ಜೈಲಿನಲ್ಲಿ ಮುಸ್ಲಿಮ್ ಕೈದಿಗಳೊಂದಿಗೆ 150 ಹಿಂದೂ ಕೈದಿಗಳ ರಮಝಾನ್ ಉಪವಾಸ

Update: 2019-05-16 17:02 GMT

ಹೊಸದಿಲ್ಲಿ, ಮೇ 16: ದೇಶಾದ್ಯಂತದ ಜೈಲುಗಳಲ್ಲಿ ಮುಸ್ಲಿಂ ಕೈದಿಗಳನ್ನು ಸಹ ಕೈದಿಗಳು ಥಳಿಸಿರುವುದು ಅಥವಾ ಗುಂಪು ಹಲ್ಲೆ ನಡೆಸಿ ಹತ್ಯೆ ನಡೆಸಿರುವ ಬಗ್ಗೆ ನಾವು ಇತ್ತೀಚೆಗೆ ಹಲವು ವರದಿಗಳನ್ನು ನೋಡಿದ್ದೇವೆ. ಆದರೆ, ಮುಸ್ಲಿಮರ ಪವಿತ್ರ ಮಾಸವಾದ ರಮಝಾನ್ ಸಂದರ್ಭ ಮುಸ್ಲಿಂ ಕೈದಿಗಳೊಂದಿಗೆ ಕನಿಷ್ಠ 150 ಹಿಂದೂ ಕೈದಿಗಳು ಉಪವಾಸ ಆಚರಿಸಿ ಸಾಮರಸ್ಯ ಮೆರೆದ ಅಪರೂಪದ ಘಟನೆ ತಿಹಾರ್ ಜೈಲಿನಲ್ಲಿ ಬೆಳಕಿಗೆ ಬಂದಿದೆ.

ಕಳೆದ ವರ್ಷ 59 ಮಂದಿ ಹಿಂದೂ ಕೈದಿಗಳು ಉಪವಾಸ ಆಚರಿಸಿದ್ದರು. ‘‘ನಾವು ಅವರಿಗೆ ವಿಶೇಷ ವ್ಯವಸ್ಥೆ ಮಾಡಿದ್ದೇವೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಉಪವಾಸ ಆಚರಿಸುತ್ತಿರುವ ಹಿಂದೂ ಕೈದಿಗಳ ಸಂಖ್ಯೆ ಮೂರು ಪಟ್ಟು ಏರಿಕೆಯಾಗಿದೆ. ಹಲವು ಹಿಂದೂ ಕೈದಿಗಳು ವಿಭಿನ್ನ ಕಾರಣಗಳಿಗಾಗಿ ಉಪವಾಸ ಆಚರಿಸುತ್ತಿದ್ದಾರೆ. ಮುಸ್ಲಿಂ ಗೆಳೆಯರೊಂದಿಗಿನ ಒಗ್ಗಟ್ಟು ಪ್ರದರ್ಶಿಸಲು ಈ ಉಪವಾಸ ಆಚರಿಸುತ್ತಿದ್ದೇವೆ ಎಂದು ಹೆಚ್ಚಿನ ಹಿಂದೂ ಕೈದಿಗಳು ಹೇಳಿದ್ದಾರೆ.’’ ಎಂದು ಜೈಲಿನ ವಕ್ತಾರರು ತಿಳಿಸಿದ್ದಾರೆ.

ತಿಹಾರ್ ಜೈಲಿನಲ್ಲಿ ಒಟ್ಟು 16,665 ಕೈದಿಗಳು ಇದ್ದಾರೆ. ಇದರಲ್ಲಿ ಹಿಂದೂಗಳು ಹಾಗೂ ಮುಸ್ಲಿಮರ ಸೇರಿದಂತೆ ಒಟ್ಟು 2,658 ಕೈದಿಗಳು ರಮಝಾನ್ ಉಪವಾಸ ಆಚರಿಸುತ್ತಿದ್ದಾರೆ ಎಂದು ಸುದ್ದಿಸಂಸ್ಥೆಯೊಂದರ ವರದಿ ಹೇಳಿದೆ. ಮುಸ್ಲಿಮ್ ಗೆಳೆಯರೊಂದಿಗಿನ ಒಗ್ಗಟ್ಟು ಪ್ರದರ್ಶಿಸಲು ನಾವು ಉಪವಾಸ ಆಚರಿಸುತ್ತಿದ್ದೇವೆ ಎಂದು ಹೆಚ್ಚಿನ ಹಿಂದೂ ಕೈದಿಗಳು ಹೇಳಿದ್ದಾರೆ. ಶಾಂತಿ ಕಂಡುಕೊಳ್ಳಲು ಧರ್ಮ ಒಂದು ದಾರಿ ಎಂದು ಕೆಲವು ಕೈದಿಗಳು ಹೇಳಿದ್ದಾರೆ. ದೇವರನ್ನು ಪ್ರಾರ್ಥಿಸಿದರೆ, ನಾವು ಬೇಗನೆ ಬಿಡುಗಡೆಯಾಗುತ್ತೇವೆ ಎಂಬ ನಂಬಿಕೆ ಇದೆ ಎಂದು ಇನ್ನು ಕೆಲವು ಕೈದಿಗಳು ಹೇಳಿದ್ದಾರೆ ಎಂದು ಕಾರಾಗೃಹದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News