ಉಡುಪಿ: ವಿಕೋಪ ನಿರ್ವಹಣಾ ಯೋಜನೆ ಪರಿಷ್ಕರಣೆಗೆ ಕಾರ್ಯಾಗಾರ

Update: 2019-05-16 15:26 GMT

ಉಡುಪಿ, ಮೇ 16: ಉಡುಪಿ ಜಿಲ್ಲಾ ವಿಕೋಪ ನಿರ್ವಹಣಾ ಯೋಜನೆಯ ಪರಿಷ್ಕರಿಣೆಗಾಗಿ, ಆಡಳಿತ ತರಬೇತಿ ಸಂಸ್ಥೆಯ ರಾಜ್ಯ ವಿಕೋಪ ನಿರ್ವಹಣಾ ಕೇಂದ್ರದ ವತಿಯಿಂದ ಕಾರ್ಯಾಗಾರವೊಂದು ಮಣಿಪಾಲದಲ್ಲಿರುವ ಉಡುಪಿ ಜಿಪಂ ಸಭಾಂಗಣದಲ್ಲಿ ಗುರುವಾರ ನಡೆಯಿತು.

ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧು ಬಿ.ರೂಪೇಶ್, ವಿಕೋಪ ನಿರ್ವಹಣೆಯಲ್ಲಿ ಪ್ರತಿಯೊಂದು ಇಲಾಖೆಯ ಪಾತ್ರ ಬಹು ಮುಖ್ಯ. ಜಿಲ್ಲಾ ಮಟ್ಟದಲ್ಲಿ ವಿಕೋಪ ಗಳನ್ನು ಯಶಸ್ವಿಯಾಗಿ ನಿರ್ವಹಿಸಬೇಕಾದರೆ ಜಿಲ್ಲಾ ಮಟ್ಟದ ವಿಕೋಪ ನಿರ್ವಹಣಾ ಯೋಜನೆ ಅತ್ಯಗತ್ಯ. ಜಿಲ್ಲಾ ಮಟ್ಟದ ಯೋಜನೆಯನ್ನು ಪ್ರತೀ ವರ್ಷ ಪರಿಷ್ಕರಣೆಗೊಳಿಸಬೇಕು. ವಿಕೋಪ ನಿರ್ವಹಣಾ ಕಾಯಿದೆ-2005 ರಂತೆ ಪ್ರತಿಯೊಬ್ಬರು ತಮ್ಮ ತಮ್ಮ ಜವಾಬ್ದಾರಿಗಳನ್ನು ಗುರುತಿಸಿಕೊಂಡು ವಿಕೋಪ ನಿರ್ವಹಣೆಯನ್ನು ನಿಭಾಯಿಸಬೇಕಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮಾತನಾಡಿ, ಎಲ್ಲಾ ಇಲಾಖೆಗಳ ವ್ಯವಸ್ಥಿತವಾದ ಮಾಹಿತಿಯನ್ನು ವಿಕೋಪ ನಿರ್ವಹಣೆಗಾಗಿ ಕ್ರೋಢೀಕರಿಸಿ ಕೊಳ್ಳಬೇಕು. ವಿಕೋಪ ಸಂದರ್ಭದಲ್ಲಿ ಸೂಕ್ತ ರೀತಿಯ ಸ್ಪಂದನೆಯನ್ನು ತೋರಿಸಬೇಕು. ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಇಲಾಖಾ ಮಟ್ಟದ ಸ್ಪಂದನಾ ಯೋಜನೆಯನ್ನು ರೂಪಿಸಿ ಜಿಲ್ಲಾ ವಿಕೋಪ ನಿರ್ವಹಣೆ ಯೋಜನೆ ಪರಿಷ್ಕರಣೆಯಲ್ಲಿ ಅಳವಡಿಸಬೇಕು ಎಂದು ತಿಳಿಸಿದರು.

ಆಡಳಿತ ತರಬೇತಿ ಸಂಸ್ಥೆಯ ವಿಕೋಪ ನಿರ್ವಹಣಾ ಕೇಂದ್ರದ ಬೋಧಕ ರಾದ ಡಾ.ಪರಮೇಶ್ ಜೆ.ಆರ್. ಎರಡು ದಿನಗಳ ಕಾರ್ಯಗಾರದ ಸಂಯೋಜಕರಾಗಿ, ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆಯಲ್ಲಿ ವಿಪತ್ತು ತಡೆಗಟ್ಟುವಿಕೆ, ವಿಪತ್ತು ಬಂದ ಸಂದರ್ಭದಲ್ಲಿ ಸೂಕ್ತ ಸ್ಪಂದನೆ ಹಾಗೂ ಪುನರ್ ವಸತಿ ಸಂದರ್ಭದಲ್ಲಿ ಯೋಜನೆ ಹೇಗೆ ಉಪಯುಕ್ತವಾಗುತ್ತದೆ ಎಂಬ ಬಗ್ಗೆ ಮಾಹಿತಿಗಳನ್ನು ನೀಡಿದರು.

ಮಾಹಿತಿಗಳನ್ನು ಹೇಗೆ ಕ್ರೋಢಿಕರಿಸಬೇಕು, ವಿಪತ್ತು ಯೋಜನೆ ಸಿದ್ಧಪಡಿಸುವ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅಪಾಯಗಳ, ಜಿಲ್ಲಾ ಮಟ್ಟದ ದುರ್ಬಲತೆ ಹಾಗೂ ಜಿಲ್ಲಾ ಮಟ್ಟದ ಸಾಮರ್ಥ್ಯಗಳನ್ನು ಗುರುತಿಸಿಕೊಂಡು ಇವುಗಳ ಆಧಾರದ ಮೇಲೆ ಇವನ್ನು ಹೇಗೆ ನಿರ್ವಹಿಸಬೇಕು, ಸ್ಪಂಧಿಸಬೇಕು ಹಾಗೂ ಪುನರ್‌ವಸತಿ ಯೋಜನೆಗಳನ್ನು ರೂಪಿಸಬೇಕೆಂಬ ಬಗ್ಗೆ ನಿರ್ಧರಿಸಬೇಕು ಎಂದರು.

ರಾಷ್ಟ್ರೀಯ ವಿಕೋಪ ನಿರ್ವಹಣಾ ಪ್ರಾಧಿಕಾರ ವಿಪತ್ತು ನಿರ್ವಹಣಾ ಯೋಜನೆಗೆ ಸಿದ್ದಪಡಿಸಿರುವ ಮಾರ್ಗದರ್ಶಿ ಸೂತ್ರದ ಆಧಾರದ ಮೇಲೆ ಸೂಕ್ತ ನಮೂನೆಗಳನ್ನು ಕಾರ್ಯಗಾರದಲ್ಲಿ ಪರಿಚಯಿಸಿದರು. ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್), ಮಾಹಿತಿ ದೂರ ಸಂವೇದಿಯನ್ನು (ಜಿಐಎಸ್ ಮತ್ತು ರಿಮೋಟ್ ಸೆನ್ಸಿಂಗ್) ಸೂಕ್ತ ರೀತಿಯಲ್ಲಿ ಬಳಸಿಕೊಂಡರೆ ವಿಪತ್ತು ನಿರ್ವಹಣೆ ಯೋಜನೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಮಟ್ಟದ ಕಂದಾಯ, ಪೋಲೀಸ್, ಅಗ್ನಿಶಾಮಕ, ಗೃಹರಕ್ಷಕ, ಕರಾವಳಿ ಕಾವಲು ಪಡೆ, ಆರೋಗ್ಯ, ಗಣಿ ಮತ್ತು ಭೂವಿಜ್ಞಾನ, ಮೀನುಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದಿ,್ಧ ಅರಣ್ಯ, ಗ್ರಾಮಿಣಾಭಿವೃದ್ದಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕೃಷಿ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ನೀರಾವರಿ ಇಲಾಖೆ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಮೆಸ್ಕಾಂ ಮುಂತಾದ ‘ಎ’ ಮತ್ತು ‘ಬಿ’ ವರ್ಗದ ಸುಮಾರು 45 ಅಧಿಕಾರಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ.

ಉಡುಪಿ ಜಿಲ್ಲಾ ವಿಕೋಪ ನಿರ್ವಹಣಾ ತಜ್ಞ ರವಿ ಓಜನಹಳ್ಳಿ ಪ್ರತಿ ಇಲಾಖೆಯ ಮಾಹಿತಿ, ಜವಾಬ್ದಾರಿ ಹಾಗೂ ಯೋಜನೆಗಳನ್ನು ಸಂಗ್ರಹಿಸಿ, ಕ್ರೋಡೀಕರಿಸಿ ಜಿಲ್ಲೆಯ ಪ್ರತೀ ಇಲಾಖೆ ಹಾಗೂ ಸರ್ಕಾರೇತರ ಸಂಸ್ಥೆಗಳಿಗೆ ತಲುಪಿಸುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News