ಅಂಗರಕ್ಷಕರಿಗೆ ಪ್ರತ್ಯೇಕ ವಾಹನ ಒದಗಿಸಿ ಎಂದು ಠಾಣೆಯಲ್ಲಿ ಧರಣಿ ಕುಳಿತ ಮೋದಿ ಸಹೋದರ

Update: 2019-05-15 08:07 GMT

ಜೈಪುರ್:  ಜೈಪುರ್ ಗೆ ಪ್ರಯಾಣಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯ ಸಹೋದರ ಪ್ರಹ್ಲಾದ್ ಮೋದಿ ಮಂಗಳವಾರ  ಜೈಪುರ್-ಅಜ್ಮೀರ್ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಬಗ್ರು ಪೊಲೀಸ್ ಠಾಣೆಯಲ್ಲಿ ಧರಣಿ ಕುಳಿತು ತಮ್ಮ ಅಂಗರಕ್ಷಕರಿಗೆ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಪ್ರಹ್ಲಾದ್ ಮೋದಿಗೆ ಬೆಂಗಾವಲಾಗಿ ತೆರಳಲು ಬಗ್ರು ಠಾಣೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಸಿದ್ಧರಾಗಿದ್ದರು, ನಿಯಮ ಪ್ರಕಾರ ಅವರು ತಾವು ರಕ್ಷಣೆ ನೀಡಬೇಕಾದವರ ವಾಹನದಲ್ಲಿಯೇ ಸಾಗಬೇಕಾಗಿದೆ ಎಂದು ಜೈಪುರ್ ಪೊಲೀಸ್ ಆಯುಕ್ತ ಆನಂದ್ ಶ್ರೀವಾಸ್ತವ ಹೇಳಿದ್ದಾರೆ.

''ಈ ಕುರಿತಾದ ಆದೇಶಪತ್ರವನ್ನು ಅವರಿಗೆ ತೋರಿಸಿದರೂ ತಮ್ಮ ವಾಹನದಲ್ಲಿ ಅಂಗರಕ್ಷಕರನ್ನು ಕರೆದುಕೊಂಡು ಹೋಗಲು ನಿರಾಕರಿಸಿ ಅವರಿಗೆ ಪ್ರತ್ಯೇಕ ವಾಹನ ಒದಗಿಸಬೇಕೆಂದು ಆಗ್ರಹಿಸಿದರು. ನಂತರ ಹೇಗಾದರೂ  ಅವರ ಮನವೊಲಿಸಿ ಅವರ ಜತೆಗೆ ಇಬ್ಬರು ಅಂಗರಕ್ಷಕರನ್ನು ಕಳುಹಿಸಿಕೊಡಲಾಯಿತು'' ಎಂದು ಆಯುಕ್ತರು ತಿಳಿಸಿದ್ದಾರೆ.

ಪ್ರಹ್ಲಾದ್ ಮೋದಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಧರಣಿ ಕುಳಿತಿದ್ದರೆಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News