ಉಡುಪಿ ಅಗ್ನಿಶಾಮಕ ಠಾಣೆಯ ದುಸ್ಥಿತಿ: ನೀರಿನ ಸಂಕಷ್ಟದ ಮಧ್ಯೆ ಜಲ ವಾಹನದ ಕೊರತೆ

Update: 2019-05-15 06:43 GMT

ಉಡುಪಿ, ಮೇ 14: ಜಿಲ್ಲಾ ಕೇಂದ್ರ ಕಚೇರಿಯಲ್ಲಿರುವ ಉಡುಪಿ ಅಗ್ನಿ ಶಾಮಕ ಠಾಣೆಯು ಪ್ರತೀ ಬಾರಿಯಂತೆ ಈ ಬೇಸಿಗೆಯಲ್ಲೂ ಕಾಡುತ್ತಿರುವ ಜಲ ಸಂಕಷ್ಟದ ಮಧ್ಯೆ ಜಲವಾಹನದ ಕೊರತೆಯನ್ನು ಎದುರಿಸುತ್ತಿದೆ. ಇರುವ ಮೂರು ವಾಹನಗಳ ಪೈಕಿ ಎರಡು ವಾಹನಗಳನ್ನು ಅನ್ಯ ಕಾರ್ಯಕ್ಕೆ ನಿಯೋಜಿಸಿದ ಪರಿಣಾಮ ಒಂದೇ ವಾಹನದಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಉಡುಪಿ ಅಗ್ನಿಶಾಮಕ ಠಾಣೆಯಲ್ಲಿ ನಾಲ್ಕು ಜಲ ವಾಹನ ಹಾಗೂ ಒಂದು ರೆಸ್ಕು ವಾಹನಗಳಿವೆ. ಇದರಲ್ಲಿ ಅಗ್ನಿ ಶಮನಕ್ಕೆ ಬಳಸುವ 9ಸಾವಿರ ಲೀ. ಸಾಮರ್ಥ್ಯದ ಜಲ ಲಾರಿ, 4,500 ಲೀ. ಸಾಮರ್ಥ್ಯದ ಎರಡು ಜಲ ವಾಹನಗಳು ಮತ್ತು ತುರ್ತು ಸ್ಪಂದನೆಗಾಗಿ 500ಲೀ. ಜಲ ಸಾಮರ್ಥ್ಯದ ಬುಲೆಟ್ ಆ್ಯಸ್ಟಿಂಗ್ವಿಶರ್ ಇದೆ. ಇಲ್ಲಿ ಪ್ರಸ್ತುತ 24 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, 15 ಹುದ್ದೆಗಳು ಖಾಲಿ ಇವೆ.

ಸದ್ಯ ಉಡುಪಿ ಠಾಣೆಯ ಒಂದು ಜಲ ವಾಹನವನ್ನು ಚುನಾವಣಾ ಕರ್ತವ್ಯಕ್ಕಾಗಿ ಉಡುಪಿ ಸೈಂಟ್ ಸಿಸಿಲೀಸ್‌ನಲ್ಲಿರುವ ಮತ ಎಣಿಕೆ ಕೇಂದ್ರದಲ್ಲಿ ನಿಯೋಜಿಸಲಾಗಿದೆ. ಇನ್ನೊಂದು ಜಲ ವಾಹನ ತಾಂತ್ರಿಕ ಸಮಸ್ಯೆಯಿಂದ ದುರಸ್ತಿಯಲ್ಲಿದೆ. ಬುಲೆಟ್ ಆ್ಯಸ್ಟಿಂಗ್ವಿಶರ್‌ನ್ನು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಚಿಕಿತ್ಸೆಗಾಗಿ ತಂಗಿರುವ ಮೂಳೂರಿನ ಸಾಯಿರಾಧಾ ರೆಸಾರ್ಟ್‌ನಲ್ಲಿ ಕಳೆದ ಕೆಲವು ದಿನಗಳಿಂದ ಇರಿಸಲಾಗಿದೆ.

60ಕಿ.ಮೀ.ಗೆ ಒಂದೇ ವಾಹನ:

ದಕ್ಷಿಣಕ್ಕೆ ಪಡುಬಿದ್ರೆಯಿಂದ ಉತ್ತರಕ್ಕೆ ಬ್ರಹ್ಮಾವರ, ಪೂರ್ವಕ್ಕೆ ಪೆರ್ಡೂರುವರೆಗೆ ಸುಮಾರು 50-60 ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಬೇಕಾದ ಉಡುಪಿ ಠಾಣೆ, ಈಗ ಕೇವಲ ಒಂದೇ ಒಂದು ವಾಹನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ಪ್ರತಿದಿನ 5-6 ಕರೆಗಳನ್ನು ಸ್ವೀಕರಿಸುವ ಉಡುಪಿ ಠಾಣಾ ಸಿಬ್ಬಂದಿ ಒಂದು ವಾಹನವನ್ನು ಹಿಡಿದುಕೊಂಡು ಎಲ್ಲಿಗೆ ಹೋಗಬೇಕೆಂಬ ಗೊಂದಲ ಹಾಗೂ ಸಂಕಷ್ಟದಲ್ಲಿದ್ದಾರೆ. ಇರುವ ಒಂದು ಜಲ ವಾಹನ 20-25 ಕಿ.ಮೀ. ದೂರದ ಪಡುಬಿದ್ರೆಯಲ್ಲಿ ಗದ್ದೆಗೆ ಬಿದ್ದ ಬೆಂಕಿಯನ್ನು ಶಮನ ಮಾಡಲು ಹೋದರೆ, ಇತ್ತ ಕಾಲಡಿಯಲ್ಲಿ ಗಂಭೀರ ದುರ್ಘಟನೆೆ ಸಂಭವಿಸಿದರೂ ಬೆಂಕಿ ನಂದಿಸಲು ವಾಹನ ಇಲ್ಲದ ಪರಿಸ್ಥಿತಿ ಉಡುಪಿ ಠಾಣೆಯ ಸಿಬ್ಬಂದಿಯದ್ದಾಗಿದೆ.

ಜನವರಿ ತಿಂಗಳಿನಿಂದ ಈವರೆಗೆ ಬೆಂಕಿ ಅಕಸ್ಮಿಕಕ್ಕೆ ಸಂಬಂಧಿಸಿ ಉಡುಪಿ ಠಾಣೆಗೆ 323 ಕರೆಗಳು ಬಂದಿವೆ. ಬೇಸಿಗೆಯಲ್ಲಿ ಬರುವ ಬಹುತೇಕ ಕರೆಗಳು ಗದ್ದೆ ಹಾಗೂ ಗುಡ್ಡಗಳಿಗೆ ಬೆಂಕಿ ಬಿದ್ದಿರುವ ಬಗ್ಗೆ ಇರುತ್ತವೆ. ಅಲ್ಲದೆ, ದೂರದ ಊರುಗಳ ಸಾರ್ವಜನಿಕರಿಂದ ಬರುವ ಕೆಲವೊಂದು ಹುಸಿ ಕರೆಗಳು ಕೂಡ ಕಿರಿಕಿರಿ ಉಂಟು ಮಾಡುತ್ತವೆ ಎನ್ನುತ್ತಾರೆ ಉಡುಪಿ ಠಾಣೆಯ ಸಿಬ್ಬಂದಿ.

ಅಗ್ನಿ ಶಮನಕ್ಕೆ ನೀರೆ ಸಿಗಲ್ಲ:

ಬೇಸಿಗೆ ಬಂತೆಂದರೆ ಉಡುಪಿಯ ಅಗ್ನಿ ಶಾಮಕ ಠಾಣೆಯವರು ಪ್ರತೀ ವರ್ಷವೂ ಜಲ ಸಂಕಷ್ಟ ಎದುರಿಸುತ್ತಿರುತ್ತಾರೆ. ಈ ಬಾರಿ ಉಡುಪಿಯಲ್ಲಿ ನೀರಿಗೆ ಬರ ಬಂದಿರುವುದರಿಂದ ಉಡುಪಿ ಠಾಣೆಯವರು ತಮ್ಮ ಜಲ ವಾಹನಗಳಿಗೆ ನೀರು ತುಂಬಿಸಲು ಪ್ರತೀ ಬಾರಿಯೂ ಏಳೆಂಟು ಕಿ.ಮೀ. ದೂರದ ಮಲ್ಪೆಗೆ ತೆರಳಬೇಕಾಗಿದೆ.

ಉಡುಪಿ ಠಾಣೆಯ ಆವರಣದಲ್ಲಿ ಸುಮಾರು ಆರು ವರ್ಷಗಳ ಹಿಂದೆ ಶಾಸಕರ ನಿಧಿಯಿಂದ ಕೊಳವೆ ಬಾವಿಯನ್ನು ಕೊರೆಯಲಾಗಿತ್ತು. ಆದರೆ, ಈ ಕೊಳವೆ ಬಾವಿಯಲ್ಲಿ ಬೇಸಿಗೆಯಲ್ಲಿ ನೀರೇ ಸಿಗುವುದಿಲ್ಲ. ಇರುವ ಅಲ್ಪ ಪ್ರಮಾಣದ ನೀರು ಇಲ್ಲಿನ ಸಾವಿರಾರು ಲೀ. ಸಾಮರ್ಥ್ಯದ ವಾಹನಗಳಿಗೆ ಸಾಕಾಗುತ್ತಿಲ್ಲ. ಅದೇ ರೀತಿ ಇಲ್ಲಿರುವ ಬಾವಿಯು ಎಪ್ರಿಲ್ ತಿಂಗಳಲ್ಲಿಯೇ ಬತ್ತಿ ಹೋಗುತ್ತದೆ. ಇದರ ಪರಿಣಾಮ ಪ್ರತೀ ಬಾರಿಯೂ ಠಾಣೆಯ ನಾಲ್ಕು ವಾಹನಗಳಿಗೆ ಸಾವಿರಾರು ಲೀ. ನೀರನ್ನು ಮಲ್ಪೆ ಠಾಣೆಯಲ್ಲಿರುವ ಜಲಮೂಲದಿಂದ ತುಂಬಿಸಿಕೊಂಡು ಬರಬೇಕಾಗಿದೆ. ಕೆಲವು ಸಂದರ್ಭ ಘಟನಾ ಸ್ಥಳದಲ್ಲಿ ನೀರಿನ ಮೂಲಗಳಿದ್ದರೆ ಅಲ್ಲಿಂದಲೇ ತುಂಬಿಸಲಾಗುತ್ತದೆ. ಈಗ ಎಲ್ಲ ಕಡೆ ನೀರಿಗೆ ಸಮಸ್ಯೆ ಇರುವುದರಿಂದ ನಮಗೆ ನೀರು ಸಿಗುವುದು ಕಷ್ಟ ಎಂದು ಸಹಾಯಕ ಠಾಣಾಧಿಕಾರಿ ಗೋಪಾಲ್ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ತಾಲೂಕಿಗೊಂದರಂತೆ ಠಾಣೆ ಸ್ಥಾಪನೆಗೆ ಪ್ರಸ್ತಾವ

ಸದ್ಯ ಜಿಲ್ಲೆಯಲ್ಲಿ ನಾಲ್ಕು ಅಗ್ನಿಶಾಮಕ ಠಾಣೆಗಳಿದ್ದು, ಉಡುಪಿಯಲ್ಲಿ ನಾಲ್ಕು, ಮಲ್ಪೆಯ ಠಾಣೆಯಲ್ಲಿ ಒಂದು(ಮೀನುಗಾರಿಕಾ ಬಂದರಿಗೆ ಸೀಮಿತ), ಕುಂದಾ ಪುರದಲ್ಲಿ ಒಂದು, ಕಾರ್ಕಳ ಠಾಣೆಯಲ್ಲಿ ಎರಡು ಜಲ ವಾಹನಗಳಿವೆ. ಇದೀಗ ಜಿಲ್ಲೆಯಲ್ಲಿ ಒಟ್ಟು ಏಳು ತಾಲೂಕುಗಳು ರಚನೆಯಾಗಿದ್ದು, ಪ್ರತಿ ತಾಲೂಕಿಗೆ ಒಂದರಂತೆ ಠಾಣೆಯನ್ನು ಸ್ಥಾಪಿಸಬೇಕಾಗಿದೆ. ಈ ಸಂಬಂಧ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿಗಳು ಈಗಾಗಲೇ ಪ್ರಸ್ತಾವನೆ ಕೂಡ ಕಳುಹಿಸಿದ್ದಾರೆ. ಕಾಪು, ಬೈಂದೂರು, ಬ್ರಹ್ಮಾವರ, ಹೆಬ್ರಿ ತಾಲೂಕುಗಳಲ್ಲಿ ಮಾತ್ರವಲ್ಲದೆ ಹೆಚ್ಚುವರಿಯಾಗಿ ಶಿರ್ವ, ಮಣಿಪಾಲ, ಪಡುಬಿದ್ರೆಯಲ್ಲೂ ಅಗ್ನಿ ಶಾಮಕ ಠಾಣೆಗಳನ್ನು ಸ್ಥಾಪಿಸಬೇಕೆಂಬ ಕೂಗುಗಳು ಕೇಳಿಬರುತ್ತಿವೆ. ಎರಡು ಮೂರು ವರ್ಷಗಳ ಹಿಂದೆ ಮಣಿಪಾಲ- ಅಲೆವೂರು ರಸ್ತೆಯ ಪೊಲೀಸ್ ವಸತಿಗೃಹದ ಬಳಿ ಒಂದು ಎಕರೆ ಹಾಗೂ ಪಡುಬಿದ್ರೆ- ಹೆಜಮಾಡಿ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಿಂದ ಒಂದು ಕಿ.ಮೀ. ಒಳಗೆ ಸುಮಾರು 1.85 ಎಕರೆ ಜಾಗವನ್ನು ಗುರುತಿಸಿ, ಅಗ್ನಿ ಶಾಮಕ ಠಾಣೆಗಳ ಸ್ಥಾಪನೆಗಾಗಿ ಮೀಸಲಿರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೀಗ ತಾಲೂಕಿಗೆ ಒಂದರಂತೆ ಠಾಣೆ ಸ್ಥಾಪಿಸಬೇಕೆಂಬ ಹೊಸ ನಿಯಮ ಜಾರಿಯಾಗಿದೆ. ಇದರ ಪ್ರಕಾರ ಒಂದು ಠಾಣೆಯಲ್ಲಿ ಎರಡು ವಾಹನಗಳಿರುತ್ತವೆ. ಈ ಕುರಿತು ಇಲಾಖೆಗೆ ಪ್ರಸ್ತಾವ ಕಳುಹಿಸಲಾಗಿದೆ. ಎಲ್ಲ ಕಡೆ ಠಾಣೆ ಸ್ಥಾಪನೆಯಾದರೆ ನಮ್ಮ ಒತ್ತಡ ಕಡಿಮೆ ಆಗುತ್ತದೆ. ಅಲ್ಲದೆ, ಉಡುಪಿಯ ಠಾಣೆಯಲ್ಲಿ ದುರಸ್ತಿಯಲ್ಲಿರುವ ವಾಹನ ಸರಿಯಾದರೆ ಠಾಣೆಯ ವಾಹನದ ಕೊರತೆ ನೀಗಲಿದೆ.

-ವಸಂತ ಕುಮಾರ್ ಎಚ್.ಎಂ.,

ಅಗ್ನಿಶಾಮಕ ಅಧಿಕಾರಿ, ಉಡುಪಿ ಜಿಲ್ಲೆ

Writer - ನಝೀರ್ ಪೊಲ್ಯ

contributor

Editor - ನಝೀರ್ ಪೊಲ್ಯ

contributor

Similar News