ಫನಿ ಚಂಡಮಾರುತದ ವೇಳೆ ನಿರಾಶ್ರಿತ ಶಿಬಿರಗಳಿಗೆ ದಲಿತರಿಗೆ ಪ್ರವೇಶ ನಿರಾಕರಣೆ: ವರದಿ

Update: 2019-05-13 17:50 GMT

ಭುವನೇಶ್ವರ,ಮೇ.13: ಫನಿ ಚಂಡಮಾರುತ ಒಡಿಶಾದ ಕರಾವಳಿ ಭಾಗದಲ್ಲಿ ಕೋಲಾಹಲವೆಬ್ಬಿಸುತ್ತಿದ್ದ ಸಮಯದಲ್ಲಿ ನಿರಾಶ್ರಿತರಿಗಾಗಿ ನಿರ್ಮಿಸಿದ್ದ ಶಿಬಿರಗಳ ಒಳಗೆ ಪ್ರವೇಶಿಸಲು ಸ್ಥಳೀಯ 25 ದಲಿತ ಕುಟುಂಬಗಳಿಗೆ ಮೇಲ್ಜಾತಿಯವರು ಅವಕಾಶ ನೀಡಲಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

ಶಿಬಿರದಲ್ಲಿ ರಕ್ಷಣೆ ಪಡೆಯಲು ವಿಫಲರಾದ ವೃದ್ಧರು ಮತ್ತು ಮಕ್ಕಳನ್ನು ಹೊಂದಿದ್ದ ದಲಿತ ಕುಟುಂಬಗಳು ನಂತರ ಚಂಡಮಾರುತದ ಅಬ್ಬರಕ್ಕೆ ಬುಡಸಮೇತ ಧರೆಗುರುಳಿದ್ದ ಆಲದ ಮರದ ಅಡಿಯಲ್ಲಿ ಅವಿತು ಚಂಡಮಾರುತದಿಂದ ರಕ್ಷಣೆ ಪಡೆದರು ಎಂದು ಸ್ಥಳೀಯ ದಿನಪತ್ರಿಕೆ ಸಂವಾದ್ ತಿಳಿಸಿದೆ. ಈ ಕುರಿತು ಮೇ 8ರಂದು ಮೊದಲು ವರದಿ ಮಾಡಿದ ಸಂವಾದ್ ಪತ್ರಿಕೆ ಪಾಟಲಿ ಪಂಚಾಯತ್‌ನ ಬಿರಿಪದಿಯಾ ಗ್ರಾಮದಲ್ಲಿ ನಡೆದ ಈ ಘಟನೆಯಲ್ಲಿ ಎಂಟು ದಲಿತ ಕುಟುಂಬಗಳು ಸಂಕಷ್ಟಕ್ಕೊಳಗಾಗಿದೆ ಎಂದು ತಿಳಿಸಿತ್ತು.

ಆದರೆ ಘಟನೆಯ ಕುರಿತ ವೀಡಿಯೊದಲ್ಲಿ ಜನರು ಆ ಗ್ರಾಮದ ಎಲ್ಲ 25 ದಲಿತ ಕುಟುಂಬಗಳ 85 ಜನರೂ ಸಮಸ್ಯೆಗೀಡಾಗಿದ್ದಾರೆ ಎಂದು ತಿಳಿಸಿದ್ದರು. ಈ ಪ್ರದೇಶದಲ್ಲಿ ಸರಕಾರ ಮೂರು ಶಿಬಿರಗಳನ್ನು ನಿರ್ಮಿಸಿತ್ತು. ಆದರೆ ಈ ಮೂರೂ ಶಿಬಿರಗಳನ್ನು ಮೇಲ್ಜಾತಿಯ ಜನರು ಮೊದಲೇ ಆಕ್ರಮಿಸಿಕೊಂಡಿದ್ದು, ನಂತರ ಬಂದ ದಲಿತರಿಗೆ ಪ್ರವೇಶ ನಿರಾಕರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ಹೇಳಿಕೆ ನೀಡಿರುವ ಒಡಿಶಾದ ವಿಶೇಷ ಪರಿಹಾರ ಆಯುಕ್ತ ಬಿಷ್ಣುಪಾದ್ ಸೇಠಿ, ಘಟನೆಯ ಬಗ್ಗೆ ನಾನು ಮಾಧ್ಯಮಗಳಿಂದ ತಿಳಿದುಕೊಂಡಿದ್ದೇನೆ. ಆದರೆ ಸದ್ಯ ಕಲೆಕ್ಟರ್ ಅವರಿಂದ ವರದಿಗಾಗಿ ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಇಂತಹ ಘಟನೆ ನಡೆದಿದ್ದಲ್ಲಿ ಅದು ದುರದೃಷ್ಟಕರ, ಹೀನಾಯವಾಗಿದ್ದು ಇದರ ವಿರುದ್ಧ ಸರಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News