ಚುನಾವಣಾ ಆಯೋಗದಲ್ಲಿ ಆರೆಸ್ಸೆಸ್ ಜನರೇ ತುಂಬಿದ್ದಾರೆ: ಮಮತಾ

Update: 2019-05-16 16:56 GMT

ಕೋಲ್ಕತಾ, ಮೇ 16: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ಕಾರ್ಯವನ್ನು ಒಂದು ದಿನದ ಮೊದಲೇ ಮುಕ್ತಾಯಗೊಳಿಸುವಂತೆ ಚುನಾವಣಾ ಆಯೋಗ ನೀಡಿರುವ ಸೂಚನೆಯ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ಚುನಾವಣಾ ಆಯೋಗವು ಪ್ರಧಾನಿ ಮೋದಿ ಹಾಗೂ ಅಮಿತ್ ಶಾಗೆ ನೀಡಿರುವ ಅಭೂತಪೂರ್ವ, ಅಸಾಂವಿಧಾನಿಕ ಮತ್ತು ಅನೈತಿಕ ಉಡುಗೊರೆಯಾಗಿದೆ ಎಂದು ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ. ಈ ರೀತಿಯ ಪಕ್ಷಪಾತತನದ, ಆರೆಸ್ಸೆಸ್ ಜನರೇ ತುಂಬಿರುವ ಚುನಾವಣಾ ಆಯೋಗವನ್ನು ತಾನು ಇದುವರೆಗೂ ನೋಡಿಲ್ಲ . ಪಶ್ಚಿಮ ಬಂಗಾಳದಲ್ಲಿ ಮಧ್ಯರಾತ್ರಿ ಇವಿಎಂಗಳಲ್ಲಿ ಹಸ್ತಕ್ಷೇಪ ನಡೆಸಲು ಬಿಜೆಪಿ ಯತ್ನಿಸುತ್ತಿದೆ. ಮತದಾರರಿಗೆ ಹಣ ಹಂಚಲು ಕೇಂದ್ರದ ಪಡೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಬ್ಯಾನರ್ಜಿ ಆರೋಪಿಸಿದ್ದಾರೆ.

 ಮಂಗಳವಾರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೋಲ್ಕತಾದಲ್ಲಿ ನಡೆಸಿದ ರೋಡ್‌ಶೋ ಸಂದರ್ಭ ಹಿಂಸಾಚಾರ ಸಂಭವಿಸಿದ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯವನ್ನು ಒಂದು ದಿನದ ಮೊದಲೇ ಅಂತ್ಯಗೊಳಿಸಲು ಚುನಾವಣಾ ಆಯೋಗ ಸೂಚಿಸಿದೆ. ಭಾರತದ ಚುನಾವಣಾ ಇತಿಹಾಸದಲ್ಲೇ ಮೊದಲ ಬಾರಿಗೆ ಚುನಾವಣಾ ಆಯೋಗ ಇಂತಹ ಕ್ರಮ ಕೈಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News