37 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಕುಟುಂಬದೊಂದಿಗೆ ಒಂದುಗೂಡಿಸಿದ ಫೇಸ್ ಬುಕ್ ಪೋಸ್ಟ್

Update: 2019-05-18 12:07 GMT
ಫೋಟೊ ಕೃಪೆ: newindianexpress.com

ಕೊಝಿಕ್ಕೋಡ್, ಮೇ 18: ಫೇಸ್ ಬುಕ್ ಪೋಸ್ಟ್ ಒಂದು ಸುಮಾರು 37 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರನ್ನು ಅವರ ಕುಟುಂಬದೊಂದಿಗೆ ಒಂದುಗೂಡಿಸುವಲ್ಲಿ ಯಶಸ್ವಿಯಾಗಿದೆ.

ವಯಲ್ಪಿಡಿಯಿಲ್ ಮುಹಮ್ಮದ್ ಎಂಬ ಕೇರಳದ ಮಡವೂರು ನಿವಾಸಿಯನ್ನು 1982ರಿಂದ ಅವರ ಕುಟುಂಬ ಸದಸ್ಯರು ಹುಡುಕದ ಸ್ಥಳವಿರಲಿಲ್ಲ. ಆದರೆ ಎಷ್ಟೇ ಹುಡುಕಿದರೂ ಪ್ರಯೋಜನವಿಲ್ಲದೇ ಇದ್ದಾಗ ಕುಟುಂಬ ಹುಡುಕಾಡುವುದನ್ನು ಕೈಬಿಟ್ಟಿತ್ತು. ಮುಹಮ್ಮದ್ ನಾಪತ್ತೆಯಾಗಿದ್ದ ಸಂದರ್ಭ ಅವರ ಪತ್ನಿ 7 ತಿಂಗಳು  ಗರ್ಭಿಣಿಯಾಗಿದ್ದರು. ಮುಹಮ್ಮದ್ ಕರ್ನಾಟಕದ ಹುಬ್ಬಳ್ಳಿಯಲ್ಲಿ ಸಣ್ಣ ಉದ್ದಿಮೆಯೊಂದನ್ನು ನಡೆಸುತ್ತಿದ್ದುದರಿಂದ ಅಲ್ಲಿಯೂ ಅವರಿಗಾಗಿ ಹುಡುಕಾಡಿ ಕುಟುಂಬ ನಿರಾಸೆಗೊಂಡಿತ್ತು.

ಮುಹಮ್ಮದ್ ಅವರ ಪುತ್ರ, ಇಬ್ಬರು ಪುತ್ರಿಯರಿಗೆ ಹಾಗೂ ಮೊಮ್ಮಕ್ಕಳಿಗೂ ಈಗ ವಿವಾಹವಾಗಿದೆ. ಆದರೆ ಮುಹಮ್ಮದ್ ಅವರ ಅನುಪಸ್ಥಿತಿ ಎಲ್ಲಾ ಸಮಾರಂಭಗಳಲ್ಲೂ ಕುಟುಂಬವನ್ನು ಅತಿಯಾಗಿ ಕಾಡಿತ್ತು.

ಇತ್ತೀಚೆಗೆ ಕರ್ನಾಟಕದ ಬೆಳಗಾವಿಯಲ್ಲಿ ಬೇಕರಿ ನಡೆಸುತ್ತಿರುವ ಪಟ್ಟಾಂಬಿಯ ರಯೀಸ್ ಎಂಬವರಿಗೆ ಮುಹಮ್ಮದ್ ಪರಿಚಯವಾಗಿ ಅವರು ಏಕಾಂಗಿ ಜೀವನ ನಡೆಸುತ್ತಿದ್ದಾರೆಂದು ತಿಳಿದು ಬಂದಿತ್ತು. ರಯೀಸ್ ಅವರು ಒತ್ತಾಯಪಡಿಸಿದ ನಂತರ ಮುಹಮ್ಮದ್ ತಮ್ಮ ಜೀವನದ ಕಥೆ ಬಿಚ್ಚಿಟ್ಟಿದ್ದರು ಹಾಗೂ ಕುಟುಂಬದ ಜತೆ ಸೇರುವ ಇಚ್ಛೆ ವ್ಯಕ್ತಪಡಿಸಿದರು. ರಯೀಸ್ ಫೇಸ್ ಬುಕ್ ನಲ್ಲಿ ಮುಹಮ್ಮದ್ ಕಥೆಯ ಬಗ್ಗೆ ಹೇಳಿಕೊಂಡರು.  ಅವರ ಇನ್ನೊಬ್ಬ ಸ್ನೇಹಿತ ಇದನ್ನು ಓದಿ ಲೋಕತಾಂತ್ರಿಕ್ ಯುವ ಜನತಾ ದಳದ  ರಾಷ್ಟ್ರೀಯ ಅಧ್ಯಕ್ಷ ಸಲೀಂ ಮಡವೂರ್ ಅವರನ್ನು ಸಂಪರ್ಕಿಸಿದ್ದು ಅವರು  ಮುಹಮ್ಮದ್ ಕುಟುಂಬವನ್ನು ಪತ್ತೆ ಹಚ್ಚಿದರು. ಸಲೀಂ ನಂತರ ಮುಹಮ್ಮದ್ ಅವರ ಮಕ್ಕಳು ಮತ್ತು ಸೋದರನನ್ನು ಬೆಳಗಾವಿಗೆ ಕರೆದುಕೊಂಡು ಹೋದರು.

ಈಗ ವಯಸ್ಸಾಗಿರುವ ತಮ್ಮನ್ನು ತಮ್ಮ ಕುಟುಂಬ ಸದಸ್ಯರು ಒಪ್ಪುತ್ತಾರೆಯೇ ಎಂಬ ಸಂಶಯ ಮುಹಮ್ಮದ್ ಅವರನ್ನು ಕಾಡಿತ್ತು. ಕೊನೆಗೆ ಕುಟುಂಬ ಸದಸ್ಯರ ಒತ್ತಾಸೆಗೆ ಕಟ್ಟು ಬಿದ್ದು ಹಾಗೂ ಮಗ ಫೈಝಲ್ ಗಲ್ಫ್ ರಾಷ್ಟ್ರದಿಂದ ಕರೆ ಮಾಡಿ ಮನೆಗೆ ಹಿಂದಿರುಗುವಂತೆ ಮನವಿ ಮಾಡಿದ ನಂತರ ಮನೆಗೆ ವಾಪಸಾಗಲು ಒಪ್ಪಿದರು.

ಕಳೆದ 37 ವರ್ಷಗಳ ಅವಧಿಯಲ್ಲಿ ವಿವಿಧೆಡೆ ಸಂಚರಿಸಿದ್ದ  ಅವರು ಸುಮಾರು ಒಂಬತ್ತು ಭಾಷೆಗಳನ್ನು ಕಲಿತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News