2018ರ ರಾಷ್ಟ್ರೀಯ ಫಿಲ್ಮ್ ಪುರಸ್ಕಾರ ಅವ್ಯವಸ್ಥೆಗೆ ಹಿರಿಯ ಅಧಿಕಾರಿಯನ್ನು ದೂಷಿಸಿದ ಸರಕಾರ
ಹೊಸದಿಲ್ಲಿ, ಮೇ 12: 2018ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದ ಅವ್ಯವಸ್ಥೆಗೆ ಹಿರಿಯ ಐಐಎಸ್ ಅಧಿಕಾರಿ ಚೈತನ್ಯ ಪ್ರಸಾದ್ ಕಾರಣ ಎಂದು ಮಾಹಿತಿ ಮತ್ತು ಪ್ರಸಾರ ಇಲಾಖೆ ತಿಳಿಸಿದೆ.
ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬದಲು ಮಾಹಿತಿ ಮತ್ತು ಪ್ರಸಾರ ಸಚಿವೆ ಸ್ಮತಿ ಇರಾನಿ ಪ್ರದಾನ ಮಾಡಲಿದ್ದಾರೆ ಎಂದು ಅಂತಿಮ ಗಳಿಗೆಯಲ್ಲಿ ಮಾಹಿತಿ ನೀಡಿದ್ದನ್ನು ವಿರೋಧಿಸಿ 2018ರ ಮೇ 3ರಂದು ಜರಗಿದ ಪ್ರತಿಷ್ಠಿತ ಚಲನಚಿತ್ರ ಪುರಸ್ಕಾರ ಕಾರ್ಯಕ್ರಮವನ್ನು ಹಲವು ಪ್ರಶಸ್ತಿ ಪುರಸ್ಕೃತರು ಬಹಿಷ್ಕರಿಸಿದ್ದ ಕಾರಣ ನರೇಂದ್ರ ಮೋದಿ ಸರಕಾರಕ್ಕೆ ತೀವ್ರ ಮುಜುಗುರವಾಗಿತ್ತು.
ಈ ಅವ್ಯವಸ್ಥೆಗೆ ಹಿರಿಯ ಅಧಿಕಾರಿ ಚೈತನ್ಯ ಪ್ರಸಾದ್ ಅವರು ಸಂಪೂರ್ಣ ಹೊಣೆಗಾರರು ಎಂದು ಮಾಹಿತಿ ಮತ್ತು ಪ್ರಸಾರ ಖಾತೆಯ ಜಂಟಿ ಕಾರ್ಯದರ್ಶಿ ಅಶೋಕ್ ಪರ್ಮಾರ್, ಕಾರ್ಯದರ್ಶಿ ಅಮಿತ್ ಖರೆಗೆ ಬರೆದಿರುವ ಸಚಿವಾಲಯದ ಆಂತರಿಕ ಪತ್ರದಲ್ಲಿ ತಿಳಿಸಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಈ ಕಾರ್ಯಕ್ರಮದಲ್ಲಿ ಕೇವಲ ಒಂದು ಗಂಟೆ ಮಾತ್ರ ಭಾಗವಹಿಸಲಿದ್ದಾರೆ ಎಂದು ರಾಷ್ಟ್ರಪತಿ ಭವನವು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಮೊದಲೇ ತಿಳಿಸಿತ್ತು ಮತ್ತು ಇದು ಪ್ರಸಾದ್‌ಗೆ ತಿಳಿದಿದ್ದರೂ ಅವರು ಇದನ್ನು ಪ್ರಶಸ್ತಿ ವಿಜೇತರಿಗೆ ಅಂತಿಮ ಗಳಿಗೆಯಲ್ಲಿ ತಿಳಿಸಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಸುಮಾರು 140 ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲು ಸಾಮಾನ್ಯವಾಗಿ ರಾಷ್ಟ್ರಪತಿಯವರು 3 ಗಂಟೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಈ ಬಾರಿ ಕೇವಲ ಒಂದು ಗಂಟೆ ಮಾತ್ರ ಪಾಲ್ಗೊಳ್ಳುತ್ತಾರೆ ಎಂಬ ಮಾಹಿತಿಯನ್ನು ಕಾರ್ಯಕ್ರಮದ ಹಿಂದಿನ ದಿನವೇ ಪ್ರಶಸ್ತಿ ವಿಜೇತರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಅವರು ಪ್ರತಿಭಟನೆ ಆರಂಭಿಸಿದ್ದರು. ಆಗ ಪ್ರಸಾದ್ ಪ್ರಶಸ್ತಿ ವಿಜೇತರೊಂದಿಗೆ ದುರಹಂಕಾರ ಮತ್ತು ಅಸಭ್ಯ ವರ್ತನೆ ತೋರಿ ಅವರನ್ನು ಇನ್ನಷ್ಟು ಕೆರಳಿಸಿದ್ದರು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದಲ್ಲಿ ಅಧಿಕಾರಿಯಾಗಿರುವ ಪ್ರಸಾದ್‌ಗೆ ಚಲನಚಿತ್ರ ಪ್ರಶಸ್ತಿ ಸಮಾರಂಭದ ಹೊಣೆ ಹೊತ್ತಿರುವ ಚಲನಚಿತ್ರೋತ್ಸವ ಮಹಾನಿರ್ದೇಶನಾಲಯದ ಹೆಚ್ಚುವರಿ ಹೊಣೆ ವಹಿಸಲಾಗಿತ್ತು.