×
Ad

ಹೊಟ್ಟೆನೋವೆಂದು ಹೋದವನ ಹೊಟ್ಟೆಯಲ್ಲಿದ್ದ ವಸ್ತುಗಳನ್ನು ಕಂಡು ಹೌಹಾರಿದ ವೈದ್ಯರು!

Update: 2019-05-14 21:20 IST
ಸಾಂದರ್ಭಿಕ ಚಿತ್ರ

ಜೈಪುರ, ಮೇ 14: ಹೊಟ್ಟೆನೋವೆಂದು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ 42 ವರ್ಷದ ವ್ಯಕ್ತಿಯ ಹೊಟ್ಟೆಯಿಂದ ವೈದ್ಯರು 116 ಕಬ್ಬಿಣದ ಮೊಳೆಗಳು, ಒಂದು ಉದ್ದನೆಯ ವಯರ್ ಹಾಗೂ ಒಂದು ಕಬ್ಬಿಣದ ಕಿರು ಗುಂಡನ್ನು ಹೊರತೆಗೆದಿರುವ ಘಟನೆ ನಡೆದಿದೆ.

ರಾಜಸ್ತಾನದ ಬುಂಡಿ ಸರಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ವಿಪರೀತ ಹೊಟ್ಟೆ ನೋವಿಂದ ನರಳುತ್ತಿದ್ದ ಭೋಲಾ ಶಂಕರ್ ಎಂಬಾತ ರವಿವಾರ ಆಸ್ಪತ್ರೆಗೆ ಬಂದಿದ್ದು ಆತನ ಹೊಟ್ಟೆಯ ಎಕ್ಸ್‌ರೇ ತೆಗೆದಾಗ ಹೊಟ್ಟೆಯಲ್ಲಿ ಮೊಳೆ, ವಯರ್ ಮುಂತಾದ ವಸ್ತು ಪತ್ತೆಯಾಗಿದೆ. ಇದನ್ನು ಮತ್ತಷ್ಟು ದೃಢಪಡಿಸಿಕೊಳ್ಳಲು ಆತನನ್ನು ಸಿಟಿ ಸ್ಕಾನ್‌ಗೆ ಒಳಪಡಿಸಲಾಯಿತು ಎಂದು ಆಸ್ಪತ್ರೆಯ ವೈದ್ಯ ಡಾ ಅನಿಲ್ ಸೈನಿ ಹೇಳಿದ್ದಾರೆ.

 ಸೋಮವಾರ ರೋಗಿಯನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದ್ದು ಹೊಟ್ಟೆಯಲ್ಲಿದ್ದ 116 ಕಬ್ಬಿಣದ ಮೊಳೆಗಳು, ಒಂದು ಉದ್ದನೆಯ ವಯರ್ ಹಾಗೂ ಕಬ್ಬಿಣದ ಸಣ್ಣ ಗುಂಡು(ಪೆಲೆಟ್) ಹೊರತೆಗೆಯಲಾಗಿದೆ. ಇದರಲ್ಲಿ ಬಹುತೇಕ ಮೊಳೆಗಳು 6.5 ಸೆ.ಮೀ ಗಾತ್ರದಲ್ಲಿದ್ದವು ಎಂದು ಡಾ ಸೈನಿ ಹೇಳಿದ್ದಾರೆ.

 ಶಸ್ತ್ರಚಿಕಿತ್ಸೆಯ ಬಳಿಕ ರೋಗಿ ಚೇತರಿಸಿಕೊಂಡಿದ್ದಾನೆ. ಆದರೆ ಕಬ್ಬಿಣದ ವಸ್ತುಗಳು ಹೊಟ್ಟೆಗೆ ಸೇರಿದ್ದು ಹೇಗೆ ಎಂಬ ಬಗ್ಗೆ ಈತನಾಗಲೀ ಅಥವಾ ಕುಟುಂಬದ ಸದಸ್ಯರಾಗಲೀ ಮಾಹಿತಿ ನೀಡಿಲ್ಲ. ಒಂದು ವೇಳೆ ಹೊಟ್ಟೆಯಲ್ಲಿದ್ದ ಯಾವುದಾದರೂ ಒಂದು ವಸ್ತು ಕರುಳನ್ನು ಸೇರಿಕೊಂಡಿದ್ದರೆ ಜೀವಕ್ಕೆ ಅಪಾಯವಿತ್ತು ಎಂದವರು ಹೇಳಿದ್ದಾರೆ.

 ಬೋಲಾಶಂಕರ್ ಉದ್ಯಾನಪಾಲಕ(ತೋಟದ ಮಾಲಿ)ನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News