ಶ್ರದ್ಧಾ ಚಿಟ್ ಫಂಡ್ ಹಗರಣ: ರಾಜೀವ್ ಕುಮಾರ್‌ಗೆ ಜಾಮೀನು ಪಡೆಯಲು 7 ದಿನಗಳ ಕಾಲಾವಕಾಶ ನೀಡಿದ ಸುಪ್ರೀಂ

Update: 2019-05-17 18:49 GMT

ಹೊಸದಿಲ್ಲಿ, ಮೇ 17: ಸಿಬಿಐ ಬಂಧನದಿಂದ ರಕ್ಷಣೆ ಕೋರಿ ಸೂಕ್ತ ನ್ಯಾಯಾಲಯ ಸಂಪರ್ಕಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಕೋಲ್ಕೊತ್ತಾದ ಮಾಜಿ ಆಯುಕ್ತ ರಾಜೀವ್ ಕುಮಾರ್‌ಗೆ 7 ದಿನಗಳ ಕಾಲಾವಕಾಶ ನೀಡಿದೆ.

ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ಸಾಕ್ಷ ನಾಶ ಮಾಡಿದ ಆರೋಪದಲ್ಲಿ ರಾಜೀವ್ ಕುಮಾರ್ ಅವರು ಸಿಬಿಐಗೆ ಬೇಕಾದವರಾಗಿದ್ದಾರೆ. ಹಗರಣದಲ್ಲಿ ಭಾಗಿಯಾಗಿದ್ದ ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲು ಕುಮಾರ್ ಅವರು ಸಾಕ್ಷ ನಾಶಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಸಿಬಿಐ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಈ ಪ್ರಕರಣದಲ್ಲಿ ಕಾನೂನಿಗೆ ಅನುಗುಣವಾಗಿ ವರ್ತಿಸುವಂತೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ ಸಿಬಿಐಗೆ ನಿರ್ದೇಶಿಸಿದೆ.

 ಕುಮಾರ್‌ಗೆ ಬಂಧನದಿಂದ ನೀಡಿದ ರಕ್ಷಣೆಯನ್ನು ಪೀಠ ಹಿಂದೆ ತೆಗೆದುಕೊಂಡಿದೆ. ಆದರೆ, ನಿರೀಕ್ಷಣಾ ಜಾಮೀನಿಗಾಗಿ ನ್ಯಾಯಾಲಯ ಸಂಪರ್ಕಿಸಲು ಅವರಿಗೆ 7 ದಿನಗಳ ಕಾಲಾವಕಾಶ ಇದೆ ಎಂದು ಪೀಠ ಹೇಳಿದೆ. ಕಚೇರಿಯ ಗೇಟಿನಲ್ಲೇ ಅಧಿಕಾರಿಗಳು ತಡೆದ ಕಾರಣದಿಂದ ಪೆಬ್ರವರಿ 3ರಂದು ಕುಮಾರ್ ಅವರನ್ನು ವಿಚಾರಣೆ ನಡೆಸಲು ಸಿಬಿಐ ವಿಫಲವಾಗಿತ್ತು. ಕೂಡಲೇ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಧರಣಿ ನಡೆಸಿದ್ದರು. ಸಿಬಿಐಯ ಕ್ರಮವನ್ನು ಸಾಂವಿಧಾನಿಕ ನಿಯಮದ ಮೇಲಿನ ದಾಳಿ ಎಂದು ಹೇಳಿದ್ದರು. ಒಂದು ವಾರಗಳ ಬಳಿಕ ಸುಪ್ರೀಂ ಕೋರ್ಟ್ ಕುಮಾರ್ ಅವರ ವಿಚಾರಣೆಗೆ ಅನುಮತಿ ನೀಡಿತ್ತು. ಅದರಂತೆ ಶಿಲ್ಲಾಂಗ್‌ನಲ್ಲಿ ಐದು ದಿನಗಳ ಕಾಲ ಕುಮಾರ್ ಅವರ ವಿಚಾರಣೆ ನಡೆದಿತ್ತು. ಕುಮಾರ್ ಅವರನ್ನು ಬಂಧಿಸದಂತೆ ಕೂಡ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News