ಮಮತಾ ಬ್ಯಾನರ್ಜಿಯವರ ಕ್ಷಮೆ ಯಾಚಿಸಿ: ಬಿಜೆಪಿ ಕಾರ್ಯಕರ್ತೆಗೆ ಸುಪ್ರೀಂ ಆದೇಶ

Update: 2019-05-14 15:52 GMT

   ಹೊಸದಿಲ್ಲಿ, ಮೇ 14: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಫೋಟೋವನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಆರೋಪದಲ್ಲಿ ಜೈಲು ಸೇರಿದ್ದ ಬಿಜೆಪಿ ಕಾರ್ಯಕರ್ತೆ ಪ್ರಿಯಾಂಕಾ ಶರ್ಮಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರುಗೊಳಿಸಿದ್ದು, ಮಮತಾ ಬ್ಯಾನರ್ಜಿಯ ಕ್ಷಮೆ ಯಾಚಿಸುವಂತೆ ಸೂಚಿಸಿದೆ.

    ಕ್ಷಮೆ ಕೇಳುವುದರಲ್ಲಿ ಕಷ್ಟವೇನಿದೆ. ಸ್ವತಃ ಕ್ಷಮೆ ಯಾಚಿಸುವಂತೆ ಪ್ರಿಯಾಂಕರಿಗೆ ತಿಳಿಸಿದ್ದೇವೆ. ವಾಕ್ ಸ್ವಾತಂತ್ರ ಇತರರ ಹಕ್ಕಿನ ಮೇಲೆ ಪರಿಣಾಮ ಬೀರಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಜೊತೆಗೆ, ಪ್ರಿಯಾಂಕಾ ಶರ್ಮರನ್ನು ಕಸ್ಟಡಿಗೆ ತೆಗೆದುಕೊಂಡ ರೀತಿಯ ಬಗ್ಗೆ ಪಶ್ಚಿಮ ಬಂಗಾಳ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದೆ.

 ಪ್ರಿಯಾಂಕಾ ಜಾಮೀನು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು . ಜಾಮೀನು ಬೇಕಿದ್ದರೆ ಮಮತಾ ಬ್ಯಾನರ್ಜಿಯವರ ಕ್ಷಮೆ ಕೋರಬೇಕೆಂದು ನ್ಯಾ. ಇಂದಿರಾ ಬ್ಯಾನರ್ಜಿ ಮತ್ತು ನ್ಯಾ. ಸಂಜೀವ ಖನ್ನಾ ಅವರಿದ್ದ ನ್ಯಾಯಪೀಠ ಸೂಚಿಸಿತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಿಯಾಂಕಾರ ವಕೀಲರು, ಅಣಕವಾಡಿದ್ದಕ್ಕೆ ಕ್ಷಮೆ ಯಾಚಿಸುವುದಾದರೆ ವ್ಯಂಗ್ಯಚಿತ್ರ ರಚಿಸುವವರೂ ಕ್ಷಮೆ ಕೇಳಬೇಕಾಗುತ್ತದೆಯೇ ಎಂದು ಪ್ರಶ್ನಿಸಿದರು. ಅಲ್ಲದೆ ತಮ್ಮ ಕಕ್ಷಿದಾರರು ಫೋಟೋವನ್ನು ತಿರುಚಿಲ್ಲ. ತಿರುಚಿದ ಫೋಟೋ ಶ ಶೇರ್ ಮಾಡಿದ್ದಾರೆ. ಪ್ರಿಯಾಂಕಾ ಬಿಜೆಪಿಯ ಜೊತೆ ಗುರುತಿಸಿಕೊಂಡಿರುವ ಏಕೈಕ ಕಾರಣಕ್ಕೆ ಅವರನ್ನು ಕ್ಷಮೆ ಕೇಳುವಂತೆ ಒತ್ತಾಯಿಸಲಾಗುತ್ತದೆ. ಈ ಆದೇಶವು ಅಭಿವ್ಯಕ್ತಿ ಸ್ವಾತಂತ್ರದ ಸ್ಥೈರ್ಯವನ್ನು ಉಡುಗಿಸುತ್ತದೆ ಎಂದು ವಾದಿಸಿದರು.

ಆದರೆ ಪ್ರಿಯಾಂಕಾ ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಂಡವರು. ಸಾಮಾನ್ಯ ವ್ಯಕ್ತಿ ಫೋಟೋ ತಿರುಚುವ ಘಟನೆಗೂ ರಾಜಕೀಯ ಪಕ್ಷದ ಮುಖಂಡರು ಫೋಟೋ ತಿರುಚುವುದಕ್ಕೂ ವ್ಯತ್ಯಾಸವಿದೆ ಎಂದು ನ್ಯಾಯಪೀಠ ತಿಳಿಸಿತು.

 ನ್ಯೂಯಾರ್ಕ್‌ನ ಮೆಟ್‌ಗಾಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಿತ್ರನಟಿ ಪ್ರಿಯಾಂಕ ಚೋಪ್ರಾರ ಫೋಟೋಗೆ ಮಮತಾ ಬ್ಯಾನರ್ಜಿಯವರ ಮುಖವನ್ನು ಅಂಟಿಸಿ ಫೇಸ್‌ಬುಕ್‌ನಲ್ಲಿ ಪ್ರಸಾರ ಮಾಡಲಾಗಿದ್ದು ಈ ಬಗ್ಗೆ ಟಿಎಂಸಿ ಮುಖಂಡರು ದೂರಿದ್ದರು.

ಈ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ ಪ್ರಿಯಾಂಕಾ ಶರ್ಮರನ್ನು ಬಂಧಿಸಿದ್ದ ಪೊಲೀಸರು ಎರಡು ವಾರದ ನ್ಯಾಯಾಂಗ ಕಸ್ಟಡಿ ವಿಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News