ಆರಂಭದಲ್ಲಿ ಉಪವಿಭಾಗಾಧಿಕಾರಿಗಳು ಮತ್ತು ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಆಹಾರದೊಂದಿಗೆ ಯಾಕ್‌ಗಳ ಪತ್ತೆಗಾಗಿ ತೆರಳಿದ್ದಾಗ 300ಕ್ಕೂ ಅಧಿಕ ಯಾಕ್‌ಗಳ ಶವಗಳು ಪತ್ತೆಯಾಗಿವೆ. ಅವೆಲ್ಲ ಆಹಾರವಿಲ್ಲದೆ ಹಸಿವೆಯಿಂದ ಸಾವನ್ನಪ್ಪಿದ್ದವು.

 ಜೀವಂತವಾಗಿರುವ ಕೆಲವು ಯಾಕ್‌ಗಳನ್ನು ಐಟಿಬಿಪಿ ಸಿಬ್ಬಂದಿಗಳ ನೆರವಿನೊಂದಿಗೆ ವಾಪಸ್ ತರುವ ಪ್ರಯತ್ನಗಳು ನಡೆಯುತ್ತಿವೆ. ಸರಕಾರವು ಪ್ರತಿ ಮಾಲಿಕನಿಗೆ ಗರಿಷ್ಠ ಮೂರು ಯಾಕ್‌ಗಳ ಮಿತಿಗೊಳಪಟ್ಟು ಪ್ರತಿಯೊಂದಕ್ಕೆ 30,000 ರೂ.ಗಳ ಪರಿಹಾರವನ್ನು ನೀಡಲಿದೆ ಎಂದು ಜಿಲ್ಲಾಧಿಕಾರಿ ರಾಜ್ ಯಾದವ ಸುದ್ದಿಗಾರರಿಗೆ ತಿಳಿಸಿದರು.

ಪ್ರತಿ ಚಳಿಗಾಲದಲ್ಲಿ ಮೇವಿನ ಕೊರತೆಯಿಂದಾಗಿ ಕನಿಷ್ಠ ಒಂದು ಡಜನ್ ಯಾಕ್‌ಗಳು ಈ ಪ್ರದೇಶದಲ್ಲಿ ಸಾಯುತ್ತವೆ. ಆದರೆ ಈ ಬಾರಿಯ ಸಾವುಗಳ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚಿನದು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News