ಕಾರ್‌ಸ್ಟ್ರೀಟ್: ಉದ್ಯಮಿಯ ಮನೆಗೆ ಐಟಿ ದಾಳಿ

Update: 2019-05-18 15:28 GMT

ಮಂಗಳೂರು, ಮೇ 18: ಮಂಗಳೂರಿನಲ್ಲಿ ಶುಕ್ರವಾರ ಬೆಳಗ್ಗೆ ದಾಖಲೆ ರಹಿತವಾಗಿ ಒಂದು ಕೋಟಿ ರೂ. ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿಯೊಬ್ಬರ ಮೇಲೆ ಐಟಿ ದಾಳಿ ನಡೆದಿದೆ.

ಉದ್ಯಮಿ ರಾಜು ಪವಾರ್ ಎಂಬವರಿಗೆ ಸೇರಿದ ಕಾರ್‌ಸ್ಟ್ರೀಟ್‌ನ ಮನೆ ಮತ್ತು ಕಚೇರಿ ಮೇಲೆ ಐಟಿ ಅಧಿಕಾರಿಗಳು ಶನಿವಾರ ದಾಳಿ ನಡೆಸಿದ್ದು, ಮಹತ್ವದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಳಗ್ಗಿನಿಂದ ಹಲವು ಗಂಟೆ ಕಾಲ ಐಟಿ ಅಧಿಕಾರಿಗಳ ಪರಿಶೀಲನೆ ಮುಂದುವರಿದಿತ್ತು.

ಶುಕ್ರವಾರ ಬೆಳ್ಳಂಬೆಳಗ್ಗೆ ಒಂದು ಕೋಟಿ ರೂ. ನಗದು ಕೊಂಡೊಯ್ಯುತ್ತಿದ್ದ ಬೆಂಗಳೂರಿನ ಮಲ್ಲೇಶ್ವರಂ ನಿವಾಸಿ ಮಂಜುನಾಥ್ (56) ಎಂಬವರನ್ನು ಮುಂಜಾನೆಯ ಗಸ್ತು ನಿರತ ಪೊಲೀಸರು ಬಂಧಿಸಿದ್ದರು. ವಿಚಾರಣೆ ನಡೆಸಿದಾಗ ಆತನ ಬಳಿ ಈ ನಗದು ಹಣಕ್ಕೆ ಯಾವುದೇ ದಾಖಲೆ ಇರಲಿಲ್ಲ. ಅದು ಯಾರಿಗೆ ಸೇರಿದ್ದು ಎಂಬ ಬಗ್ಗೆಯೂ ಮಾಹಿತಿ ಇರಲಿಲ್ಲ ಎನ್ನಲಾಗಿದೆ. ಬೆಂಗಳೂರಿನಿಂದ ಒಬ್ಬರು ವ್ಯಕ್ತಿ ಈ ಹಣ ನೀಡಿದ್ದು, ಮಂಗಳೂರಿನ ವ್ಯಕ್ತಿಯೊಬ್ಬರಿಗೆ ತಲುಪಿಸುವಂತೆ ತಿಳಿಸಿದ್ದಾಗಿ ಬಾಯಿ ಬಿಟ್ಟಿದ್ದ.

ಈ ಮಾಹಿತಿಯನ್ನು ಪಡೆದುಕೊಂಡ ಐಟಿ ಇಲಾಖೆ ಅಧಿಕಾರಿಗಳು ತಕ್ಷಣ ಕಾರ್ಯಾಚರಣೆ ನಡೆಸಿ, ಪ್ರಕರಣಕ್ಕೆ ಸಂಬಂಧಿಸಿದ ರಾಜು ಪವಾರ್ ಎಂಬವರ ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.

ಆರೋಪಿಗೆ ಪೊಲೀಸ್ ಕಸ್ಟಡಿ: ದಾಖಲೆಯಿಲ್ಲದೆ ಹಣ ಕೊಂಡೊಯ್ದು ಬಂಧಿತನಾದ ಆರೋಪಿ ಮಂಜುನಾಥ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದೆ. ಮೇ28ರವರೆಗೆ ಪೊಲೀಸ್ ಕಸ್ಟಡಿಗೆ ಕೋರ್ಟ್ ಒಪ್ಪಿಸಿದೆ. ಪ್ರಸ್ತುತ ತನಿಖೆ ನಡೆಸಲಾಗುತ್ತಿದ್ದು, ಪ್ರಕರಣದ ಕುರಿತು ಇನ್ನಷ್ಟು ಮಾಹಿತಿಗಳನ್ನು ಕಲೆಹಾಕಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಮತ್ತೊಬ್ಬನ ಸೆರೆ: 24 ಲಕ್ಷ ರು. ವಶ

ದಾಖಲೆ ರಹಿತ ಕೋಟಿ ರೂ. ಸಾಗಾಟ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಇಂಥದ್ದೇ ಮತ್ತೊಂದು ಪ್ರಕರಣ ಶನಿವಾರ ಬೆಳಗ್ಗೆ ಪತ್ತೆಯಾಗಿದೆ.
ದಾವಣಗೆರೆ ಮೂಲಕ ಮಂಜುನಾಥ್ (40) ಎಂಬಾತ ದಾಖಲೆ ರಹಿತ ಬರೋಬ್ಬರಿ 24 ಲಕ್ಷ ರೂ.ನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ನಗರ ಪೊಲೀಸ್ ತಂಡ ಆತನನ್ನು ಬಂಧಿಸಿದೆ.

ಕಳೆದ ಕೆಲವು ದಿನಗಳಿಂದ ಮುಂಜಾನೆಯ ಗಸ್ತು ಪೊಲೀಸ್ ವ್ಯವಸ್ಥೆಯನ್ನು ಬಿಗಿಗೊಳಿಸಲಾಗುತ್ತಿರುವುದರಿಂದ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಶನಿವಾರ ಪತ್ತೆಯಾದ ಪ್ರಕರಣಕ್ಕೂ ಶುಕ್ರವಾರದ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಈ ಪ್ರಕರಣ ಸಂಪೂರ್ಣ ಪ್ರತ್ಯೇಕವಾಗಿದೆ. ಈ ಕುರಿತಾಗಿಯೂ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News