ಪೇಟಿಎಂ : 10 ಕೋಟಿ ರೂ.ಮೊತ್ತದ ವಂಚನೆ ಬಯಲಿಗೆ

Update: 2019-05-14 17:58 GMT

ಮುಂಬೈ, ಮೇ 14: ಸಣ್ಣ ವ್ಯಾಪಾರಿಗಳು ಗಳಿಸಿರುವ ಭಾರೀ ಪ್ರಮಾಣದ ಪ್ರೋತ್ಸಾಹ ಧನದ ಕುರಿತು ತನಿಖೆ ನಡೆಸುತ್ತಿರುವ ಪೇಟಿಎಂ, 10 ಕೋಟಿ ರೂ.ಗಳ ಬೃಹತ್ ವಂಚನೆಯನ್ನು ಬಯಲಿಗೆಳೆದಿದೆ ಮತ್ತು ಅನೇಕ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವ ಜೊತೆಗೆ ನೂರಾರು ಮಾರಾಟಗಾರರನ್ನು ತನ್ನ ಪಟ್ಟಿಯಿಂದ ತೆಗೆದು ಹಾಕಿದೆ ಎಂದು ಪೇಟಿಎಂ ಮುಖ್ಯಸ್ಥ ವಿಜಯ್‌ಶೇಖರ್ ಶರ್ಮಾ ಹೇಳಿದ್ದು, ಪ್ರೋತ್ಸಾಹ ಧನ ಮಾದರಿ ಸಮರ್ಥನೀಯವಾಗಿದೆ ಎಂದಿದ್ದಾರೆ.

ದೀಪಾವಳಿಯ ಬಳಿಕ ಕೆಲವು ಸಣ್ಣ ವ್ಯಾಪಾರಿಗಳು ಭಾರೀ ಪ್ರಮಾಣದ ಪ್ರೋತ್ಸಾಹ ಧನ ಗಳಿಸುತ್ತಿರುವುದು ನಮ್ಮ ತಂಡದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ನಮ್ಮ ಲೆಕ್ಕಪತ್ರ ಪರಿಶೋಧಕರಿಗೆ ಇನ್ನಷ್ಟು ಕೂಲಂಕಷ ಆಡಿಟ್ (ಲೆಕ್ಕಪತ್ರ ಪರಿಶೋಧನೆ) ನಡೆಸಲು ಸೂಚಿಸಿದೆವು . ಈ ವೇಳೆ ಕೆಲವು ವ್ಯಾಪಾರಿಗಳು ಸಂಸ್ಥೆಯ ಕಿರಿಯ ಉದ್ಯೋಗಿಗಳೊಂದಿಗೆ ಸೇರಿಕೊಂಡು ವಂಚನೆ ಎಸಗಿರುವುದು ಬೆಳಕಿಗೆ ಬಂದಿದೆ ಎಂದು ಶರ್ಮಾ ಹೇಳಿದ್ದಾರೆ.

   ಒಟ್ಟಾರೆ ವಂಚನೆಯ ಮೊತ್ತ 10 ಕೋಟಿ ರೂ. ಆಗಿದ್ದು ತಪ್ಪು ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನೂರಾರು ವ್ಯಾಪಾರಿಗಳನ್ನು ಪಟ್ಟಿಯಿಂದ ತೆಗೆದು ಹಾಕುವುದು, ಬ್ರಾಂಡ್ ಮಾರಾಟಗಾರರಿಗೆ ಮಾತ್ರ ಅವಕಾಶ ನೀಡುವುದು ಮುಂತಾದ ಕ್ರಮಗಳ ಬಗ್ಗೆ ನಿರ್ಧರಿಸಲಾಗಿದೆ. ಹಲವಾರು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂದವರು ತಿಳಿಸಿದರು. ಆಲಿಬಾಬ ಬೆಂಬಲಿತ ಕೆಲವು ಸಂಸ್ಥೆಗಳ ಉದ್ಯೋಗಿಗಳು ಹೊರಗಿನ ವ್ಯಾಪಾರಿಗಳ ಜೊತೆ ಸೇರಿಕೊಂಡು ನಕಲಿ ಆದೇಶಪತ್ರ(ಆರ್ಡರ್) ನೀಡಿ ಪ್ರೋತ್ಸಾಹಧನ ಕೊಡುಗೆಯ ಲಾಭ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News