ಕೊಲ್ಕತ್ತಾದಲ್ಲಿ ಅಮಿತ್ ಶಾ ರ‍್ಯಾಲಿ ಸಂದರ್ಭ ಘರ್ಷಣೆ: ಕಲ್ಲು ತೂರಾಟ, ದ್ವಿಚಕ್ರ ವಾಹನಕ್ಕೆ ಬೆಂಕಿ

Update: 2019-05-14 15:45 GMT

ಹೊಸದಿಲ್ಲಿ, ಮೇ 14: ಕೋಲ್ಕತಾದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ನಡೆಸಿದ ಬೃಹತ್ ಚುನಾವಣಾ ರ್ಯಾಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಕಲ್ಲೆಸೆತ ನಡೆಸಿದ್ದು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಬಳಿಕ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.

ಕೇಸರಿ ದಿರಿಸು ಧರಿಸಿದ್ದ ವ್ಯಕ್ತಿಗಳು ಕಲ್ಲೆಸೆತದಲ್ಲಿ ತೊಡಗಿದಾಗ ಎದುರಲ್ಲಿದ್ದ ವ್ಯಕ್ತಿಗಳು ದಿಕ್ಕಾಪಾಲಾಗಿ ಓಡುತ್ತಿರುವುದು ಘಟನಾ ಸ್ಥಳದಲ್ಲಿ ತೆಗೆದಿರುವ ವೀಡಿಯೊ ದೃಶ್ಯದಲ್ಲಿ ಸೆರೆಯಾಗಿದೆ.

    ಕಾಲೇಜು ರಸ್ತೆಯಲ್ಲಿರುವ ಕಲ್ಕತ್ತಾ ವಿವಿಯ ಬಳಿಯಿಂದ ಬೃಹತ್ ರೋಡ್‌ಶೋ ಹಾದುಹೋಗುತ್ತಿದ್ದಾಗ ಹಿಂಸಾಚಾರ ಆರಂಭವಾಗಿದೆ ಎಂದು ಹೆಸರು ಹೇಳಲು ಬಯಸದ ಅಧಿಕಾರಿ ತಿಳಿಸಿದ್ದಾರೆ. ಬಿಜೆಪಿಯ ವಿದ್ಯಾರ್ಥಿ ಘಟಕದ ಕಾರ್ಯಕರ್ತರು ಎಡರಂಗದ ಕಾರ್ಯಕರ್ತರೊಂದಿಗೆ ಘರ್ಷಣೆಗೆ ಇಳಿದರು. ಉತ್ತರ ಕೋಲ್ಕತಾದ ವಿವೇಕಾನಂದ ಕಾಲೇಜಿನ ಹೊರಭಾಗದಲ್ಲಿ ರಸ್ತೆ ಪಕ್ಕ ನಿಲ್ಲಿಸಲಾಗಿದ್ದ ಬೈಕ್ ಒಂದಕ್ಕೆ ಬೆಂಕಿ ಹಚ್ಚಲಾಗಿದೆ. ಕಾಲೇಜು ಆವರಣದಲ್ಲಿ ಸ್ಥಾಪಿಸಿರುವ 19ನೇ ಶತಮಾನದ ಕ್ರಾಂತಿಪುರುಷ ಈಶ್ವರಚಂದ್ರ ವಿದ್ಯಾಸಾಗರರ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ.

  ಘಟನೆ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಅಮಿತ್ ಶಾ ಟೀಕಿಸಿದ್ದಾರೆ. ಮಮತಾರ ಸೋದರಳಿಯ ಸ್ಪರ್ಧಿಸುತ್ತಿರುವ ಸಂಸದೀಯ ಕ್ಷೇತ್ರದಲ್ಲಿ ತಾನು ಅವರ ವಿರುದ್ಧ ಪ್ರಚಾರ ಕಾರ್ಯ ನಡೆಸುವುದನ್ನು ಅವರು ತಡೆಯುತ್ತಿದ್ದಾರೆ ಎಂದು ಶಾ ಆರೋಪಿಸಿದ್ದಾರೆ. ಸೋಮವಾರ ಜಾಧವಪುರ ಸಂಸದೀಯ ಕ್ಷೇತ್ರದಲ್ಲಿ ರ್ಯಾಲಿ ನಡೆಸಲು ಅಮಿತ್ ಶಾಗೆ ಮಮತಾ ಬ್ಯಾನರ್ಜಿ ಸರಕಾರ ಅನುಮತಿ ನಿರಾಕರಿಸಿತ್ತು. ಅಲ್ಲದೆ ಅವರ ಹೆಲಿಕಾಪ್ಟರ್ ಲ್ಯಾಂಡ್ ಆಗಲೂ ಬ್ಯಾನರ್ಜಿ ಸರಕಾರ ಅನುಮತಿ ನೀಡಿರಲಿಲ್ಲ. ಇದರಿಂದ ಕಾರ್ಯಕ್ರಮ ರದ್ದಾಗಿದ್ದು ಬಳಿಕ ಆ ಸ್ಥಳದಲ್ಲಿ ಬಿಜೆಪಿ-ಟಿಎಂಸಿ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News