ಗೋಡ್ಸೆ ಸ್ವತಂತ್ರ ಭಾರತದ ಪ್ರಪ್ರಥಮ ಭಯೋತ್ಪಾದಕ: ಕಮಲ್ ಹಾಸನ್

Update: 2019-05-13 06:24 GMT

ಚೆನ್ನೈ, ಮೇ 13: ಮಹಾತ್ಮಾ ಗಾಂಧೀಜಿಯನ್ನು ಹತ್ಯೆಗೈದ ನಾಥೂರಾಮ್ ಗೋಡ್ಸೆ ಸ್ವತಂತ್ರ ಭಾರತದ ಪ್ರಪ್ರಥಮ ಭಯೋತ್ಪಾದಕ ಎಂದು ಮಕ್ಕಳ್ ನೀದಿ ಮಯ್ಯಂ ನಾಯಕ ಕಮಲ್ ಹಾಸನ್ ಹೇಳಿದ್ದಾರೆ.

ಅರವುಕ್ಕುರುಚ್ಚಿ ಕ್ಷೇತ್ರದಲ್ಲಿ ತನ್ನ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಅವರು, ಮುಸ್ಲಿಮ್ ಮತದಾರರನ್ನು ಓಲೈಸಲು ತಾನು ಈ ಹೇಳಿಕೆ ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

“ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರಿದ್ದಾರೆ ಎಂದು ನಾನು ಈ ಹೇಳಿಕೆ ನೀಡುತ್ತಿಲ್ಲ. ನಾನು ಗಾಂಧಿ ಪ್ರತಿಮೆಯ ಮುಂಭಾಗ ಈ ಹೇಳಿಕೆ ನೀಡುತ್ತಿದ್ದೇನೆ. ಸ್ವತಂತ್ರ ಭಾರತದ ಪ್ರಪ್ರಥಮ ಭಯೋತ್ಪಾದಕ ಓರ್ವ ಹಿಂದೂ. ಆತನ ಹೆಸರು ನಾಥೂರಾಮ್ ಗೋಡ್ಸೆ” ಎಂದವರು ಹೇಳಿದರು.

“ಆ ಹತ್ಯೆಗೆ ಉತ್ತರಗಳನ್ನು ಹುಡುಕುತ್ತಾ ಇಲ್ಲಿಗೆ ಬಂದಿದ್ದೇನೆ'' ಎಂದು ಹೇಳಿದ ಕಮಲ್, ಈ ಮೂಲಕ 1948ರಲ್ಲಿ ನಡೆದ ಮಹಾತ್ಮ ಗಾಂಧಿ ಹತ್ಯೆ ಘಟನೆಯನ್ನು  ಉಲ್ಲೇಖಿಸಿದರು. “ಒಳ್ಳೆಯ ಭಾರತೀಯರು ಸಮಾನತೆ ಬಯಸುತ್ತಾರೆ ಹಾಗೂ ಭಾರತದ ತ್ರಿವರ್ಣದ ಮೂರು ಬಣ್ಣಗಳೂ ಅದೇ ರೀತಿ ಇರಬೇಕೆಂದು ಬಯಸುತ್ತಾರೆ.  ನಾನೊಬ್ಬ ಉತ್ತಮ ಭಾರತೀಯ ಎಂದು ಹೆಮ್ಮೆಯಿಂದ ಹೇಳಬಲ್ಲೆ'' ಎಂದರು.

ಕಮಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಕಮಲ್ ‘ಅಪಾಯಕಾರಿ ಬೆಂಕಿ’ ಹಚ್ಚುತ್ತಿದ್ದಾರೆ ಎಂದು ಹೇಳಿದೆ. “ನಟ ಕಮಲ್ ಹಾಸನ್ ಈಗ ಗಾಂಧೀಜಿಯ ಹತ್ಯೆ ಘಟನೆಯನ್ನು ನೆನಪಿಸುತ್ತಿದ್ದಾರೆ, ಹಾಗೂ ಅದನ್ನು ಹಿಂದು ಉಗ್ರವಾದ ಎಂದು ಹೇಳುತ್ತಿರುವುದು ಖಂಡನಾರ್ಹ.  ಅಲ್ಪಸಂಖ್ಯಾತರ ಓಲೈಕೆಗಾಗಿ ಅವರು ಅಪಾಯಕಾರಿ ಬೆಂಕಿ ಹಚ್ಚುತ್ತಿದ್ದಾರೆ. ಕಮಲ್ ಹಾಸನ್ ಇತ್ತೀಚಿಗಿನ ಶ್ರೀಲಂಕಾ ಸ್ಫೋಟಗಳ ಬಗ್ಗೆ ಏಕೆ ಏನೂ ಹೇಳಿಲ್ಲ?” ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷೆ ತಮಿಳಿಸೈ ಸೌಂದರರಾಜನ್ ಟ್ವೀಟ್ ಮಾಡಿದ್ದಾರೆ.

“ಸೂಕ್ತ ತನಿಖೆ ನಡೆಸಲ್ಪಟ್ಟು ಶಿಕ್ಷೆ ಕೂಡ ನೀಡಲ್ಪಟ್ಟ ದಶಕಗಳಷ್ಟು ಹಳೆಯ ಘಟನೆಯನ್ನು ಅವರು ಕೆದಕುತ್ತಿದ್ದಾರೆ. ತಮ್ಮ ಚಿತ್ರದ ಪ್ರದರ್ಶನವನ್ನು ಧಾರ್ಮಿಕ ಗುಂಪುಗಳು ತಡೆ ಹಿಡಿದಾಗ ದೇಶ ಬಿಟ್ಟು ತೆರಳುವುದಾಗಿ ಬೆದರಿಕೆ ಹಾಕಿದ್ದ ಅವರು ಈಗ ತಮ್ಮನ್ನು ನೈಜ ಭಾರತೀಯ ಎನ್ನುತ್ತಿದ್ದಾರೆ. ಅವರು ಪರದೆಯಲ್ಲಿ ಅವಕಾಶಗಳನ್ನು ಕಳೆದುಕೊಂಡಿರುವುದರಿಂದ ನೈಜ ರಾಜಕೀಯ ನಟನೆ ಆರಂಭಿಸಿದ್ದಾರೆ'' ಎಂದು ಅವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಜೀವನಾಧರಿತ ಚಿತ್ರದಲ್ಲಿ ಮೋದಿ ಪಾತ್ರಧಾರಿಯಾಗಿರುವ ನಟ ವಿವೇಕ್ ಒಬೆರಾಯ್ ಕಮಲ್ ಹಾಸನ್ ಅವರನ್ನು ಟೀಕಿಸಿದ್ದಾರೆ. “ಪ್ರೀತಿಯ ಕಮಲ್ ಸರ್, ನೀವು ಒಬ್ಬ ಮಹಾನ್ ನಟ. ಕಲೆಗೆ ಧರ್ಮ ಇಲ್ಲದೇ ಇರುವ ಹಾಗೆ ಉಗ್ರವಾದಕ್ಕೂ ಧರ್ಮವಿಲ್ಲ. ನೀವು ಗೋಡ್ಸೆ ಒಬ್ಬ ಉಗ್ರವಾದಿಯೆಂದು ಹೇಳಬಹುದು ಆದರೆ `ಹಿಂದು' ಎಂದು ಏಕೆ ಹೇಳುತ್ತೀರಿ ?, ನೀವು ಮುಸ್ಲಿಂ ಬಾಹುಳ್ಯ ಪ್ರದೇಶದಲ್ಲಿ ಮತ ಯಾಚಿಸಲು ಹೋಗಿದ್ದೀರೆಂದೇ?'' ಎಂದು ಒಬೆರಾಯ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News