×
Ad

ಜೆಟ್ ಏರ್‌ವೇಸ್‌ನ ಸಿಇಒ,ಇತರ ಮೂವರ ರಾಜೀನಾಮೆ

Update: 2019-05-14 23:14 IST

 ಹೊಸದಿಲ್ಲಿ,ಮೇ 14: ಸಾಲದ ಸುಳಿಯಲ್ಲಿ ಸಿಲುಕಿ ತನ್ನ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಜೆಟ್ ಏರ್‌ವೇಸ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ(ಸಿಇಒ) ವಿನಯ ದುಬೆ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಮಂಗಳವಾರ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದು,ಇದರ ಬೆನ್ನಿಗೇ ಅದರ ಚೀಫ್ ಪೀಪಲ್ ಆಫೀಸರ್ ರಾಹುಲ್ ತನೇಜಾ ಕೂಡ ಹುದ್ದೆಯನ್ನು ತೊರೆದಿದ್ದಾರೆ.

ತನ್ಮಧ್ಯೆ ಕಂಪನಿ ಕಾರ್ಯದರ್ಶಿ ಹಾಗೂ ಮುಖ್ಯ ಅನುಸರಣೆ ಅಧಿಕಾರಿ ಕುಲದೀಪ್ ಶರ್ಮಾ ಕೂಡ ರಾಜೀನಾಮೆ ಸಲ್ಲಿಸಿದ್ದಾರೆಂದು ಜೆಟ್ ಏರ್‌ವೇಸ್ ಶೇರು ವಿನಿಮಯ ಕೇಂದ್ರಗಳಿಗೆ ತಿಳಿಸಿದೆ. ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಅಮಿತ್ ಅಗರವಾಲ್ ಅವರೂ ರಾಜೀನಾಮೆ ಸಲ್ಲಿಸಿದ್ದು, ಮೇ 13ರಿಂದಲೇ ಅನ್ವಯಗೊಂಡಿದೆ ಎಂದು ಕಂಪನಿಯು ಮಂಗಳವಾರ ಬೆಳಿಗ್ಗೆ ತಿಳಿಸಿತ್ತು. ಇದರೊಂದಿಗ  ಕಳೆದ 24 ಗಂಟೆಗಳಲ್ಲಿ ಕಂಪನಿಯ ನಾಲ್ವರು ಹಿರಿಯ ಅಧಿಕಾರಿಗಳು ಹುದ್ದೆಗೆ ಕೈಮುಗಿದಿದ್ದಾರೆ. 1.2 ಶತಕೋಟಿ ಡಾ.ಸಾಲವನ್ನು ತೀರಿಸಲು ಹೆಣಗಾಡುತ್ತಿರುವ ಜೆಟ್ ಏರ್‌ವೇಸ್ ಕಳೆದ ತಿಂಗಳು ತನ್ನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿತ್ತು.

 ದುಬೆ ಅವರು ಜೆಟ್ ಏರ್‌ವೇಸ್‌ನ್ನು ಆಗಸ್ಟ್2017ರಲ್ಲಿ,ತನೇಜಾ ಫೆಬ್ರುವರಿ 2016ರಲ್ಲಿ,ಶರ್ಮಾ ಜನವರಿ 2015ರಲ್ಲಿ ಮತ್ತು ಅಗರವಾಲ್ ಕೂಡ 2015ರಲ್ಲಿ ಸೇರಿದ್ದರು. ತನ್ಮಧ್ಯೆ ಹುದ್ದೆಗಳನ್ನು ತೊರೆದಿರುವ ನಾಲ್ವರು ಅಧಿಕಾರಿಗಳ ಬದಲಿ ನೇಮಕಗಳ ಬಗ್ಗೆ ಕಂಪನಿಯು ಉಲ್ಲೇಖಿಸಿಲ್ಲ.

ದುಬೆ ಅವರು ಜೆಟ್‌ಗೆ ಸೇರುವ ಮುನ್ನ 30 ವರ್ಷಗಳ ಕಾಲ ಅಮೆರಿಕ,ಯುರೋಪ್ ಮತ್ತು ಏಷ್ಯಾಗಳಲ್ಲಿ ಡೆಲ್ಟಾ ಏರ್‌ಲೈನ್ಸ್,ಸೇಬ್ರ್ ಮತ್ತು ಅಮೆರಿಕನ್ ಏರ್‌ಲೈನ್ಸ್‌ಗಳಲ್ಲಿ ಸೇವೆ ಸಲ್ಲಿಸಿದ್ದರು.

  ಜೆಟ್ ಏರ್‌ವೇಸ್‌ನ್ನು ಸ್ವಾಧೀನ ಪಡಿಸಿಕೊಂಡಿರುವ ಸಾಲದಾತ ಬ್ಯಾಂಕುಗಳು ತಮ್ಮ ಬಾಕಿಯನ್ನು ವಸೂಲುಮಾಡಲು ಕಂಪನಿಯನ್ನು ಮಾರಾಟ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿವೆಯಾದರೂ ಅದು ನಿರೀಕ್ಷಿತ ಫಲವನ್ನು ನೀಡಿಲ್ಲ. ಪಾಲು ಬಂಡವಾಳದ ಖರೀದಿಗೆ ಆಸಕ್ತ ಕಂಪನಿಗಳು ಬಿಡ್‌ಗಳನ್ನು ಸಲ್ಲಿಸಲು ಶುಕ್ರವಾರ ಕೊನೆಯ ದಿನವಾಗಿದ್ದು,ಇತಿಹಾದ್ ಸೇರಿದಂತೆ ನಾಲ್ಕು ಕಂಪನಿಗಳು ಬಿಡ್‌ಗಳನ್ನು ಸಲ್ಲಿಸಿವೆ.

 ತನ್ಮಧ್ಯೆ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ(ಎನ್‌ಎಸ್‌ಇ)ದಲ್ಲಿ ಜೆಟ್ ಏರ್‌ವೇಸ್‌ನ ಶೇರು ಶೇ.7.33ರಷ್ಟು ಕುಸಿತ ದಾಖಲಿಸಿದ್ದು,128.90 ರೂ.ಗೆ ಮುಕ್ತಾಯಗೊಂಡಿದೆೆ. ಸಂಸ್ಥೆಯ ಸ್ಥಾಪಕ ಹಾಗೂ ಅಧ್ಯಕ್ಷ ನರೇಶ ಗೋಯಲ್ ಅವರು ಕಳೆದ ಮಾರ್ಚ್‌ನಲ್ಲಿ ಪತ್ನಿ ಅನಿತಾ ಗೋಯಲ್ ಜೊತೆ ಜೆಟ್ ಆಡಳಿತ ಮಂಡಳಿಗೆ ರಾಜೀನಾಮೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News