ತಲೆಮರೆಸಿಕೊಂಡ ಅಭ್ಯರ್ಥಿ ಪರ ಪಕ್ಷದ ನಾಯಕರು, ಕಾರ್ಯಕರ್ತರಿಂದ ಭರ್ಜರಿ ಪ್ರಚಾರ !

Update: 2019-05-15 13:06 GMT
ಅತುಲ್ ರಾಯ್

ಲಕ್ನೋ : ಉತ್ತರ ಪ್ರದೇಶದ ಮವು ಎಂಬಲ್ಲಿ ನಡೆದ ಮಹಾಮೈತ್ರಿ ಕೂಟದ ರ್ಯಾಲಿಯಲ್ಲಿ ಅಭ್ಯರ್ಥಿಯೊಬ್ಬರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ವಾಸ್ತವವಾಗಿ ಘೋಸಿ ಕ್ಷೇತ್ರದ ಬಿಎಸ್‍ಪಿ ಅಭ್ಯರ್ಥಿಯಾಗಿರುವ ಅತುಲ್ ರಾಯ್ ವಿರುದ್ಧ 15 ದಿನಗಳ ಹಿಂದೆ ಅತ್ಯಾಚಾರ ಪ್ರಕರಣ ದಾಖಲಾದಾಗಿನಿಂದ ಅವರು ನಾಪತ್ತೆಯಾಗಿದ್ದಾರೆ.

ಆದರೆ ಅವರ ಬೆಂಬಲಿಗರು ಮಾತ್ರ ಅವರಿಗಾಗಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ ಹಾಗೂ ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಕ್ಕಿಸಿ ಹಾಕಲಾಗಿದೆ ಎಂದು ಹೇಳುತ್ತಿದ್ದಾರೆ.

ಮವು ಎಂಬಲ್ಲಿ ನಡೆದ ರ್ಯಾಲಿಯಲ್ಲಿ ಬಿಎಸ್‍ಪಿ ನಾಯಕಿ ಮಾಯಾವತಿ ಹಾಗೂ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ತಮ್ಮ ಭಾಷಣದಲ್ಲಿ ಅತುಲ್ ರಾಯ್ ಅವರನ್ನು ಆರಿಸುವಂತೆ ಮತದಾರರಿಗೆ ಕರೆ ನೀಡಿದ್ದಾರೆ. ನಾಪತ್ತೆಯಾಗಿರುವ ಅಭ್ಯರ್ಥಿ ಪರ ಪ್ರಚಾರ ನಡೆಸುವಂತೆಯೂ ಇಬ್ಬರೂ ನಾಯಕರೂ ತಮ್ಮ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.

''ಅತುಲ್ ರಾಜ್ ಬಿಜೆಪಿ ಷಡ್ಯಂತ್ರದ ಬಲಿಪಶು'' ಎಂದು ಮಾಯಾವತಿ ವರ್ಣಿಸಿದ್ದಾರಲ್ಲದೆ ''ಅವರ ಮಾನಹಾನಿಗೈಯ್ಯುವ ಉದ್ದೇಶ ಬಿಜೆಪಿಗಿದೆ'' ಎಂದಿದ್ದಾರೆ. ''ಅವರನ್ನು ಆರಿಸಿ ಅವರ ವಿರುದ್ಧದ ಷಡ್ಯಂತ್ರವನ್ನು ಸೋಲಿಸುವುದು ನಮ್ಮ ಜವಾಬ್ದಾರಿಯಾಗಿದೆ'' ಎಂದು ಮಾಯಾವತಿ ರ್ಯಾಲಿಯಲ್ಲಿ ಹೇಳಿದರು.

ಮೇ 1ರಂದು ವಾರಣಾಸಿ ಪೊಲೀಸ್ ಠಾಣೆಯಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ರಾಯ್ ವಿರುದ್ಧ ದೂರು ನೀಡಿದಂದಿನಿಂದ ಅವರು ತಲೆಮರೆಸಿಕೊಂಡಿದ್ದಾರೆ. ಬಂಧನ ತಪ್ಪಿಸಲು ಅವರು ಮಲೇಷ್ಯಾಗೆ ತೆರಳಿದ್ದಾರೆಂದು ಕೆಲ ಮೂಲಗಳು ತಿಳಿಸಿವೆ.

ಮೇ 23ರ ತನಕ ಅವರ ಬಂಧನಕ್ಕೆ ತಡೆಯಾಜ್ಞೆ ವಿಧಿಸಬೇಕು ಎಂದು ರಾಯ್ ವಕೀಲರು ಸುಪ್ರೀಂ ಕೋರ್ಟಿಗೆ ಅಪೀಲು ಸಲ್ಲಿಸಿದ್ದಾರೆ. ಆದರೆ ಚುನಾವಣೆ ಮೇ 19ರಂದು ನಡೆಯಲಿದ್ದರೆ ಮೇ 17ರಂದು ವಿಚಾರಣೆ ನಿಗದಿಯಾಗಿದೆ.  ಸುಪ್ರೀಂ ಕೋರ್ಟಿನ ರಜಾಕಾಲದ ಪೀಠ ವಿಚಾರಣೆ ನಡೆಸಲಿದೆ. ದೂರು ರಾಜಕೀಯ ಪ್ರೇರಿತ ಎಂದು ರಾಯ್ ವಕೀಲರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News