ಈ ಗುಜರಾತಿ ಯುವಕನ ಅದ್ಧೂರಿ ವಿವಾಹಕ್ಕೆ ವಧು ಇಲ್ಲ...!

Update: 2019-05-14 04:13 GMT

ಅಹ್ಮದಾಬಾದ್: ಎಲ್ಲ ಗುಜರಾತಿ ವಿವಾಹಗಳಂತೆಯೇ ಈ ವಿವಾಹ ಕೂಡಾ ಅದ್ಧೂರಿಯಿಂದ ನಡೆಯಿತು. ಚಿನ್ನದ ಬಣ್ಣದ ಶೆರ್ವಾನಿ ತೊಟ್ಟು, ನೇರಳೆ ರುಮಾಲು ಸುತ್ತಿದ್ದ ಯುವಕ ಕುದುರೆ ಮೇಲೆ ಮೆರವಣಿಗೆ ನಡೆಸಿದ. ಕೆಂಪು- ಬಿಳಿ ಗುಲಾಬಿ ಮಾಲೆ ಧರಿಸಿದ್ದ. ಅದ್ಧೂರಿ ಮೆರವಣಿಗೆ ನಡೆಸಿದ.

ಕುಟುಂಬಸ್ಥರು, ಸಂಬಂಧಿಕರು, ಸ್ನೇಹಿತರ ನೃತ್ಯ ಮೆರವಣಿಗೆಗೆ ಉತ್ಸಾಹ ನೀಡಿತ್ತು. ಒಂದು ದಿನ ಮೊದಲು ಮೆಹಂದಿ ಹಾಗೂ ಸಂಗೀತ ಸಂಜೆ ಹೀಗೆ ಸಂಪ್ರದಾಯದಂತೆ ಎಲ್ಲವೂ ನಡೆಯಿತು. ಆದರೆ ಅಲ್ಲಿ ವಧು ಮಾತ್ರ ಇರಲಿಲ್ಲ !

ವಿಶೇಷ ಅಗತ್ಯತೆಯ ಯುವಕ ಅಜಯ್ ಬಾರೋಟ್ (27)ನ ಈ ವಿಶೇಷ ವಿವಾಹ ನಡೆದದ್ದು, ಗುಜರಾತ್‌ನ ಸಬರ್‌ಕಾಂತ ಜಿಲ್ಲೆಯ ಹಿಮ್ಮತ್‌ನಗರ ಎಂಬಲ್ಲಿ. ಪ್ರತಿ ವಿವಾಹದಲ್ಲಿ ಪಾಲ್ಗೊಳ್ಳುವಾಗ ಕೂಡಾ ತನ್ನ ವಿವಾಹದ ಬಗ್ಗೆ ಆತ ಕುತೂಹಲದಿಂದ ಕೇಳುತ್ತಿದ್ದ ಎಂದು ಕುಟುಂಬದವರು ವಿವರಿಸಿದರು.
ಔಪಚಾರಿಕ ಶಿಕ್ಷಣ ಪಡೆಯದ ಅಜಯ್‌ಗೆ ವಧು ಹುಡುಕುವುದು ಸುಲಭವಲ್ಲ ಎನ್ನುವುದು ಪೋಷಕರಿಗೆ ತಿಳಿದಿತ್ತು. ಆತನ ತಂದೆ ವಿಷ್ಣುಭಾಯಿ ಬಾರೋಟ್ ಗುಜರಾತ್ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ.

"ಕಲಿಕಾ ವೈಕಲ್ಯಕ್ಕಾಗಿ ಮಗನಿಗೆ ಚಿಕಿತ್ಸೆ ನೀಡಲಾಗಿದೆ. ಚಿಕ್ಕವನಿದ್ದಾಗಲೇ ಆತ ತಾಯಿಯನ್ನು ಕಳೆದುಕೊಂಡ. ಇತರ ಯುವಕರ ವಿವಾಹ ಮೆರವಣಿಗೆ ಆತನಿಗೆ ಸಂತೋಷದ ವಿಚಾರ. ತನ್ನ ವಿವಾಹದ ಬಗ್ಗೆ ಸದಾ ಪ್ರಶ್ನಿಸುತ್ತಿದ್ದ. ಅತನಿಗೆ ಸಂಗಾತಿಯನ್ನು ಹುಡುಗಲು ಸಾಧ್ಯವಿಲ್ಲ ಎಂಬ ಕಾರಣದಿಂದ ಆತನ ಪ್ರಶ್ನೆಗೆ ಉತ್ತರಿಸಲು ನಮಗೆ ಸಾಧ್ಯವಾಗುತ್ತಿರಲಿಲ್ಲ" ಎಂದು ವಿಷ್ಣುಭಾಯ್ ವಿವರಿಸಿದರು.

"ಆತನ ವಿವಾಹದ ಕನಸು ನನಸಾಗಿಸುವ ಉದ್ದೇಶದಿಂದ ಕುಟುಂಬದ ಸದಸ್ಯರ ಜತೆ ಮಾತನಾಡಿ, ವಿವಾಹ ಮೆರವಣಿಗೆ ಆಯೋಜಿಸುವ ನಿರ್ಧಾರಕ್ಕೆ ಬಂದೆವು. ಸಮಾಜ ಏನು ಹೇಳುತ್ತದೆ ಎಂಬ ಬಗ್ಗೆ ಚಿಂತಿಸದೇ ವಿವಾಹ ಮೆರವಣಿಗೆ ಏರ್ಪಡಿಸುವ ಮೂಲಕ ಮಗನ ಬಯಕೆ ಈಡೇರಿಸಿದ ತೃಪ್ತಿ ನನಗಿದೆ" ಸುಮಾರು 800 ಮಂದಿಗೆ ಸಮುದಾಯ ಭವನದಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಒಟ್ಟು 2 ಲಕ್ಷ ರೂಪಾಯಿಯನ್ನು ಈ ವಿಶೇಷ ವಿವಾಹಕ್ಕೆ ವ್ಯಯಿಸಲಾಗಿದೆ ಎಂದು ಹೇಳಿದರು.

ಅಜಯ್‌ಗೆ ಸಂಗೀತ, ನೃತ್ಯದಲ್ಲಿ ವಿಶೇಷ ಆಸಕ್ತಿ ಎಂದು ಚಿಕ್ಕಪ್ಪ ಕಮಲೇಶ್ ವಿವರಿಸಿದರು. "ಗ್ರಾಮದಲ್ಲಿ ನಡೆಯುವ ಯಾವ ವಿವಾಹವನ್ನೂ ಆತ ತಪ್ಪಿಸಿಕೊಳ್ಳುವುದಿಲ್ಲ. ಕಳೆದ ಫೆಬ್ರುವರಿಯಲ್ಲಿ ನನ್ನ ಮಗನ ವಿವಾಹದಲ್ಲಿ ಪಾಲ್ಗೊಂಡ ಬಳಿಕ ತನ್ನ ವಿವಾಹದ ಬಗ್ಗೆ ಪ್ರಶ್ನಿಸುತ್ತಿದ್ದ. ನನ್ನ ಸಹೋದರ ಈ ಯೋಚನೆಯೊಂದಿಗೆ ಬಂದಾಗ ಅದನ್ನು ಬೆಂಬಲಿಸಿದೆವು" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News