ಚಂದ್ರನ ಮೇಲೆ ಇಸ್ರೇಲಿ ಅಂತರಿಕ್ಷ ನೌಕೆ ಪತನಗೊಂಡ ಸ್ಥಳವನ್ನು ಪತ್ತೆ ಹಚ್ಚಿದ ನಾಸಾ

Update: 2019-05-16 15:59 GMT

ಹೊಸದಿಲ್ಲಿ,ಮೇ 16: ಸದ್ಯ ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ನಾಸಾದ ಅಂತರಿಕ್ಷ ನೌಕೆ ‘ಲೂನಾರ್ ರಿಕನ್ನೈಸನ್ಸ್ ಆರ್ಬಿಟರ್(ಎಲ್‌ಆರ್‌ಒ)’ ಇಸ್ರೇಲಿ ಅಂತರಿಕ್ಷ ನೌಕೆ ‘ಬೆರೆಶೀಟ್’ ಚಂದ್ರನ ಮೇಲೆ ಪತನಗೊಂಡ ಸ್ಥಳವನ್ನು ಪತ್ತೆ ಹಚ್ಚಿದೆ. ಪತನ ಸ್ಥಳವು ‘ಸೀ ಆಫ್ ಸೆರೆನಿಟಿ’ಎಂದು ಕರೆಯಲಾಗುವ ಚಂದ್ರನ ಪ್ರದೇಶದಲ್ಲಿದೆ ಎಂದು ನಾಸಾ ಟ್ವೀಟಿಸಿದೆ.

ಎ.22ರಂದು ಎಲ್‌ಆರ್‌ಒ ಬೆರೆಶೀಟ್ ಇಳಿಯಬೇಕಾಗಿದ್ದ ಸ್ಥಳದ ಮೇಲೆ ಕಕ್ಷೆಯಲ್ಲಿ ಸ್ಥಿತಗೊಂಡಿದ್ದಾಗ ಅದು ಪತನಗೊಂಡಿದ್ದ ಜಾಗದ ಚಿತ್ರವನ್ನು ಸೆರೆ ಹಿಡಿದಿದೆ. ಪತನ ಸ್ಥಳದ ಚಿತ್ರವನ್ನು ಚಂದ್ರನ ಮೇಲ್ಮೈನಿಂದ 56 ಮೈಲು(96 ಕಿ.ಮೀ.) ದೂರದಿಂದ ತೆಗೆಯಲಾಗಿದೆ ಎಂದು ನಾಸಾ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಸುಮಾರು 10 ಮೀ.ಅಗಲದ ಕಪ್ಪು ಕಲೆಯನ್ನು ಕ್ಯಾಮೆರಾ ಸೆರೆಹಿಡಿದಿದೆ. ಅದು ಬೆರೆಶೀಟ್ ಚಂದ್ರನ ಮೇಲ್ಮೈಯನ್ನು ಅಪ್ಪಳಿಸಿದ್ದ ಬಿಂದುವನ್ನು ಸೂಚಿಸುತ್ತದೆ ಎಂದು ಅದು ಹೇಳಿದೆ.

ಇಸ್ರೇಲಿನ ಲಾಭರಹಿತ ಸಂಸ್ಥೆಯಾಗಿರುವ ಸ್ಪೇಸ್‌ಐಎಲ್ ಎ.11ರಂದು ಸ್ಪೇಸ್‌ಎಕ್ಸ್ ಫಾಲ್ಕನ್ 9 ರಾಕೆಟ್ ಮೂಲಕ ಚಂದ್ರನ ಸಮೀಪ ಪಾರ್ಶ್ವದಲ್ಲಿಯ ಜ್ವಾಲಾಮುಖಿ ಕ್ಷೇತ್ರದ ಮೇಲೆ ತನ್ನ ಅಂತರಿಕ್ಷ ನೌಕೆ ಬೆರೆಶೀಟ್ ಅನ್ನು ಇಳಿಸಲು ಪ್ರಯತ್ನಿಸಿತ್ತು. ಆದರೆ ಅದು ಲ್ಯಾಂಡ್ ಆಗುವ ಕ್ಷಣಗಳ ಮುನ್ನ ತಾಂತ್ರಿಕ ದೋಷಗಳಿಂದಾಗಿ ಚಂದ್ರನ ಮೇಲ್ಮೈಗೆ ಅಪ್ಪಳಿಸುವ ಮೂಲಕ ಇಸ್ರೇಲಿನ ಮೊದಲ ಖಾಸಗಿ ಆರ್ಥಿಕ ನೆರವಿನ ಅಭಿಯಾನ ವಿಫಲಗೊಂಡಿತ್ತು. ಚಂದ್ರನ ಮೇಲ್ಮೈನ ಚಿತ್ರಗಳನ್ನು ತೆಗೆಯುವುದು ಮತ್ತು ಪ್ರಯೋಗಗಳನ್ನು ನಡೆಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿತ್ತು.

ಬೆರೆಶೀಟ್ ಪತನವು ಚಂದ್ರನ ಮೇಲೆ,ಚಿತ್ರದಲ್ಲಿ ಕಾಣದಷ್ಟು ಸಣ್ಣದಾದ ಮಾನವ ನಿರ್ಮಿತ ಕುಳಿಗೆ ಕಾರಣವಾಗಿರುವ ಸಾಧ್ಯತೆಯಿದೆ ಎಂದು ನಾಸಾ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News