ಸಂಫೂರ್ಣ ಪಾರದರ್ಶಕತೆಗೆ ಎಲ್ಲಾ ವಿವಿಪ್ಯಾಟ್ ಸ್ಲಿಪ್ ಎಣಿಕೆಗೆ ಸಿವಿಲ್ ಸೊಸೈಟಿ ಆಗ್ರಹ

Update: 2019-05-12 18:27 GMT

ಹೊಸದಿಲ್ಲಿ, ಮೇ 12: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ವಿವಿಪ್ಯಾಟ್ ಚೀಟಿಗಳನ್ನು ಎಣಿಸಬೇಕು ಎಂದು ಸಿವಿಲ್ ಸೊಸೈಟಿಯ ಸದಸ್ಯರು ಒತ್ತಾಯಿಸಿದ್ದಾರೆ. ಓಟು ನಾಗರಿಕನ ಮೂಲ ಅಧಿಕಾರವಾಗಿದ್ದು ಅದು ಜನತೆಯ ಆಶಯಕ್ಕೆ ಬಲ, ಅಸ್ತಿತ್ವ ಮತ್ತು ನ್ಯಾಯಸಮ್ಮತತೆ ನೀಡುತ್ತದೆ. ವಿವಿಪ್ಯಾಟ್ ರಶೀದಿಗಳನ್ನು ಮತಪತ್ರ ಕಾಗದ ಎಂದು ಪರಿಗಣಿಸಬೇಕು ಮತ್ತು ಎಲ್ಲಾ ವಿವಿಪ್ಯಾಟ್ ರಶೀದಿಗಳನ್ನು ಎಣಿಸಬೇಕು ಎಂದು ಅರುಣಾ ರಾಯ್, ಜಯತಿ ಘೋಷ್, ನ್ಯಾ. ಎಪಿ ಶಾ, ಸಂಜಯ್ ಪಾರಿಖ್ ಹಾಗೂ ಸಯೀದಾ ಹಮೀದ್ ಸಹಿ ಹಾಕಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. 

ಇವಿಎಂಗಳ (ವಿದ್ಯುನ್ಮಾನ ಮತಯಂತ್ರ)ಗಳಲ್ಲಿ ಹಸ್ತಕ್ಷೇಪ ಹಾಗೂ ಅಕ್ರಮ ಎಸಗುವ ಸಂದೇಹವನ್ನು ನಿವಾರಿಸಲು ಎಲ್ಲಾ ವಿವಿಪ್ಯಾಟ್ ರಶೀದಿಗಳನ್ನು ಎಣಿಸಬೇಕು ಎಂದು ಸದಸ್ಯರು ಒತ್ತಾಯಿಸಿದ್ದು ಜರ್ಮನ್ ಸಾಂವಿಧಾನಿಕ ಕೋರ್ಟ್‌ನ 2009ರ ತೀರ್ಪನ್ನು ಉಲ್ಲೇಖಿಸಿದ್ದಾರೆ. ಪಾರದರ್ಶಕತೆ ಕಾಯ್ದುಕೊಳ್ಳಲು, ಮತದಾರರ ವಿಶ್ವಾಸವನ್ನು ಸದೃಢಗೊಳಿಸಲು ಭವಿಷ್ಯದಲ್ಲಿ ವಿದ್ಯುನ್ಮಾನ ಮತಯಂತ್ರದಲ್ಲಿ ಮತದಾರರು ಬಟನ್ ಒತ್ತಿದ ತಕ್ಷಣ ವಿವಿಪ್ಯಾಟ್ ರಶೀದಿ ಅವರ ಕೈಸೇರುವಂತೆ ಮತ್ತು ಅದನ್ನು ಪರಿಶೀಲಿಸಿ ಅವರು ಮತಪೆಟ್ಟಿಗೆಯೊಳಗೆ ಹಾಕುವ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News