ಪೊಲೀಸ್ ಫೋನ್ ಇನ್ ಕಾರ್ಯಕ್ರಮ: ಗಾಂಜಾ ಅಡ್ಡೆಗಳ ನಿರ್ಮೂಲನೆಗೆ ಸಾರ್ವಜನಿಕರ ಆಗ್ರಹ

Update: 2019-05-17 15:29 GMT

ಮಂಗಳೂರು, ಮೇ 17: ನಗರದ ಕೂಳೂರು ಮತ್ತಿತರ ಕೆಲವು ಕಡೆಗಳಲ್ಲಿ ಗಾಂಜಾ ಸೇವನೆಯ ಅಡ್ಡೆಗಳು ಕಂಡುಬರುತ್ತಿದ್ದು, ಇದರ ವಿರುದ್ಧ ಸೂಕ್ತ ಕಾರ್ಯಾಚರಣೆ ನಡೆಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.

ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್-ಇನ್ ಕಾರ್ಯಕ್ರಮದಲ್ಲಿ ಬೈಕಂಪಾಡಿ ಹಾಗೂ ಜಪ್ಪಿನಮೊಗರಿನ ನಾಗರಿಕರಿಬ್ಬರು ಈ ಬಗ್ಗೆ ದೂರಿಕೊಂಡರು.

ಕೂಳೂರಿನ ಸಫಾ ನಗರದಲ್ಲಿ ಯುವಕರು ಗಾಂಜಾ ಜೊತೆಗೆ ಯಾವುದೋ ಮಾತ್ರೆಯನ್ನು ಸೇವಿಸಿ ಪಾದಚಾರಿಗಳಿಗೆ ಕಿರುಕುಳ ನೀಡುತ್ತಾರೆ. ಇದು ಮಾದಕ ದ್ರವ್ಯ ಸೇವೆಯಿಂದ ಆಗಿರುವ ಶಂಕೆ ಇದೆ ಎಂದರೆ, ಪಾಂಡೇಶ್ವರದಿಂದ ಕರೆ ಮಾಡಿದ ವ್ಯಕ್ತಿ, ಗೂಡಂಗಡಿಗಳಲ್ಲಿ ಸಿಗರೇಟ್ ಮಾರಾಟ ಈಗಲೂ ನಡೆಯುತ್ತಿದೆ. ಇದರ ವಿರುದ್ಧ ಕೋಟ್ಪಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಜಪ್ಪಿನಮೊಗರಿನ ಸೂಟರ್‌ಪೇಟೆ ರಸ್ತೆಯಲ್ಲಿ ಮಾದಕದ್ರವ್ಯ ವ್ಯಸನಿಗಳ ಅಡ್ಡೆ ಆರಂಭವಾಗಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜೆಪ್ಪಿನಮೊಗರು ವ್ಯಕ್ತಿ ದೂರಿದರು. ಎಲ್ಲಾ ದೂರುಗಳನ್ನು ಸಮಚಿತ್ತದಿಂದ ಅಲಿಸಿದ ಕಮಿಷನರ್ ಸಂದೀಪ್ ಪಾಟೀಲ್ ಈ ದೂರುಗಳ ಬಗ್ಗೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಹೇಳಿದರು.

*ಠಾಣೆ ಎದುರು ಗುಜರಿ ವಾಹನ: ನಗರದ ಪೊಲೀಸ್ ಠಾಣೆಗಳ ಎದುರು ಸ್ವಾಧೀನಪಡಿಸಿದ ವಾಹನಗಳು ಗುಜರಿಯಾಗಿ ಮಾರ್ಪಡುತ್ತಿವೆ. ಅವುಗಳನ್ನು ನಗರದ ಸ್ವಚ್ಛತೆ ಮತ್ತು ಸೌಂದರ್ಯವನ್ನು ಕಾಪಾಡುವ ದೃಷ್ಟಿಯಿಂದ ಅಲ್ಲಿಂದ ತೆರವುಗೊಳಿಸಬೇಕು. ಈ ಬಗ್ಗೆ ಸ್ಥಳೀಯ ಠಾಣಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಕದ್ರಿಯ ನಾಗರಿಕರೊಬ್ಬರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್ ಆದೇಶ ಪಡೆದು ಇಂತಹ ವಾಹನಗಳನ್ನು ಒಂದೇ ಕಡೆಗೆ ಸ್ಥಳಾಂತರಿಸುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

ಕೋಡಿಕಲ್ ಕ್ರಾಸ್‌ನಲ್ಲಿ ಕೊಟ್ಟಾರ ಕಡೆಯಿಂದ ಆಗಮಿಸುವಲ್ಲಿ ಬ್ಯಾರಿಕೇಡ್ ಅಳವಡಿಸಬೇಕು. ಇಲ್ಲದಿದ್ದರೆ ಅಪಘಾತದ ಸಾಧ್ಯತೆ ಇದೆ ಎಂದು ನಾಗರಿಕರೊಬ್ಬರು ಗಮನಕ್ಕೆ ತಂದರು. ಈಗಾಗಲೇ ಕೋಡಿಕಲ್ ಕ್ರಾಸ್‌ನಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಅಲ್ಲಿ ಹೆದ್ದಾರಿ ಮೇಲ್ಸೇತುವೆ ಹಾಗೂ ಸರ್ವಿಸ್ ರಸ್ತೆಯಲ್ಲಿ ಕೂಡ ಬ್ಯಾರಿಕೇಡ್ ಹಾಕಲಾಗಿದೆ ಎಂದು ಕಮಿಷನರ್ ಹೇಳಿದರು.

*ಮೂಡುಬಿದಿರೆ ಟ್ರಾಫಿಕ್: ಮೂಡುಬಿದಿರೆಯಲ್ಲಿ ವಾಹನ ದಟ್ಟಣೆ ವಿಪರೀತವಾಗಿದ್ದು ಸಂಚಾರ ಸಮಸ್ಯೆ ತಲೆದೋರುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ವ್ಯವಸ್ಥಿತ ಸಂಚಾರ ಸುಧಾರಣೆಗೆ ಕ್ರಮಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಮಿಷನರ್ ಈ ಬಗ್ಗೆ ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಲಾಗಿದೆ. ಅಲ್ಲಿನ ಪ್ರವಾಸಿ ಬಂಗಲೆ, ಜೈನ ಬಸದಿ ಮುಂತಾದ ಕಡೆಗಳಲ್ಲಿ ಸಂಚಾರ ವ್ಯವಸ್ಥೆ ಸುಧಾರಿಸಲು ಪ್ರಯತ್ನಿಸುವುದಾಗಿ ಹೇಳಿದರು.

ನಗರದಲ್ಲಿರುವ ಟೋಯ್ ವಾಹನ ಕಾರ್ಯಾಚರಣೆಯನ್ನು ಬೇರೆ ಕಡೆಗೂ ವಿಸ್ತರಿಸಬೇಕು. ಎಲ್ಲೆಂದರಲ್ಲಿ ರಸ್ತೆಯಲ್ಲಿ ವಾಹನಗಳನ್ನು ಪಾರ್ಕ್ ಮಾಡುತ್ತಾರೆ ಎಂದು ಕೊಣಾಜೆಯ ನಾಗರಿಕರೊಬ್ಬರು ಆಗ್ರಹಿಸಿದರು. ಕೊಣಾಜೆ ವ್ಯಾಪ್ತಿಗೂ ಟೋಯ್ ವಾಹನ ಕಾರ್ಯಾಚರಣೆ ವಿಸ್ತರಿಸುವುದಾಗಿ ಕಮಿಷನರ್ ಭರವಸೆ ನೀಡಿದರು.

ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ನಿರ್ವಹಿಸುತ್ತಾ ಕಾನೂನು ಸುವ್ಯವಸ್ಥೆಗೆ ನೆರವಾಗುವ ಇಂಟರ್ ಸೆಪ್ಟರ್ ವಾಹನವನ್ನು ಬೇರೆ ಕಡೆಗಳಿಗೂ ಕಳುಹಿಸಬೇಕು. ಇಲ್ಲದಿದ್ದರೆ ಒಂದೇ ಕಡೆ ಕೆಲಸವಿಲ್ಲದೆ ಅದರಲ್ಲಿನ ಸಿಬ್ಬಂದಿ ಹರಟೆ ಹೊಡೆಯುತ್ತಿರುತ್ತಾರೆ ಎಂದು ಬಿಜೈ ನಿವಾಸಿಯೊಬ್ಬರು ಹೇಳಿದರು. ಇಂಟರ್ ಸೆಪ್ಟರ್ ವಾಹನವನ್ನು ಅಗತ್ಯವಿರುವ ಕಡೆ ಬಳಸಲಾಗುತ್ತದೆ ಎಂದು ಕಮಿಷನರ್ ಹೇಳಿದರು.

*ಸಂಚಾರ ಉಲ್ಲಂಘನೆ: ಉಳ್ಳಾಲದಲ್ಲಿ ಅಪ್ರಾಪ್ತರು ವಾಹನ ಸವಾರ ನಡೆಸುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಾಗರಿಕರೊಬ್ಬರು ದೂರಿದರು. ಕಸ ವಿಲೇವಾರಿ ವಾಹನದ ಹಿಂಭಾಗದಲ್ಲಿ ಕಾರ್ಮಿಕರು ನೇತುಕೊಂಡು ಹೋಗುತ್ತಿರುತ್ತಾರೆ. ಇದಕ್ಕೆ ಅವಕಾಶ ನೀಡಬಾರದು ಎಂದು ವ್ಯಕ್ತಿಯೊಬ್ಬರು ವಿನಂತಿಸಿದರು.

ತ್ಯಾಜ್ಯ ನೀರನ್ನು ರಸ್ತೆಗೆ ಚೆಲ್ಲುವ ಮೀನು ಲಾರಿಗಳ ವಿರುದ್ಧ ಕಾರ್ಯಾಚರಣೆ ನಡೆಸಿದ ಪರಿಣಾಮ ಶೇ.50ರಷ್ಟು ಸಮಸ್ಯೆ ನಿವಾರಣೆಯಾಗಿದೆ. ಇನ್ನೂ ಶೇ.50ರಷ್ಟು ಲಾರಿಗಳ ವಿರುದ್ಧ ಕಾರ್ಯಾಚರಣೆ ನಡೆಸಬೇಕು ಎಂದು ಜಪ್ಪಿನಮೊಗರಿನ ನಾಗರಿಕರೊಬ್ಬರು ಆಗ್ರಹಿಸಿದರು.

*ಫಾಸ್ಟ್‌ಫುಡ್ ಕಿರಿಕಿರಿ: ಬಿಜೈನಲ್ಲಿ ರಸ್ತೆ ಬದಿ ಫಾಸ್ಟ್‌ಫುಡ್ ಅಂಗಡಿಯಿಂದಾಗಿ ಸಂಚಾರಿಗಳಿಗೆ ತೊಂದರೆಯಾಗುತ್ತಿದೆ. ಅದರ ಎಣ್ಣೆಯ ಘಾಟು ಹಾಗೂ ಎಣ್ಣೆ ರಸ್ತೆಗೆ ಎರಚಲ್ಪಡುತ್ತಿದ್ದು, ಇದರಿಂದ ಸವಾರರಿಗೆ ಕಷ್ಟವಾಗಿದೆ. ಈ ಫಾಸ್ಟ್‌ಫುಡ್ ಅಂಗಡಿಯನ್ನು ಹಿಂದಿನ ಮೇಯರ್ ರದ್ದುಪಡಿಸಿದ್ದರು. ಈಗ ಇದು ಮತ್ತೆ ತಲೆಎತ್ತಿದೆ ಎಂದು ಸ್ಥಳೀಯ ನಾಗರಿಕರು ದೂರಿದರು.

ಫಾಸ್ಟ್‌ಫುಡ್ ಅಂಗಡಿಗಳಿಗೆ ಪ್ರತ್ಯೇಕ ಜಾಗ ನಿಗದಿಪಡಿಸುವ ಬಗ್ಗೆ ಮಹಾನಗರ ಪಾಲಿಕೆ ಜೊತೆಗೆ ಮಾತುಕತೆ ನಡೆಸಲಾಗುವುದು ಎಂದು ಕಮಿಷನರ್ ಭರವಸೆ ನೀಡಿದರು.

ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮಿಗಣೇಶ್ ಉಪಸ್ಥಿತರಿದ್ದರು.

ಪೊಲೀಸ್ ಸಿಬ್ಬಂದಿ ವಿರುದ್ಧ ದೂರು

ಬಲ್ಮಠದಿಂದ ಕರೆ ಮಾಡಿದ ಮಹಿಳೆಯೊಬ್ಬರು ತನ್ನನ್ನು ಚುಡಾಯಿಸಿದ್ದಾನೆ ಎಂದು ಪಾಂಡೇಶ್ವರ ಠಾಣೆಯ ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧವೇ ದೂರು ನೀಡಿದ ವಿದ್ಯಮಾನ ನಡೆಯಿತು.

ಕಳೆದ ಸೋಮವಾರ ಬಲ್ಮಠದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವ್ಯಕ್ತಿಯೊಬ್ಬರು ನನ್ನನ್ನು ಏನು ದಪ್ಪಗಿದ್ದೀಯಾ?ಎಂದು ಚುಡಾಯಿಸಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ ಆ ವ್ಯಕ್ತಿ ಪಾಂಡೇಶ್ವರ ಠಾಣೆಯ ಸಿಬ್ಬಂದಿ ಎಂದು ಗೊತ್ತಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಕೆ ಆಗ್ರಹಿಸಿದರು. ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಜರುಗಿಸಲಾಗುವುದು ಎಂದು ಕಮಿಷನರ್ ಭರವಸೆ ನೀಡಿದರು.

ಪ್ಲಾಸ್ಟಿಕ್ ಬಾಟಲ್ ನಿಷೇಧ

ರಾಜ್ಯದಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲಾಗಿದೆ. ಆದರೆ ‘ಫೋನ್-ಇನ್ ಕಾರ್ಯಕ್ರಮ’ದಲ್ಲಿ ಪ್ಲಾಸ್ಟಿಕ್ ಬಾಟಲ್ ಇರುವುದು ಮಾಧ್ಯಮಗಳಲ್ಲಿ ಪ್ರಕಟವಾದ ಫೋಟೋಗಳಲ್ಲಿ ಕಂಡುಬಂದಿದೆ. ಪರಿಸರಕ್ಕೆ ಹಾನಿಕಾರಕ ಪ್ಲಾಸ್ಟಿಕ್ ಬಾಟಲ್ ಉಪಯೋಗಿಸುವುದನ್ನು ನಿಲ್ಲಿಸಿ ಮಾದರಿಯಾಗಬೇಕು ಎಂದು ಹಿರಿಯ ನಾಗರಿಕರೊಬ್ಬರು ಸಲಹೆ ಮಾಡಿದರು.

ತಕ್ಷಣ ಇದಕ್ಕೆ ಸ್ಪಂದಿಸಿದ ಕಮಿಷನರ್ ಸಂದೀಪ್ ಪಾಟೀಲ್, ಮುಂದಿನ ದಿನಗಳಲ್ಲಿ ಇಲ್ಲಿಯೂ ಪ್ಲಾಸ್ಟಿಕ್ ಬಾಟಲ್ ಬಳಕೆ ನಿಷೇಧಿಸಲಾಗುವುದು. ಇದರ ಬದಲು ಸ್ಟೀಲ್ ಲೋಟಗಳನ್ನು ಬಳಸುವುದಾಗಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News