ತಲಾಕ್: ಮುಸ್ಲಿಂ ಮಹಿಳೆಯ ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ

Update: 2019-05-16 15:37 GMT

ಹೊಸದಿಲ್ಲಿ, ಮೇ 16: ತನ್ನ ಪತಿ ತನಗೆ ಎರಡು ತಲಾಖ್ ನೋಟಿಸ್‌ಗಳನ್ನು ನೀಡಿರುವುದನ್ನು ಪ್ರಶ್ನಿಸಿ ಮುಸ್ಲಿಂ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಗುರುವಾರ ಸಮ್ಮತಿಸಿದೆ. ಶುಕ್ರವಾರ ಪ್ರಕರಣದ ಆಲಿಕೆ ನಡೆಸುವುದಾಗಿ ಅದು ಹೇಳಿದೆ.

 ಮಹಿಳೆಯು 9 ವರ್ಷಗಳ ಹಿಂದೆ ವಿವಾಹವಾಗಿದ್ದು, ಆಕೆಯ ಪತಿಯು ವಿಚ್ಛೇದನ ಕೋರಿ, ಆಕೆಗೆ ಮಾರ್ಚ್ 25 ಹಾಗೂ ಮೇ 7ರಂದು ನೋಟಿಸ್ ಕಳುಹಿಸಿದ್ದಾರೆಂದು ಸಂತ್ರಸ್ತೆಯ ಪರ ವಕೀಲ ಎಂ.ಎಂ. ಕಶ್ಯಪ್ ನ್ಯಾಯಾಲಯಕ್ಕೆ ತಿಳಿಸಿದರು.

   ವಿವಾಹದ ಆನಂತರ ಮಹಿಳೆಯ ಪತಿ ಹಾಗೂ ಆತನ ಮನೆಯವರು ಹೆಚ್ಚುವರಿ ವರದಕ್ಷಿಣೆ ಹಾಗೂ ಕಾರಿಗಾಗಿ ಪೀಡಿಸತೊಡಗಿದರು. ಅಂತಿಮವಾಗಿ ಅವರು ಆಕೆ ಯನ್ನು ಮೇ 19ರಂದು ಮನೆಯಿಂದ ಹೊರದಬ್ಬಿದ್ದರು ಎಂದು ಅವರು ಹೇಳಿದರು.

  ತನಗೆ ನ್ಯಾಯ ನೀಡುವಂತೆ ನ್ಯಾಯಾಲಯವನ್ನು ಕೋರುವುದಾಗಿ ಸಂತ್ರಸ್ತ ಮಹಿಳೆ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ‘‘ ನನ್ನ ಪತಿ ನೀಡಿರುವ ತಲಾಖ್ ಕಾನೂನು ಬಾಹಿರವಾದುದಾಗಿದೆ, ಅವರೊಂದಿಗೆ ಉಳಿದುಕೊಳ್ಳಲು ನನಗೆ ಅನುಮತಿ ನೀಡಬೇಕಾಗಿದೆ. ನನ್ನ ಮಕ್ಕಳೊಂದಿಗೆ ನಾನು ಎಲ್ಲಿಗೆ ಹೋಗಲಿ’’ ಎಂದು ದಿಲ್ಲಿಯ ನಿವಾಸಿಯಾಗಿರುವ ಮಹಿಳೆ ಹೇಳಿದ್ದಾರೆ.

ಮಹಿಳೆಯು ಯಾಕೆ ದಿಲ್ಲಿ ಹೈಕೋರ್ಟ್‌ನ ಮೆಟ್ಟಲೇರಲಿಲ್ಲವೆಂದು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಹಾಗೂ ಸಂಜೀವ್ ಖನ್ನಾ ಅವರನ್ನೊಳಗೊಂಡ ನ್ಯಾಯಪೀಠವು ಕಶ್ಯಪ್ ಅವರನ್ನು ಪ್ರಶ್ನಿಸಿತು. ಇದಕ್ಕುತ್ತರಿಸಿದ ಕಶ್ಯಪ್ ಅವರು, ಸುಪ್ರೀಂಕೋರ್ಟ್ 2017ರಲ್ಲಿ ನೀಡಿದ ತೀರ್ಪಿನಲ್ಲಿ ಮುಸ್ಲಿಮರಲ್ಲಿ ತ್ರಿವಳಿ ತಲಾಖ್‌ನ ಆಚರಣೆಯು ಅಸಂವಿದಾನಿಕವೆಂದು ಪ್ರತಿಪಾದಿಸಿತ್ತು ಹಾಗೂ ಮಹಿಳೆಗೆ ಪತಿ ನೀಡಿರುವ ನೋಟಿಸ್, ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ಎಂದು ಕಶ್ಯಪ್ ತಿಳಿಸಿದರು.

ಮಹಿಳೆಗೆ ನೀಡಿರುವ ವಿಚ್ಛೇದನ ನೋಟಿಸ್‌ನ್ನು ರದ್ದುಪಡಿಸಬೇಕೆಂದು ಅರ್ಜಿಯಲ್ಲಿ ನ್ಯಾಯಾಲಯವನ್ನು ಕೋರಲಾಗಿದೆಯೆಂದು ಅವರು ಹೇಳಿದರು.

  ಜನವರಿಯಲ್ಲಿ ಜಾರಿಗೊಳಿಸಲಾಗಿರುವ ಮುಸ್ಲಿಂ ಮಹಿಳಾ (ವಿವಾಹದ ಹಕ್ಕುಗಳ ರಕ್ಷಣೆ) ಅಧ್ಯಾದೇ-201, ಕೂಡಾ ದೂರುದಾರೆಯ ಪರವಾಗಿದೆ. ಮಹಿಳೆಯ ಪತಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೂ ಆದೇಶಿಸುವಂತೆಯೂ ಅರ್ಜಿಯು ನ್ಯಾಯಾಲಯವನ್ನು ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News