‘ಗೋಡ್ಸೆ ಭಯೋತ್ಪಾದಕ’ ಹೇಳಿಕೆ: ಕಮಲ್ ವಿರುದ್ಧದ ಪಿಐಎಲ್ ತಿರಸ್ಕರಿಸಿದ ಹೈಕೋರ್ಟ್

Update: 2019-05-15 15:13 GMT

ಹೊಸದಿಲ್ಲಿ, ಮೇ 15: ಮಹಾತ್ಮಾ ಗಾಂಧಿ ಅವರನ್ನು ಹಿಂದೂ ಭಯೋತ್ಪಾದಕ ಗೋಡ್ಸೆ ಹತ್ಯೆಗೈದರು ಎಂಬ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಹೇಳಿಕೆ ವಿರೋಧಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಹೈಕೋರ್ಟ್ ಬುಧವಾರ ತಿರಸ್ಕರಿಸಿದ ಹಾಗೂ ಮತ ಲಾಭಕ್ಕಾಗಿ ಧರ್ಮವನ್ನು ದುರ್ಬಳಕೆ ಮಾಡಿಕೊಳ್ಳುವುದಕ್ಕೆ ನಿರ್ಬಂಧ ವಿಧಿಸುವಂತೆ ನಿರ್ದೇಶನ ನೀಡಿದೆ.

 ಕಮಲ್ ಹಾಸನ್ ಅವರ ಹೇಳಿಕೆ ಕುರಿತು ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆಯಂತೆ ಕ್ರಮ ಕೈಗೊಳ್ಳುವುದು ಉಚ್ಚ ನ್ಯಾಯಾಲಯದ ವ್ಯಾಪ್ತಿಗೆ ಹೊರಗಿದೆ. ಆದುದರಿಂದ ಇದನ್ನು ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಜೆ.ಎಸ್ ಸಿಸ್ತಾನಿ ಹಾಗೂ ಜ್ಯೋತಿ ಸಿಂಗ್ ತಿಳಿಸಿದ್ದಾರೆ.

ಕಮಲ್ ಹಾಸನ್ ಅವರ ಹೇಳಿಕೆಯ ವಿರುದ್ಧದ ಉಪಾಧ್ಯಾಯರ ಪ್ರತಿಪಾದನೆಯ ಬಗ್ಗೆ ಕೂಡಲೇ ನಿರ್ಧರಿಸುವಂತೆ ನ್ಯಾಯಾಲಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದೆ.

ಮತ ಪಡೆಯಲು ಧರ್ಮವನ್ನು ಬಳಸುತ್ತಿರುವ ಪಕ್ಷಗಳ ನೋಂದಣಿ ಹಾಗೂ ಅಭ್ಯರ್ಥಿಯ ಅಭ್ಯರ್ಥಿತನವನ್ನು ರದ್ದುಗೊಳಿಸುವಂತೆ ಕೂಡ ಉಪಾಧ್ಯಾಯರು ಮನವಿಯಲ್ಲಿ ಕೋರಿದ್ದರು.

ಚುನಾವಣಾ ಲಾಭಕ್ಕಾಗಿ ಕಮಲ್ ಹಾಸನ್ ಅವರು ಮುಸ್ಲಿಂ ಬಾಹುಳ್ಯವಿರುವ ಸಭೆಯಲ್ಲಿ ಈ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ನೀಡಿದ್ದಾರೆ ಎಂದು ವಕೀಲರು ಕೂಡ ಆಗಿರುವ ಉಪಾಧ್ಯಾಯ ಹೇಳಿದ್ದಾರೆ.

‘ಮಕ್ಕಳ್ ನೀದಿ’ ಮೈಯಮ್ ಪಕ್ಷದ ಅಧ್ಯಕ್ಷರಾಗಿರುವ ಕಮಲ್ ಹಾಸನ್, ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದ ಸಂದರ್ಭ ಭಾಷಣ ಮಾಡುವ ಸಂದರ್ಭ ಮಹಾತ್ಮಾ ಗಾಂಧಿ ಅವರನ್ನು ಹತ್ಯೆಗೈದ ನಾಥುರಾಮ್ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಹಿಂದೂ ಭಯೋತ್ಪಾದಕ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News