×
Ad

ಇನ್ಫೋಸಿಸ್ ಫೌಂಡೇಶನ್ ನೋಂದಣಿ ರದ್ದುಗೊಳಿಸಿದ ಗೃಹ ಸಚಿವಾಲಯ

Update: 2019-05-13 15:05 IST

ನವದೆಹಲಿ, ಮೇ 13: ವಿದೇಶಿ ದೇಣಿಗೆ ಪಡೆಯುವ ನಿಟ್ಟಿನಲ್ಲಿ ನಿಯಮಗಳ ಉಲ್ಲಂಘನೆ ನಡೆಸಿದೆ ಎನ್ನುವ ಆರೋಪದಲ್ಲಿ ಬೆಂಗಳೂರು ಮೂಲದ  ಇನ್ಫೋಸಿಸ್ ಫೌಂಡೇಶನ್ ನ ನೋಂದಣಿಯನ್ನು ಕೇಂದ್ರ ಗೃಹ ಸಚಿವಾಲಯ ರದ್ದುಗೊಳಿಸಿದೆ.

ಸತತ ನೆನಪಿನೋಲೆಗಳ ಹೊರತಾಗಿಯೂ ತನಗೆ ದೊರೆತ ವಿದೇಶಿ ದೇಣಿಗೆ, ತನ್ನ ವಾರ್ಷಿಕ ಆದಾಯ ಮತ್ತು ಖರ್ಚುವೆಚ್ಚಗಳ ವಿವರಗಳನ್ನು ಆರು ವರ್ಷಗಳ ತನಕ ನೀಡದ ಫೌಂಡೇಶನ್ ಗೆ ಕಳೆದ ವಾರ ಸಚಿವಾಲಯ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು.

ಈ ಕುರಿತಂತೆ ಇನ್ಫೋಸಿಸ್ ಫೌಂಡೇಶನ್ ಸಂಸ್ಥೆಯನ್ನು ಸಂಪರ್ಕಿಸಿದಾಗ ಸಂಸ್ಥೆ ತಾನಾಗಿಯೇ ಗೃಹ ಸಚಿವಾಲಯಕ್ಕೆ ಸಲ್ಲಿಸಿದ್ದ ಮನವಿ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ  ಎಂಬ ಮಾಹಿತಿ ದೊರಕಿದೆ.

“ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ (ಎಫ್‍ಆರ್‍ಸಿಎ) 2016ರಲ್ಲಿ ತಿದ್ದುಪಡಿಗೊಂಡ ನಂತರ ಅದರ ವ್ಯಾಪ್ತಿಯಲ್ಲಿ ಫೌಂಡೇಶನ್ ಬರುವುದಿಲ್ಲ. ಇದನ್ನು ಪರಿಗಣಿಸಿ ನಾವು ಸಚಿವಾಲಯಕ್ಕೆ ಮನಿವ ಮಾಡಿದ್ದೆವು, ನಮ್ಮ ಮನವಿಯನ್ನು ಪುರಸ್ಕರಿಸಿದ ಸಚಿವಾಲಯಕ್ಕೆ ನಾವು ಧನ್ಯವಾದ ತಿಳಿಸಿದ್ದೇವೆ'' ಎಂದು ಫೌಂಡೇಶನ್ ನ ಕಾರ್ಪೊರೇಟ್ ಮಾರ್ಕೆಟಿಂಗ್ ಎಂಡ್ ಕಮ್ಯುನಿಖೇಶ್ಸ್ ವಿಭಾಗದ ರಿಷಿ ಬಸು ಹೇಳಿದ್ದಾರೆ.

1996ರಲ್ಲಿ ಸ್ಥಾಪಿತವಾದ ಇನ್ಫೋಸಿಸ್ ಫೌಂಡೇಶನ್ ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಕಲೆ, ಸಂಸ್ಕೃತಿ ಪೋಷಣೆ ಹಾಗೂ ನಿರಾಶ್ರಿತರ ಆರೈಕೆ ಯೋಜನೆಗಳನ್ನು ಬೆಂಬಲಿಸುತ್ತಿದೆ. ಸುಧಾ ಮೂರ್ತಿ ಈ ಫೌಂಡೇಶನ್ ನ ಅಧ್ಯಕ್ಷೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News