ಟೈಮ್ ಮ್ಯಾಗಝಿನ್ ನ ‘ಡಿವೈಡರ್ ಇನ್ ಚೀಫ್’ ಲೇಖನದ ಬಗ್ಗೆ ಮೋದಿ ಪ್ರತಿಕ್ರಿಯೆ…

Update: 2019-05-15 15:18 GMT

ಹೊಸದಿಲ್ಲಿ,ಮೇ 15: ತನ್ನ ಚಿತ್ರವನ್ನು ಹೊಂದಿರುವ ಅಮೆರಿಕದ ಟೈಮ್ ನಿಯತಕಾಲಿಕದ ಮುಖಪುಟದ ಲೇಖನದ ಕುರಿತು ತನ್ನ ಮೌನವನ್ನು ಕೊನೆಗೂ ಮುರಿದಿರುವ ಪ್ರಧಾನಿ ನರೇಂದ್ರ ಮೋದಿ ಅವರು,ತನ್ನ ವ್ಯಕ್ತಿತ್ವಕ್ಕೆ ಕಳಂಕ ತರುವ ಪ್ರಯತ್ನಗಳನ್ನು ಮಾಡುವವರಿಗೇ ಅವು ತಿರುಗುಬಾಣಗಳಾಗಿ ಪರಿಣಮಿಸಿವೆ ಮತ್ತು ಅವರ ಸ್ವಂತ ವ್ಯಕ್ತಿತ್ವಗಳಿಗೆ ಹಾನಿಯನ್ನುಂಟು ಮಾಡಿವೆ ಎಂದು ಹೇಳಿದ್ದಾರೆ.

ಕಳೆದ 20 ವರ್ಷಗಳಿಂದಲೂ ತನ್ನ ವ್ಯಕ್ತಿತ್ವಕ್ಕೆ ಕಳಂಕ ಹಚ್ಚುವ ಪ್ರಯತ್ನಗಳು ನಡೆಯುತ್ತಲೇ ಇವೆ,ಆದರೆ ಅವರ ಪ್ರಯತ್ನಗಳೆಲ್ಲ ವಿಫಲಗೊಂಡಿವೆ. ತನಗೆ ಅವರ ಬಗ್ಗೆ ಮರುಕವೆನಿಸುತ್ತದೆ ಎಂದು ತನ್ನನ್ನು ಭಾರತದ ‘ಡಿವೈಡರ್ ಇನ್ ಚೀಫ್(ಮುಖ್ಯ ವಿಭಜನಕಾರ)’ ಎಂದು ಬಣ್ಣಿಸಿರುವ ಟೈಮ್ ರಕ್ಷಾಪುಟವನ್ನು ಪ್ರಸ್ತಾಪಿಸಿ ಮೋದಿ ಹೇಳಿದರು.

  ಪಾಟ್ನಾದಲ್ಲಿ ರ್ಯಾಲಿಯೊಂದರ ನೇಪಥ್ಯದಲ್ಲಿ ಆಂಗ್ಲ ಸುದ್ದಿವಾಹಿನಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು,ವಿಭಜನೆಯು ‘ಲಂಬವೋ ಅಥವಾ ಅಡ್ಡವೋ’ ಎನ್ನುವುದನ್ನು ತಿಳಿಯಬೇಕಾದ ಅಗತ್ಯವಿದೆ. ವಿಭಜನೆಯಿರುವುದು ಹೌದಾದರೆ ಇಂದು ಬಡವರೆಲ್ಲ ಧ್ರುವೀಕರಣಗೊಂಡಿದ್ದಾರೆ ಮತ್ತು ಮೋದಿ ಜೊತೆಗೆ ಗುರುತಿಸಿಕೊಂಡಿದ್ದಾರೆ. ಬಡವರು ತಮ್ಮ ಸ್ಥಿತಿಯನ್ನು,ಜೊತೆಗೆ ದೇಶದ ಸ್ಥಿತಿಯನ್ನೂ ಉತ್ತಮಗೊಳಿಸಲು ಬಯಸಿದ್ದರೆ ಅದರಲ್ಲಿ ಸಮಸ್ಯೆಯೇನಿದೆ? ಬಡವರು ಜಾತಿ,ಸಮುದಾಯದ ಶೃಂಖಲೆಗಳನ್ನು ಮುರಿದು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಮುಂದೆ ಬಂದರೆ ಜನರೇಕೆ ಅಸಮಾಧಾನಗೊಳ್ಳಬೇಕು ಎಂದು ಪ್ರಶ್ನಿಸಿದರು. ಬಡವರು ತಮ್ಮ ಮಕ್ಕಳ ಭವಿಷ್ಯದಲ್ಲಿ ದೇಶದ ಭವಿಷ್ಯವನ್ನು ಕಾಣುತ್ತಿದ್ದರೆ ನಾವು ಅದಕ್ಕಾಗಿ ಹೆಮ್ಮೆ ಪಟ್ಟುಕೊಳ್ಳಬೇಕು ಎಂದರು.

 ಕಳೆದ 70 ವರ್ಷಗಳಲ್ಲಿ ವೋಟ್ ಬ್ಯಾಂಕ್ ರಾಜಕೀಯದಲ್ಲಿ ತೊಡಗಿದ್ದವರು ಮುಸ್ಲಿಮರಲ್ಲಿ ಭೀತಿಯನ್ನು ಹುಟ್ಟಿಸಿದ್ದರು ಮತ್ತು ಅದರ ಹೊಣೆಯನ್ನು ವಿವಿಧ ವ್ಯಕ್ತಿಗಳಿಗೆ,ಸಂಘಟನೆಗಳಿಗೆ ವರ್ಗಾಯಿಸಿದ್ದರು ಎಂದ ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News