ಬೆಗುಸರಾಯ್: ಕನ್ಹಯ್ಯ ಬೆಂಬಲಿಗನ ಬರ್ಬರ ಹತ್ಯೆ

Update: 2019-05-19 03:43 GMT

ಬೆಗುಸರಾಯ್, ಮೇ 19: ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕನ್ಹಯ್ಯ ಪರ ಸಕ್ರಿಯವಾಗಿ ಪ್ರಚಾರ ಕೈಗೊಂಡಿದ್ದ ಸಿಪಿಐ ಕಾರ್ಯಕರ್ತ ಫಾಗೊ ತಂತಿ (60) ಎಂಬುವವರನ್ನು ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಮಾತಿಹನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಅಪಹರಣಕ್ಕೆ ಒಳಗಾಗಿದ್ದ ಸಣ್ಣ ರೈತನಾಗಿದ್ದ ಫಾಗೊ ಗುರುವಾರ ರಾತ್ರಿ ಭಾವನಾದಪುರದಲ್ಲಿ ಗಂಭೀರ ಗಾಯಗಳೊಂದಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಬೆಗುಸರಾಯ್ ಸದರ್ ಆಸ್ಪತ್ರೆಗೆ ತಕ್ಷಣ ಅವರನ್ನು ಒಯ್ಯಲಾಯಿತಾದರೂ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು.

ಈ ನಡುವೆ ಕೃತ್ಯವನ್ನು ಖಂಡಿಸಿರುವ ಕನ್ಹಯ್ಯ ಕುಮಾರ್, ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ವಿರಮಿಸುವುದಿಲ್ಲ ಎಂದು  ಟ್ವೀಟ್ ಮಾಡಿದ್ದಾರೆ.

ಪರ್ಚುಕಿ ಬಹಿಯಾರ್ ಎಂಬಲ್ಲಿಂದ ಮನೆಗೆ ವಾಪಸ್ಸಾಗುತ್ತಿದ್ದ ಫಾಗೊ ಅವರನ್ನು ಮಹಜಿ ಗ್ರಾಮದಿಂದ ಗುರುವಾರ ಸಂಜೆ ಅಪಹರಿಸಲಾಗಿತ್ತು ಎಂದು ಸಹೋದರ ರಾಮಚಂದ್ರ ತಂತಿ ಹೇಳಿದ್ದಾರೆ. "ಫಾಗೊ ಹಮ್ ಲೇ ಖೆ ರಹೇಂಗೆ ಆಝಾದಿ" ಎಂಬ ಘೋಷಣೆ ಇದ್ದ ಕೆಂಪು ಬಣ್ಣದ ಟಿ-ಷರ್ಟ್ ಧರಿಸಿದ್ದರು ಎಂದು ಠಾಣಾಧಿಖಾರಿ ಸಂತೋಷ್ ಕುಮಾರ್ ಶರ್ಮಾ ಹೇಳಿದ್ದಾರೆ. ಇದು ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರ ಆಕರ್ಷಕ ಘೋಷಣೆಯಾಗಿತ್ತು. ಬೆಗುಸರಾಯ್ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲೂ ಸಿಪಿಐ ಅಭ್ಯರ್ಥಿ ಕನ್ಹಯ್ಯ ಅವರ ಬೆಂಬಲಿಗರು ಈ ಘೋಷಣೆಯನ್ನು ವ್ಯಾಪಕಾಗಿ ಬಳಸಿಕೊಂಡಿದ್ದರು.

ಪೊಲೀಸರ ಕರ್ತವ್ಯಲೋಪ ಸಹೋದರನ ಹತ್ಯೆಗೆ ಕಾರಣ ಎಂದು ರಾಮಚಂದ್ರ ತಂತಿ ಆಪಾದಿಸಿದ್ದಾರೆ. ಫಾಗೊ ಹತ್ಯೆ ಬಗ್ಗೆ ಪೊಲೀಸ್ ಅಧಿಕಾರಿಗೆ ಮಾಹಿತಿ ನೀಡಲಾಗಿತ್ತು. ಐದು ನಿಮಿಷದಲ್ಲಿ ಆತನನ್ನು ರಕ್ಷಿಸದಿದ್ದರೆ ಆತನನ್ನು ಹತ್ಯೆ ಮಾಡಲಾಗುತ್ತದೆ ಎಂದೂ ಮಾಹಿತಿ ನೀಡಲಾಗಿತ್ತು. ಇಷ್ಟಾಗಿಯೂ ಇಡೀ ಪೊಲೀಸ್ ತಂಡ ಅಪರಾಧಿಗಳ ಮುಂದೆ ಶರಣಾಗಿದೆ ಎಂದು ಸಿಪಿಐ ಮಾಜಿ ಶಾಸಕ ಅವಧೇಶ್ ಕುಮಾರ್ ದೂರಿದ್ದಾರೆ. ಇದು ರಾಜಕೀಯ ದ್ವೇಷದಿಂದ ನಡೆದ ಹತ್ಯೆ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಅಂಜನ್ ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News