ಆತ್ಮಹತ್ಯೆಗೆ ಯತ್ನಿಸಿದ್ದ ನಾಪತ್ತೆಯಾದ ಮೀನುಗಾರನ ಸಹೋದರ ಮೃತ್ಯು

Update: 2019-05-16 14:34 GMT
ಚಂದ್ರಶೇಖರ್ 

ಉಡುಪಿ, ಮೇ 16: ಸುವರ್ಣ ತ್ರಿಭುಜ ಬೋಟು ಅವಘಡದಲ್ಲಿ ನಾಪತ್ತೆ ಯಾಗಿದ್ದ ಅಣ್ಣ ರಮೇಶ್ ಮೊಗೇರನ ಚಿಂತೆಯಲ್ಲಿ ಮಾನಸಿಕವಾಗಿ ನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ತಮ್ಮ ಚಂದ್ರಶೇಖರ್ ಮೊಗೇರ (30) ಮೇ 16ರಂದು ಬೆಳಗ್ಗೆ 10:30ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಆರು ದಿನಗಳ ಹಿಂದೆ ಇಲಿಗೆ ಸಂಬಂಧಿಸಿದ ಮಾರಕ ವಿಷವನ್ನು ಸೇವಿಸಿ ಅಸ್ವಸ್ಥಗೊಂಡಿದ್ದ ಚಂದ್ರಶೇಖರ್ ಮೊಗೇರ ಎರಡು ದಿನಗಳ ಕಾಲ ಜೀವನ್ಮರಣದ ಮಧ್ಯೆ ಹೋರಾಟ ನಡೆಸಿ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಭಟ್ಕಳದ ಬಂದರ್ ರಸ್ತೆಯ ಶನಿಯಾರ ಮೊಗೇರ ದುರ್ಘಟನೆಗೆ ಸಂಬಂಧಿಸಿದಂತೆ ನಾಪತ್ತೆಯಾದ ರಮೇಶ್ ಸೇರಿದಂತೆ ತನ್ನಿಬ್ಬರು ಮಕ್ಕಳನ್ನು ಕಳೆದುಕೊಂಡಿದ್ದಾರೆ.

‘ಮೂರು ದಿನಗಳ ಕಾಲ ಚಿಕಿತ್ಸೆ ನೀಡಿದ ನಂತರ ವೈದ್ಯರು ಇಂದು ಬೆಳಗ್ಗೆ 10:30ರ ಸುಮಾರಿಗೆ ಚಂದ್ರಶೇಖರ್ ಮೃತಪಟ್ಟಿರುವುದಾಗಿ ಘೋಷಿಸಿದರು. ವೈದ್ಯರು ಸಾಕಷ್ಟು ಪ್ರಯತ್ನ ಪಟ್ಟಿದ್ದರೂ ಅಣ್ಣನನ್ನು ಉಳಿಸಿಕೊಳ್ಳಲು ಸಾಧ್ಯ ವಾಗಿಲ್ಲ. ಮೃತದೇಹವನ್ನು ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಜೆ ವೇಳೆ ಮನೆಗೆ ತೆಗೆದುಕೊಂಡು ಹೋಗಿದ್ದೇವೆ’ ಎಂದು ಮೃತರ ಸಹೋದರ ನಾಗರಾಜ್ ಮೊಗೇರ ಪತ್ರಿಕೆಗೆ ತಿಳಿಸಿದ್ದಾರೆ.

20 ಬಾಟಲಿ ರಕ್ತ ನೀಡಲಾಗಿತ್ತು: ತಾನೇ ಅಂಗಡಿಗೆ ಹೋಗಿ ಖರೀದಿಸಿ ತಂದಿದ್ದ ವಿಷವನ್ನು ಮನೆಯವರಿಗೆ ತಿಳಿಯುವ ಮೂರು ದಿನಗಳ ಮೊದಲೇ ಸೇವಿಸಿದ ಪರಿಣಾಮ ಚಂದ್ರಶೇಖರ್ ಮೊಗೇರ ಅವರ ಲೀವರ್‌ಗೆ ಹಾನಿಯಾಗಿತ್ತು. ಮೇ 13ರಂದು ಸಂಜೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಾಗಿದ್ದ ಚಂದ್ರಶೇಖರ್ ಅವರ ದೇಹಸ್ಥಿತಿ ಚಿಂತಾಜನಕವಾಗಿತ್ತು.

‘ಮೊದಲ ದಿನ ಚಂದ್ರಶೇಖರ್ ಮಾತನಾಡುತಿದ್ದರೂ ಆತನ ದೇಹದೊಳಗೆ ರಕ್ತಸ್ರಾವ ತೀವ್ರವಾಗಿ ಆಗುತ್ತಿತ್ತು. ಮೂರು ದಿನ ಒಟ್ಟು 20 ಬಾಟಲಿ ರಕ್ತ ನೀಡಲಾಗಿತ್ತು. ಇಂದು ಹೃದಯ ಬಡಿತ ತೀರಾ ಕಡಿಮೆಯಾಗಿತ್ತು. ಲೀವರ್ ಮತ್ತು ಕಿಡ್ನಿಗೂ ತುಂಬಾ ಹಾನಿ ಉಂಟಾಗಿತ್ತು. ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ’ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್ ತಿಳಿಸಿದ್ದಾರೆ.

‘ಪೆಸ್ಟ್ ತರಹದ ವಿಷವನ್ನು ಸ್ವಲ್ಪ ಸ್ವಲ್ಪ ತಿಂದ ಪರಿಣಾಮ ನಮಗೆ ಗೊತ್ತಾಗಲಿಲ್ಲ. ಮೂರು ದಿನಗಳ ಬಳಿಕ ಆತ ಮನೆಯ ಶೌಚಾಲಯದಲ್ಲಿ ಕುಸಿದು ಬಿದ್ದನು. ಆಗ ನಾವು ಅವನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿದೆವು. ಅಲ್ಲಿ ಆತ ವಿಷ ಸೇವಿಸಿರುವ ವಿಷಯ ತಿಳಿದು ಬಂತು. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು. ಆದರೆ ಅದಾಗಲೇ ತುಂಬಾ ವಿಳಂಬವಾಗಿರುವುದರಿಂದ ನಾವು ಆತನನ್ನು ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ದಾಖಲಿಸಿದೆವು.’ ಎಂದು ಮೃತರ ಅಕ್ಕನ ಗಂಡ ಶ್ರೀಧರ್ ತಿಳಿಸಿದ್ದಾರೆ.

ಮಲ್ಪೆಯಲ್ಲೂ ವೃತ್ತಿ ಮಾಡುತ್ತಿದ್ದ:  ಶನಿಯಾರ ಮೊಗೇರ ಅವರಿಗೆ ಐವರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಲ್ಲಿದ್ದು, ಇವರಲ್ಲಿ ಇಬ್ಬರು ಹೆಣ್ಣು ಮಕ್ಕಳು ಹಾಗೂ ಹಿರಿಯ ಮಗನಿಗೆ ಮದುವೆಯಾಗಿದೆ. ಉಳಿದಂತೆ ರಮೇಶ್, ಚಂದ್ರಶೇಖ್ ಸೇರಿದಂತೆ ಎಲ್ಲರು ಅವಿವಾಹಿತರು.

ಶನಿಯಾರ ಮೊಗೇರ ಅವರು ಕೂಡ ಸ್ಥಳೀಯವಾಗಿ ದೋಣಿಯಲ್ಲಿ ಮೀನು ಗಾರಿಕೆ ಮಾಡುತ್ತಿದ್ದರು. ಮಗ ನಾಪತ್ತೆಯಾದ ನಂತರ ಮೀನುಗಾರಿಕೆ ನಡೆಸದೆ ಮನೆಯಲ್ಲೇ ಇದ್ದರು. ಮೃತ ಚಂದ್ರಶೇಖರ್ ಕೂಡ ದೋಣಿಯಲ್ಲಿ ಮೀನು ಗಾರಿಕೆ ಮಾಡುತ್ತಿದ್ದರು. ಸ್ಥಳೀಯವಾಗಿ ಮೀನು ಸಿಗದಿದ್ದಾಗ ಚಂದ್ರಶೇಖರ್ ಮಲ್ಪೆಯಲ್ಲಿ ಇತರರ ಬೋಟಿನಲ್ಲಿ ಮೀನುಗಾರಿಕೆಗೆ ತೆರಳುತ್ತಿದ್ದರು.

ಡಿ.13ರಂದು ಸುವರ್ಣ ತ್ರಿಭುಜ ಬೋಟಿನಲ್ಲಿ ಸಹೋದರ ರಮೇಶ್ ನಾಪತ್ತೆಯಾದ ನಂತರ ಚಂದ್ರಶೇಖರ್ ಕೆಲಸಕ್ಕೆ ಹೋಗದೆ ಮನೆಯಲ್ಲೇ ಉಳಿದು ಕೊಂಡಿದ್ದರು. ಸಹೋದರನ ಅಗಲಿಕೆಯಿಂದ ಚಂದ್ರಶೇಖರ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.

‘ಮನೆ ಮಗ ರಮೇಶ್ ನಾಪತ್ತೆಯಾಗಿರುವ ಬಗ್ಗೆ ತಂದೆ ತಾಯಿ ಹಾಗೂ ಮನೆಯವರು ತುಂಬಾ ಟೆನ್ಶನ್‌ನಲ್ಲಿ ಇದ್ದರು. ಇದರ ಮಧ್ಯೆ ಇನ್ನೊಂದು ಸಾವು ಸಂಭವಿಸಿದೆ. ಈಗಾಗಲೇ ತಾಯಿ ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಿ ದ್ದಾರೆ. ಚಂದ್ರಶೇಖರ್ ಕೂಡ ಅಣ್ಣನ ವಿಚಾರದಲ್ಲಿ ಬಹಳ ಟೆನ್ಶನ್‌ನಲ್ಲಿ ಇದ್ದರು. ಇದೇ ಕಾರಣಕ್ಕೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಮೃತರ ದೊಡ್ಡಪ್ಪನ ಮಗ ಲೋಕೇಶ್ ತಿಳಿಸಿದ್ದಾರೆ

ಈ ಸಾವಿಗೆ ಯಾರು ಹೊಣೆ: ಕುಟುಂಬದ ಪ್ರಶ್ನೆ

ಸುವರ್ಣ ತ್ರಿಭುಜ ಬೋಟಿನಲ್ಲಿ ನಾಪತ್ತೆಯಾಗಿರುವ ಏಳು ಮಂದಿ ಮೀನು ಗಾರರನ್ನು ಈವರೆಗೂ ಪತ್ತೆ ಮಾಡದ ಬಗ್ಗೆ ಮೀನುಗಾರ ಕುಟುಂಬಸ್ಥರು ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ರಮೇಶ್ ನಾಪತ್ತೆಯಾದ ನಂತರ ಆತನ ತಾಯಿ ಸರಿಯಾಗಿ ಊಟ ಕೂಡ ಮಾಡುತ್ತಿಲ್ಲ. ಮನೆಯ ಪರಿಸ್ಥಿತಿ ಹೇಳಲು ಸಾಧ್ಯವಿಲ್ಲ. ಮಲ್ಪೆಯ ಎರಡು ಕುಟುಂಬಗಳು ಬಿಟ್ಟರೆ ನಾವು ಯಾರು ಪರಿಹಾರದ ಕರಾರು ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂದು ಮೃತರ ಭಾವ ಶ್ರೀಧರ್ ತಿಳಿಸಿದರು.

ನಾಪತ್ತೆಯಾಗಿರುವ ಒಟ್ಟು ಏಳು ಕುಟುಂಬಗಳ ಪೈಕಿ ನಮ್ಮ ಕುಟುಂಬದಲ್ಲಿ ಒಂದರ ಹಿಂದೆ ಒಂದು ಸಾವು ಸಂಭವಿಸುತ್ತಿದೆ. ಇನ್ನು ಆರು ಕುಟುಂಬಗಳಿವೆ. ಸರಕಾರ ಪರಿಹಾರ ಹಣ ನೀಡುತ್ತದೆ. ಆದರೆ ನಮ್ಮವರ ಜೀವ ಮರಳಿ ಬರಲು ಸಾಧ್ಯವೇ. ಸರಕಾರ ಇನ್ನು ಆರು ಕುಟುಂಬಗಳಿಗೆ ಏನು ವ್ಯವಸ್ಥೆ ಮಾಡುತ್ತದೆ. ಎಲ್ಲರನ್ನು ಹಿಡಿದು ಇಟ್ಟಿಕೊಳ್ಳಲು ಅವರಿಗೆ ಆಗುತ್ತದೆಯೇ. ಇದಕ್ಕೆಲ್ಲ ಯಾರು ಹೊಣೆ ಎಂದು ಅವರು ಪ್ರಶ್ನಿಸಿದರು.

‘ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋಗುವವರೆಗೂ ತಂದೆ ತಾಯಿಗೆ ಈ ವಿಚಾರ ತಿಳಿಸಿಲ್ಲ. ಇಬ್ಬರು ಸಹೋದರರನ್ನು ನಾವು ಕಳೆದು ಕೊಂಡಿದ್ದೇವೆ. ಇದರಿಂದ ಇಡೀ ಕುಟುಂಬ ಅನಾಥವಾಗಿದೆ. ರಕ್ತ, ಔಷಧಿ ಸೇರಿದಂತೆ ಆಸ್ಪತ್ರೆಯಲ್ಲಿ ಸುಮಾರು ಒಂದು ಲಕ್ಷ ರೂ.ಗೂ ಅಧಿಕ ಖರ್ಚಾಗಿದೆ. ವೈದ್ಯರು ಆಸ್ಪತ್ರೆಯ ಬಿಲ್‌ನಲ್ಲಿ ಸ್ವಲ್ಪ ರಿಯಾಯಿತಿ ಮಾಡಿದ್ದಾರೆ. ಉಡುಪಿಗೆ ನಮ್ಮ ಕುಟುಂಬಸ್ಥರು ಹಾಗೂ ಊರವರೆಲ್ಲ ಬಂದಿದ್ದರು’
-ನಾಗರಾಜ್ ಮೊಗೇರ, ಮೃತ ಚಂದ್ರಶೇಖರ್ ಸಹೋದರ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News