ಆರನೇ ಹಂತದ ಮತದಾನ ಪ್ರಕ್ರಿಯೆ: ದಿಲ್ಲಿಯ ವಿವಿಧೆಡೆ ಇವಿಎಂ ದೋಷದ ಬಗ್ಗೆ ದೂರು

Update: 2019-05-12 12:59 GMT

ಹೊಸದಿಲ್ಲಿ, ಮೇ. 12: ರವಿವಾರ ನಡೆದ ಆರನೇ ಹಂತದ ಲೋಕಸಭಾ ಚುನಾವಣೆಯ ಮತದಾನದ ಸಂದರ್ಭ ದಿಲ್ಲಿಯ ವಿವಿಧೆಡೆ ವಿದ್ಯುನ್ಮಾನ ಮತಯಂತ್ರ ದೋಷದ ಬಗ್ಗೆ ದೂರು ವ್ಯಕ್ತವಾಗಿದೆ.

84, 85 ಮತ್ತು 86ನೇ ಸಂಖ್ಯೆಯ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಯ ಆರಂಭದಲ್ಲಿ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳು ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿದ್ದವು ಎಂದು ಮತದಾರರು ದೂರಿದ್ದಾರೆ. ಇದೇ ರೀತಿ, ಮಾಳವೀಯ ನಗರದ 116,117 ಮತ್ತು 122 ಸಂಖ್ಯೆಯ ಬೂತ್‌ಗಳಲ್ಲೂ ಇವಿಎಂ ಕಾರ್ಯ ನಿರ್ವಹಿಸಿಲ್ಲ . ಹೌಝ್ರೆನಿ ಪ್ರದೇಶದ 132ನೇ ಬೂತ್‌ನಲ್ಲಿರುವ ಮತಯಂತ್ರ ಮತ ಚಲಾವಣೆಗೆ ಮೊದಲೇ 50 ಮತ ಚಲಾವಣೆಯಾಗಿರುವುದಾಗಿ ತೋರಿಸುತ್ತಿತ್ತು ಎಂದು ಆಮ್ ಆದ್ಮಿ ಪಕ್ಷದ ಶಾಸಕ ಸೋಮನಾಥ್ ಭಾರ್ತಿ ದೂರಿದ್ದಾರೆ.

ಮಾತಿಯಾ ಮಹಲ್ ಮತ್ತು ಬಲ್ಲಿಮರನ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಲವು ಮತಗಟ್ಟೆಗಳಲ್ಲಿ ಮತಯಂತ್ರಗಳು ಅಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದವು ಎಂದು ಚಾಂದ್‌ನಿ ಚೌಕ ಸಂಸದೀಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆಪಿ ಅಗರ್‌ವಾಲ್ ಅವರ ಪುತ್ರ ಮೂದಿತ್ ಅಗರ್‌ವಾಲ್ ಆರೋಪಿಸಿದ್ದಾರೆ. ಆಮ್ ಆದ್ಮಿ ಪಕ್ಷದ ವೋಟ್‌ಬ್ಯಾಂಕ್ ಪ್ರದೇಶ ಎಂದೇ ಪರಿಗಣಿಸಲ್ಪಟ್ಟಿರುವ ತಿಲಕ್ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪೃಥ್ವಿಪಾರ್ಕ್‌ನ 27ನೇ ಕ್ರಮಸಂಖ್ಯೆಯ ಮತಗಟ್ಟೆಯಲ್ಲಿ ಬೆಳಿಗ್ಗೆ ಕೆಲ ಸಮಯ ಇವಿಎಂ ಕಾರ್ಯನಿರ್ವಹಿಸಿಲ್ಲ ಎಂದು ಪಕ್ಷದ ತಿಲಕ್‌ನಗರ ಶಾಸಕ ಜರ್ನೈಲ್ ಸಿಂಗ್ ಆರೋಪಿಸಿದ್ದಾರೆ. ರೋಹಿಣಿ ನಗರದ ಬೇಗಂಪುರಿ ಮತಗಟ್ಟೆಯ ಇವಿಎಂ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಅಲ್ಲಿನ ಇವಿಎಂ ಬದಲಾಯಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ದೋಷಪೂರ್ಣ ಮತಯಂತ್ರಗಳನ್ನು 10 ನಿಮಿಷದೊಳಗೆ ಬದಲಾಯಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿಕೊಂಡಿದ್ದರೂ ಜಯ್ ವಿಹಾರ್ ಪ್ರಥಮ ಹಂತ, ನಜಾಫ್‌ಗಢ ನಿವಾಸಿಗಳಲ್ಲಿ ಕೆಲವರು ಚಲಾಯಿಸಿದ ಮತ ಇವಿಎಂನಿಂದ ಅಳಿಸಿಹೋಗಿದೆ . ಇವಿಎಂಗಳ ಅಸಮರ್ಪಕ ಕಾರ್ಯನಿರ್ವಹಣೆ ಇದಕ್ಕೆ ಕಾರಣ ಎಂದು ದಿಲ್ಲಿ ಸರಕಾರದ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ದೂರಿದ್ದಾರೆ.

ಆದರೆ ಈ ಬಗ್ಗೆ ಮುಖ್ಯ ಚುನಾವಣಾಧಿಕಾರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News