ಬಂಟ್ವಾಳ ತಾಲೂಕಿನಲ್ಲಿ ನಿರೀಕ್ಷಿತ ಪ್ರಮಾಣದ ಪ್ರಗತಿಯಾಗಿಲ್ಲ: ಡಾ. ಸೆಲ್ವಮಣಿ

Update: 2019-05-15 17:31 GMT

ಬಂಟ್ವಾಳ, ಮೇ 15: ತುರ್ತು ಕುಡಿಯುವ ನೀರಿನ ಸಮಸ್ಯೆ ತಾಲೂಕಿನ ಎಲ್ಲೆಲ್ಲಿ ಇದೆಯೋ ಅವುಗಳ ಬಗ್ಗೆ ಗರಿಷ್ಠ ಆದ್ಯತೆ ನೀಡಿ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ ಆರ್. ಹೇಳಿದ್ದಾರೆ.

ಬಂಟ್ವಾಳ ತಾಪಂ ಸಭಾಂಗಣದಲ್ಲಿ ಬುಧವಾರ ಸಂಜೆ ನಡೆದ ತಾಲೂಕು ಮಟ್ಟದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮತ್ತು ಇಲಾಖಾಧಿಕಾರಿಗಳ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು. ಜೂನ್ 1ರಂದು ಮಳೆ ಶುರುವಾಗುವ ಮೊದಲು ಸಿದ್ಧತೆಗಳನ್ನೂ ನಡೆಸಬೇಕು. ಯಾವುದೇ ದೂರುಗಳು ಬಾರದಂತೆ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.

ಪಂಚಾಯತ್‍ಗೆ ಮೂರು ವೆಂಟೆಡ್ ಡ್ಯಾಂ:

ಪ್ರತಿಯೊಂದು ಬೋರ್ ವೆಲ್ ರೀಚಾರ್ಜ್ ಆಗಬೇಕು. ಪ್ರತಿಯೊಂದು ಪಂಚಾಯತ್‍ನಲ್ಲಿ ವೆಂಟೆಡ್ ಡ್ಯಾಂ ಕನಿಷ್ಠ ಮೂರು ನಿರ್ಮಾಣವಾಗುವಂತೆ ಪಿಡಿಒಗಳು ಕ್ರಮ ವಹಿಸಬೇಕು. ವಾರದೊಳಗೆ ಪ್ರತಿ ಪಂಚಾಯತ್‍ಗಳ ಪಿಡಿಒಗಳು 10 ಹೊಸ ಕೆಲಸಗಳನ್ನು ಗುರುತಿಸಿ ಈ ಕುರಿತು ಕಾರ್ಯಪ್ರವೃತ್ತರಾಗಬೇಕು ಎಂದು ಸೆಲ್ವಮಣಿ ಅವರು ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು.

ಪ್ರಗತಿ ಹಿನ್ನಡೆ-ಪಿಡಿಒಗಳ ವಿರುದ್ಧ ಗರಂ:

ನರೇಗಾ ಸಹಿತ ಒಟ್ಟಾರೆಯಾಗಿ ತಾಲೂಕಿನ ಪ್ರಗತಿಯಲ್ಲಿ ಹಿನ್ನಡೆಯಾಗಿರುವ ಬಗ್ಗೆ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ ಹಾಗೂ ಉಪಕಾರ್ಯದರ್ಶಿ ಮಹೇಶ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ನರೇಗ ಯೋಜನೆಯಡಿ ಪಂಚಾಯತ್ ವ್ಯಾಪ್ತಿಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ವರದಿ ಪಡೆದರು. ಮಳೆಗಾಲ ಬಂದಾಗ ಬಾವಿ ತೋಡಲು ಆಗುವುದಿಲ್ಲ. ತಾಲೂಕಿನ ಪಿಡಿಒಗಳು ಸಾಧನೆಯಲ್ಲಿ ಹಿಂದುಳಿದಿದ್ದು, ಇದಕ್ಕೆ ಕೆಲಸದ ಕುರಿತ ದೂರದೃಷ್ಟಿಯ ಕೊರತೆ ಇದೆ ಎಂದರು.

ಜಿಲ್ಲೆಯ ಬೇರೆ ತಾಲೂಕುಗಳಿಗೆ ಹೋಲಿಸಿದರೆ ಬಂಟ್ವಾಳ ತಾಲೂಕಿನಲ್ಲಿ ನಿರೀಕ್ಷಿತ ಪ್ರಮಾಣದ ಪ್ರಗತಿ ನಡೆದಿಲ್ಲ, ಪ್ರಗತಿ ಕಾಮಗಾರಿಗಳ ಬಗ್ಗೆ ಸರಿಯಾದ ಯೋಜನೆ ರೂಪಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶೇ.50ಕ್ಕಿಂತಲೂ ಕಡಿಮೆ ಪ್ರಗತಿ:

19 ಗ್ರಾಮ ಪಂಚಾಯಿತಿಗಳು ಶೇ.50ಕ್ಕಿಂತಲೂ ಕಡಿಮೆ ಪ್ರಗತಿ ಸಾಧಿಸಿದ್ದು, ಪ್ರತೀ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಪ್ರಗತಿ ಹಿನ್ನಡೆಯಾಗಿರುವ ಬಗ್ಗೆ ಕಾರಣ ತಿಳಿದುಕೊಂಡ ಅವರು, ದ.ಕ. ಜಿಲ್ಲೆಯಲ್ಲಿ ಮಂಗಳೂರು ಶೇ.79, ಬಂಟ್ವಾಳ, ಬೆಳ್ತಂಗಡಿ ಶೇ.35, ಸುಳ್ಯ, ಪುತ್ತೂರು ಶೇ. 45 ಪ್ರಗತಿ ಸಾಧಿಸಿದೆ ಎಂದರು.

ಬಂಟ್ವಾಳ ತಾಲೂಕಿನ 58 ಗ್ರಾಪಂಗಳ ಪೈಕಿ 51 ಗ್ರಾಪಂಗಳಲ್ಲಿ ಮಾತ್ರ ಅಭಿವೃದ್ಧಿ ಕಾರ್ಯಗಳಾಗಿದೆ. ಉಳಿದ ಏಳು ಗ್ರಾಮ ಪಂಚಾಯತ್‍ ಗಳಾದ ಅಮ್ಮುಂಜೆ, ಬೋಳಂತೂರು, ಕರಿಯಂಗಳ, ಮೇರಮಜಲು, ನೆಟ್ಲಮುಡ್ನೂರು, ಸಜೀಪಮುನ್ನೂರು, ಸಜೀಪ ಪಡು ಗ್ರಾಪಂಗಳಲ್ಲಿ ನೀರಿಕ್ಷಿತ ಪ್ರಮಾಣದ ಪ್ರಗತಿ ಆಗಿಲ್ಲ ಎಂದು ಗರಂ ಆದ ಸಿಇಒ, ಒಂದು ವಾರದೊಳಗಾಗಿ 10 ಹೊಸ ಕಾಮಗಾರಿಗಳನ್ನು ಗುರುತಿಸಿ ಜಿಲ್ಲಾ ಪಂಚಾಯತ್‍ಗೆ ವರದಿ ನೀಡುವಂತೆ ಪಿಡಿಒಗಳಿಗೆ ಸೂಚಿಸಿದರು. 

ಅಪೂರ್ಣ ಚೆಕ್‍ಡ್ಯಾಂಗಳ ಕಾಮಗಾರಿ ಪೂರ್ಣಗೊಳಿಸಿ:

ಅಪೂರ್ಣವಾಗಿರುವ ಚೆಕ್‍ಡ್ಯಾಂಗಳ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. 36 ಅಂಗನವಾಡಿ ಕಟ್ಟಡಗಳ ಪೈಕಿ 29 ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣವಾಗಿದೆ. ನೀರಿನ ಸಮಸ್ಯೆಯಿಂದ ಕಟ್ಟಡ ನಿರ್ಮಾಣ ಬಾಕಿ ಉಳಿದಿರುವ ಅಂಗನವಾಡಿ ಕೇಂದ್ರಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಿ ನಿರ್ಮಾಣ ಕಾರ್ಯ ಪೂರ್ಣಗೊಳಿಸುವಂತೆ ಡಾ. ಸೆಲ್ವಮಣಿ ಇಲಾಖಾಧಿಕಾರಿಗಳಿಗೆ ಸೂಚಿಸಿದರು.

ಅಂಗನವಾಡಿ ಕಟ್ಟುತ್ತಿದ್ದಿರೋ ಅರಮನೆ ಕಟ್ಟುತ್ತಿದ್ದಿರೋ?:

2016-17ನೇ ಸಾಲಿನಲ್ಲಿ ಆರಂಭಗೊಂಡ ಅಂಗನವಾಡಿ ಕೇಂದ್ರದ ನಿರ್ಮಾಣಗೊಂಡ ಅಂಗನವಾಡಿ ಕೇಂದ್ರ ಇನ್ನೂ ಪೂರ್ಣಗೊಳ್ಳದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಅಂಗನವಾಡಿ ಕಟ್ಟುತ್ತಿದ್ದಿರೋ ಅರಮನೆ ಕಟ್ಟುತ್ತಿದ್ದಿರೋ? ಎಂದು ಗರಂ ಆದರು. 

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಹೇಶ್, ನೆರವು ಘಟಕದ ಮಂಜುಳಾ, ತಾಪಂ ಕಾರ್ಯನಿರ್ವಾಹಣಾಧಿಕಾರಿ ಉಪಸ್ಥಿತರಿದ್ದರು. ಅರಣ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ಪಶುಸಂಗೋಪನ ಇಲಾಖೆ,  ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಹಾಗೂ ಪಂಚಾಯತ್ ಪಿಡಿಒಗಳು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News