ಸಶಸ್ತ್ರ ಪಡೆಗಳ ವಿಶೇಷ ಕಾರ್ಯಾಚರಣೆ ವಿಭಾಗದ ಮೊದಲ ಮುಖ್ಯಸ್ಥರಾಗಿ ಮೇ.ಜ.ಎ.ಕೆ.ಧಿಂಗ್ರಾ ನೇಮಕ

Update: 2019-05-15 17:32 GMT

 ಹೊಸದಿಲ್ಲಿ,ಮೇ 15: ವಿಶೇಷ ಪಡೆಗಳ ಕಾರ್ಯಾಚರಣೆ ತಜ್ಞ ಹಾಗೂ ಶ್ರೀಲಂಕಾ ಯುದ್ಧದ ಅನುಭವಿ ಮೇ.ಜ.ಎ.ಕೆ.ಧಿಂಗ್ರಾ ಅವರನ್ನು ದೇಶದಲ್ಲಿ ಮೊದಲ ಬಾರಿಗೆ ಅಸ್ತಿತ್ವಕ್ಕೆ ಬಂದಿರುವ ಸಶಸ್ತ್ರ ಪಡೆಗಳ ವಿಶೇಷ ಕಾರ್ಯಾಚರಣೆಗಳ ವಿಭಾಗದ ಪ್ರಪ್ರಥಮ ಕಮಾಂಡರ್ ಆಗಿ ನೇಮಕಗೊಳಿಸಲಾಗಿದೆ. ಈ ವಿಭಾಗವು ಮೂರೂ ಸಶಸ್ತ್ರಪಡೆಗಳ ಕಮಾಂಡೊಗಳನ್ನೊಳಗೊಂಡಿದೆ.

ಮೂರೂ ಸಶಸ್ತ್ರ ಪಡೆಗಳಿಂದ ಜಂಟಿ ಕಾರ್ಯಾಚರಣೆಗಳನ್ನು ನಡೆಸಲು ಸಶಸ್ತ್ರ ಪಡೆಗಳ ವಿಶೇಷ ಕಾರ್ಯಾಚರಣೆಗಳ ವಿಭಾಗವನ್ನು ಸರಕಾರವು ಸ್ಥಾಪಿಸಿದ್ದು,ಸೇನೆಯ ಪ್ಯಾರಾಚೂಟ್ ರೆಜಿಮೆಂಟ್ಸ್ ವಿಶೇಷ ಪಡೆ,ನೌಕಾಪಡೆಯ ಮಾರ್ಕೋಸ್ ಮತ್ತು ವಾಯುಪಡೆಯ ಗರುಡ ಕಮಾಂಡೊಗಳು ನೂತನ ವಿಭಾಗದಲ್ಲಿದ್ದಾರೆ.

  ಮೇ.ಜ.ಧಿಂಗ್ರಾ ಅವರು ವಿಶೇಷ ಪಡೆಗಳ ಹಿರಿಯ ಅನುಭವಿಯಾಗಿದ್ದು,ಅತ್ಯುತ್ಕೃಷ್ಟ 1 ಪ್ಯಾರಾ ಸ್ಪೆಷಲ್ ಫೋರ್ಸ್‌ಸ್ ರೆಜಿಮೆಂಟ್‌ಗೆ ಸೇರಿದವರಾಗಿದ್ದಾರೆ. ಅವರು ಅಮೆರಿಕದಲ್ಲಿ ವಿಶೇಷ ಕಾರ್ಯಾಚರಣೆಗಳ ಕುರಿತು ತರಬೇತಿಯನ್ನು ಪಡೆದಿದ್ದಾರೆ. ಶ್ರೀಲಂಕಾದಲ್ಲಿ ಭಾರತೀಯ ಶಾಂತಿಪಾಲನಾ ಪಡೆಯ ಭಾಗವಾಗಿದ್ದ ಅವರು,ನಿಜವಾದ ಕಾಳಗವನ್ನು ಅತ್ಯಂತ ಹತ್ತಿರದಿಂದ ನೋಡಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿದವು.

ನೂತನ ವಿಭಾಗವು ಸಶಸ್ತ್ರ ಪಡೆಗಳ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್‌ನ ಅಧೀನದಲ್ಲಿ ಕಾರ್ಯಾಚರಿಸಲಿದ್ದು,ಆಗ್ರಾ ಅಥವಾ ಬೆಂಗಳೂರಿನಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೊಂದಲಿದೆ ಎಂದು ಅವು ಹೇಳಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News