20 ಸಾವಿರ ಕೋಟಿ ರೂ. ಸಾಲದಲ್ಲಿ ಶೇ.99 ನಷ್ಟ ಅನುಭವಿಸಲು ಒಪ್ಪಿದ ಬ್ಯಾಂಕ್‌ಗಳು!

Update: 2019-05-18 14:59 GMT

ಹೊಸದಿಲ್ಲಿ, ಮೇ.18: ದಿವಾಳಿಯಾಗಿರುವ ಮೊಬೈಲ್ ನಿರ್ವಾಹಕ ಸಂಸ್ಥೆ ಏರ್‌ಸೆಲ್ ಹಲವು ಬ್ಯಾಂಕ್‌ಗಳಿಗೆ ಒಟ್ಟಾರೆಯಾಗಿ 20,000 ಕೋಟಿ ರೂ. ಸಾಲ ಬಾಕಿಯುಳಿಸಿದ್ದು, ಸದ್ಯ ಈ ಮೊತ್ತದಲ್ಲಿ ಶೇ.99ನ್ನು ಕೈಬಿಡಲು ಸಾಲದಾತ ಬ್ಯಾಂಕ್‌ಗಳು ಒಪ್ಪಿಗೆ ಸೂಚಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಆದರೆ ಈ ಪ್ರಸ್ತಾವನೆಗೆ ಕೆಲವೊಂದು ಸಾಲದಾತ ಬ್ಯಾಂಕ್‌ಗಳು ಅಸಮ್ಮತಿ ಸೂಚಿಸಿದ್ದು ಸಾಲದಾತರ ಸಮಿತಿಯ (ಸಿಒಸಿ) ನಿರ್ಧಾರವನ್ನು ಸ್ಥಳೀಯ ಮತ್ತು ಅಮೆರಿಕ ನ್ಯಾಯಾಲಯದಲ್ಲಿ ಪ್ರಶ್ನಿಸಲು ನಿರ್ಧರಿಸಿವೆ ಎಂದು ವರದಿಗಳು ತಿಳಿಸಿವೆ. ಯುವಿ ಅಸೆಟ್ ರೀಕನ್‌ಸ್ಟ್ರಕ್ಷನ್ ಕಂಪೆನಿ (ಎಆರ್‌ಸಿ) ಏರ್‌ಸೆಲ್ ಮತ್ತು ಅದಕ್ಕೆ ಸಂಬಂಧಿಸಿದ ಇನ್ನೆರಡು ಕಂಪೆನಿಗಳನ್ನು 150 ಕೋಟಿ ರೂ.ಗೆ ಖರೀದಿಸುವ ಪ್ರಸ್ತಾವನೆಯನ್ನಿಟ್ಟಿದೆ. ಯೋಜನೆಯ ಪ್ರಕಾರ, ಎಆರ್‌ಸಿ ಏರ್‌ಸೆಲ್‌ನ ಫೈಬರ್‌ಗಳು, ಸ್ಪೆಕ್ಟ್ರಮ್ ಮತ್ತು ದೂರಸಂಪರ್ಕ ಸಂಪತ್ತನ್ನು ಮಾರಾಟ ಮಾಡುವ ಮೂಲಕ ಬ್ಯಾಂಕ್‌ಗಳ ಸಾಲವನ್ನು ಮರುಪಾವತಿಸಲು ನಿರ್ಧರಿಸಿದೆ. ಆದರೆ ಏರ್‌ಸೆಲ್ ಬಳಿ ಸದ್ಯ ಮಾರಾಟ ಮಾಡಬಹುದಾದ ಕೆಲವೇ ಕೆಲವು ಸೊತ್ತುಗಳು ಉಳಿದಿದ್ದು ಇವುಗಳಿಂದ ಬ್ಯಾಂಕ್‌ಗಳ ಸಂಪೂರ್ಣ ಸಾಲ ತೀರಿಸುವುದು ಅಸಾಧ್ಯ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.

 ಶೇ.99 ನಷ್ಟ ಅನುಭವಿಸಲು ಒಪ್ಪಿರುವ ಸಿಒಸಿ ನಿರ್ಧಾರಕ್ಕೆ ಶೇ.73.88 ಸಾಲದಾತ ಬ್ಯಾಂಕ್‌ಗಳು ಒಪ್ಪಿಗೆ ಸೂಚಿಸಿದ್ದರೆ ಕೆನರಾ ಬ್ಯಾಂಕ್ ಮತ್ತು ಚೀನಾ ಅಭಿವೃದ್ಧಿ ಬ್ಯಾಂಕ್ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಉಳಿದಂತೆ ಭಾರತೀಯ ಸ್ಟೇಟ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಎಲ್‌ಆ್ಯಂಡಿಟಿ ಫೈನಾನ್ಸ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್, ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಕ್, ಪಂಜಾಬ್ ನ್ಯಾಶನಲ್ ಬ್ಯಾಂಕ್, ಎಕ್ಸಿಮ್ ಬ್ಯಾಂಕ್ ಮತ್ತು ನೋರ್ಡಿಕ್ ಬ್ಯಾಂಕ್ ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News