ಮಮತಾ ಬ್ಯಾನರ್ಜಿ ಅಳಿಯನಿಂದ ಪ್ರಧಾನಿಗೆ ಮಾನನಷ್ಟ ಮೊಕದ್ದಮೆ ನೋಟಿಸ್

Update: 2019-05-18 17:26 GMT

 ಕೋಲ್ಕೊತ್ತಾ, ಮೇ 18: ಪಶ್ಚಿಮಬಂಗಾಳದ ಡೈಮಂಡ್ ಹಾರ್ಬರ್‌ನಲ್ಲಿ ಬುಧವಾರ ನಡೆದ ಪ್ರಚಾರ ರ್ಯಾಲಿಯಲ್ಲಿ ತನ್ನ ವಿರುದ್ಧ ನೀಡಲಾದ ಮಾನ ಹಾನಿಕರ ಹೇಳಿಕೆಗೆ ಸಂಬಂಧಿಸಿ ತೃಣಮೂಲ ಪಕ್ಷದ ನಾಯಕ ಹಾಗೂ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿವಾರ ಮಾನನಷ್ಟ ಮೊಕದ್ದಮೆ ನೋಟಿಸು ಕಳುಹಿಸಿದ್ದಾರೆ.

ತೃಣಮೂಲ ಪಕ್ಷ ಹಾಗೂ ಬಿಜೆಪಿ ನಡುವೆ ವಾಗ್ದಾಳಿ ನಡೆಯುತ್ತಿರುವ ನಡುವೆ ಈ ಬೆಳವಣಿಗೆ ನಡೆದಿದೆ. ಕೋಲ್ಕೊತ್ತಾದಲ್ಲಿ ನಡೆದ ಅಮಿತ್ ಶಾ ಅವರ ಪ್ರಚಾರ ರ್ಯಾಲಿಯಲ್ಲಿ ಹಿಂಸಾಚಾರ ನಡೆದ ಬಳಿಕ ಚುನಾವಣಾ ಆಯೋಗ ಚುನಾವಣಾ ಪ್ರಚಾರದ ಅಂತಿಮ ಗಡುವನ್ನು ಒಂದು ದಿನ ಕಡಿತಗೊಳಿಸಿತ್ತು.

ತೃಣಮೂಲ ಪಕ್ಷದಲ್ಲಿ ಎರಡನೇ ನಾಯಕನೆಂದು ಪರಿಗಣಿಸಲಾಗಿರುವ ಹಾಲಿ ಸಂಸದ ಅಭಿಷೇಕ್ ಬ್ಯಾನರ್ಜಿ, ಡೈಮಂಡ್ ಹಾರ್ಬರ್ ಲೋಕಸಭಾ ಸ್ಥಾನಕ್ಕೆ ಮರು ಚುನಾವಣೆ ನಡೆಸುವಂತೆ ಕೋರಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಯ ನೀಲಾಂಜನ್ ರಾಯ್ ವಿರುದ್ಧ ಅಭಿಷೇಕ್ ಬ್ಯಾನರ್ಜಿ ಸ್ಪರ್ಧಿಸಿದ್ದಾರೆ.

ಅಭಿಷೇಕ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಬಾರಿ ಅವರು ಸೋಲಲಿದ್ದಾರೆ ಎಂದು ಹೇಳಿದ್ದಾರೆ. ಪಶ್ಚಿಮಬಂಗಾಳ ಸರಕಾರ ಅತ್ತೆ-ಅಳಿಯನ ಸರಕಾರ ಎಂದು ಮೋದಿ ಅವರು ಟೀಕಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News