ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ನಾವು ಭಾವುಕರಾಗಬೇಕಿಲ್ಲ ಎಂದ ಬಿಜೆಪಿ ನಾಯಕ ಸಹಸ್ರಬುದ್ಧೆ

Update: 2019-05-13 15:06 GMT

ಹೊಸದಿಲ್ಲಿ,ಮೇ 13: ನ್ಯೂಸ್ ನೇಷನ್‌ಗೆ ನೀಡಿದ ಸಂದರ್ಶನದಲ್ಲಿ ಬಾಲಾಕೋಟ್ ವಾಯುದಾಳಿ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ವಿವರಣೆ ಮತ್ತು ‘‘ಭಾರತೀಯ ಯುದ್ಧವಿಮಾನಗಳು ಪಾಕಿಸ್ತಾನಿ ರೇಡಾರ್‌ಗಳ ಕಣ್ಣಿನಿಂದ ತಪ್ಪಿಸಿಕೊಳ್ಳಲು ಮೋಡಗಳು ನೆರವಾಗುತ್ತವೆ’’ ಎಂಬ ಅವರ ಹೇಳಿಕೆ ವ್ಯಾಪಕ ಟೀಕೆಗಳಿಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ವಿನಯ ಸಹಸ್ರಬುದ್ಧೆ ಅವರು,ಪ್ರಧಾನಿಯವರು ಕಾರ್ಯಾಚರಣೆ ವಿವರಗಳನ್ನು ಹಂಚಿಕೊಂಡಿರುವುದರಲ್ಲಿ ತಪ್ಪೇನೂ ಇಲ್ಲ ಮತ್ತು ಇಂತಹ ಕಾರ್ಯಾಚರಣೆಗಳ ಹೆಗ್ಗಳಿಕೆ ಯಾವಾಗಲೂ ರಾಜಕೀಯ ನಾಯಕತ್ವಕ್ಕೆ ಹೋಗುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ.

‘‘ರಾಷ್ಟ್ರೀಯ ಭದ್ರತೆಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ನಾವೇಕೆ ಅಷ್ಟು ಭಾವುಕರಾಗಬೇಕು? ಪ್ರಧಾನಿಯವರಿಗೆ ಪ್ರಶ್ನೆಯೊಂದನ್ನು ಕೇಳಿದಾಗ ಅವರು ವಿವರಗಳನ್ನು ನೀಡಿದರೆ ಅದು ತಪ್ಪೇ? ಇದಕ್ಕೆ ಯಾವುದೇ ಆಕ್ಷೇಪ ಅಗತ್ಯ ಎಂದು ನಾನು ಭಾವಿಸಿಲ್ಲ ’’ ಎಂದು ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಸಹಸ್ರಬುದ್ಧೆ ಹೇಳಿದರು.

 ಸೇನೆಯ ಶೌರ್ಯಕ್ಕಾಗಿ ಅದನ್ನು ವಂದಿಸಲೇಬೇಕು. ಆದರೆ ನಿರ್ಧಾರಗಳು ದಿಲ್ಲಿಯಲ್ಲಿ ರೂಪುಗೊಳ್ಳುತ್ತವೆ. ಹೆಗ್ಗಳಿಕೆ ಏನಿದ್ದರೂ ರಾಜಕೀಯ ನಾಯಕತ್ವಕ್ಕೆ ದೊರೆಯುತ್ತದೆ. ಇಲ್ಲಿ ರಾಜಕೀಯ ಇಚ್ಛಾಶಕ್ತಿ ಮುಖ್ಯವಾಗಿರುತ್ತದೆ. ವಾಜಪೇಯಿಯವರ ಕಾಲದಲ್ಲಿ ಪೋಖ್ರಾನ್ ಪರೀಕ್ಷೆ ಅಥವಾ ಇಂದಿರಾ ಗಾಂಧಿಯವರು ಹೆಗ್ಗಳಿಕೆ ಪಡೆದಿದ್ದ 1971ರ ಯುದ್ಧವಾಗಲಿ,ಅದರಲ್ಲೇನೂ ತಪ್ಪಿಲ್ಲ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News