ಲೋಕಪಾಲಗೆ ದೂರು ಸಲ್ಲಿಸಲು ನಮೂನೆಗಳು ಶೀಘ್ರ ಬಿಡುಗಡೆ

Update: 2019-05-16 16:31 GMT

ಹೊಸದಿಲ್ಲಿ,ಮೇ 16: ಭ್ರಷ್ಟಾಚಾರವನ್ನು ನಿಗ್ರಹಿಸಲು ಅಸ್ತಿತ್ವಕ್ಕೆ ಬಂದಿರುವ ಲೋಕಪಾಲ ವ್ಯವಸ್ಥೆಗೆ ದೂರು ಸಲ್ಲಿಸಲು ನಮೂನೆಗಳನ್ನು ಕೇಂದ್ರವು ಶೀಘ್ರ ಬಿಡುಗಡೆಗೊಳಿಸಲಿದೆ ಎಂದು ಸಿಬ್ಬಂದಿ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ಗುರುವಾರ ಇಲ್ಲಿ ತಿಳಿಸಿದರು.

ಲೋಕಪಾಲ ನಿಯಮಗಳಂತೆ ದೂರನ್ನು ಕೇಂದ್ರ ಸರಕಾರವು ಅಧಿಸೂಚಿಸಲಿರುವ ನಿಗದಿತ ನಮೂನೆಯಲ್ಲಿಯೇ ಸಲ್ಲಿಸಬೇಕಿದೆ.

ದೂರುಗಳ ಸಲ್ಲಿಕೆಗೆ ನಿಗದಿತ ನಮೂನೆಗಳನ್ನು ಇನ್ನೂ ಸೂಚಿಸಿಲ್ಲವಾದರೂ 2019,ಎ.16 ವರೆಗೆ ತನ್ನ ಕಚೇರಿಯಲ್ಲಿ ಸ್ವೀಕರಿಸಲಾಗಿರುವ ಯಾವುದೇ ರೂಪದಲ್ಲಿಯ ಎಲ್ಲ ದೂರುಗಳನ್ನು ಪರಿಶೀಲಿಸಲು ನಿರ್ಧರಿಸಲಾಗಿದೆ ಎಂದು ಗುರುವಾರ ಅನಾವರಣಗೊಂಡ ತನ್ನ ವೆಬ್‌ಸೈಟ್‌ನಲ್ಲಿ ಲೋಕಪಾಲ ತಿಳಿಸಿದೆ.

 ಪರಿಶೀಲನೆಯ ಬಳಿಕ ಲೋಕಪಾಲ ವ್ಯಾಪ್ತಿಯಲ್ಲಿಲ್ಲದ ದೂರುಗಳನ್ನು ವಿಲೇವಾರಿಗೊಳಿಸಲಾಗುವುದು ಮತ್ತು ದೂರುದಾರರಿಗೆ ಈ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದಿದೆ.

ಲೋಕಪಾಲ ಅಧ್ಯಕ್ಷ ನ್ಯಾ.ಪಿ.ಸಿ.ಘೋಷ್ ಅವರು ವೆಬ್‌ಸೈಟ್‌ನ್ನು ಅನಾವರಣಗೊಳಿಸಿದರು. ಈ ಸಂದರ್ಭ ಲೋಕಪಾಲ ವ್ಯವಸ್ಥೆಯ ಎಲ್ಲ ಎಂಟೂ ಸದಸ್ಯರು ಉಪಸ್ಥಿತರಿದ್ದರು.

ಲೋಕಪಾಲ ಕಚೇರಿಯು ಸದ್ಯ ದಿಲ್ಲಿಯ ಚಾಣಕ್ಯಪುರಿಯಲ್ಲಿರುವ ‘ದಿ ಅಶೋಕ’ ಹೋಟಲ್‌ನಲ್ಲಿ ಕಾರ್ಯಾಚರಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News