ಕ್ಯಾನ್ಸರ್ ಔಷಧಿಗಳು ಇನ್ನು ಅಗ್ಗ

Update: 2019-05-19 04:08 GMT

ಚೆನ್ನೈ, ಮೇ 19: ಕ್ಯಾನ್ಸರ್ ಚಿಕಿತ್ಸೆ ಬಡರೋಗಿಗಳ ಕೈಗೆಟಕುವಂತೆ ಮಾಡುವ ನಿಟ್ಟಿನಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಔಷಧಿಗಳ ಬೆಲೆಯನ್ನು ದೊಡ್ಡ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ. ಶ್ವಾಸಕೋಶದ ಕ್ಯಾನ್ಸರ್‌ಗೆ ಕಿಮೋಥೆರಪಿಯಲ್ಲಿ ಬಳಸುವ ದುಬಾರಿ ಚುಚ್ಚುಮದ್ದು ಸೇರಿದಂತೆ ಕ್ಯಾನ್ಸರ್ ವಿರುದ್ಧದ ಔಷಧಿಗಳ ಬೆಲೆಯನ್ನು ಶೇಕಡ 87ರಷ್ಟು ಕಡಿತಗೊಳಿಸಿ ಬೆಲೆ ನಿಯಂತ್ರಣ ಪ್ರಾಧಿಕಾರ ಆದೇಶ ಹೊರಡಿಸಿದೆ.

ಔಷಧ ಉತ್ಪಾದಕರಿಂದ ಮಾಹಿತಿ ಪಡೆದ ಬಳಿಕ ರಾಷ್ಟ್ರೀಯ ಫಾರ್ಮಸ್ಯೂಟಿಕಲ್ ಬೆಲೆ ನಿಗದಿ ಪ್ರಾಧಿಕಾರ, ಕ್ಯಾನ್ಸರ್ ವಿರುದ್ಧದ ಚಿಕಿತ್ಸೆಗೆ ಬಳಸುವ ಒಂಬತ್ತು ಔಷಧಿಗಳನ್ನು ಬೆಲೆ ನಿಯಂತ್ರಣ ಚೌಕಟ್ಟಿನಲ್ಲಿ ತರಲು ಮೇ 15ರಂದು ನಿರ್ಧಾರ ಕೈಗೊಂಡಿತ್ತು.

ಪರಿಷ್ಕೃತ ಆದೇಶದ ಪ್ರಕಾರ, ಶ್ವಾಸಕೋಶದ ಕ್ಯಾನ್ಸರ್‌ನಲ್ಲಿ ಕಿಮೋಥೆರಪಿಗೆ ಬಳಸುವ ಚುಚ್ಚುಮದ್ದು ಪೆಮೆಟ್ರೆಕ್ಸೆಡ್ (500 ಎಂಜಿ) ಬೆಲೆ 22 ಸಾವಿರ ರೂಪಾಯಿಗಳಿಂದ 2,800 ರೂಪಾಯಿಗೆ ಇಳಿದಿದೆ. ಇದೇ ಔಷಧಿಯ 100 ಮಿಲಿಗ್ರಾಂ ಡೋಸ್‌ನ ಬೆಲೆ 7,700 ರೂಪಾಯಿಯಿಂದ 800 ರೂಪಾಯಿಗೆ ಕಡಿಮೆಯಾಗಲಿದೆ.

ಸಾಮಾನ್ಯವಾಗಿ ಬಳಸಲ್ಪಡುವ ಇನ್ನೊಂದು ಕಿಮೊ ಔಷಧಿ ಎಪಿರುಬಿಸಿನ್ ಬೆಲೆ 10 ಮಿಲಿಗ್ರಾಂ ಚುಚ್ಚುಮದ್ದಿಗೆ ಹಾಲಿ ಇರುವ 561 ರೂಪಾಯಿ ಬದಲಾಗಿ 276.8 ರೂಪಾಯಿ ಆಗುತ್ತದೆ. 500 ಎಂಜಿ ಚುಚ್ಚುಮದ್ದಿನ ಬೆಲೆ 2,662 ರೂಪಾಯಿಯಿಂದ 960 ರೂಪಾಯಿಗೆ ಇಳಿಯಲಿದೆ.

ಎರ್ಲೋತಿನಿಬ್ (100 ಎಂಜಿ) ಎಂಬ ಮತ್ತೊಂದು ಗುಳಿಗೆಯ ಬೆಲೆ 10 ಮಾತ್ರೆಗಳಿಗೆ 6,000 ರೂಪಾಯಿಯಿಂದ 1,840 ರೂಪಾಯಿಗೆ ಕಡಿಮೆಯಾಗಲಿದೆ. 150 ಎಂಜಿ 10 ಮಾತ್ರೆಗಳಿಗೆ 8,800 ರೂಪಾಯಿಗಳಿಂದ 2,400 ರೂಪಾಯಿ ಆಗಲಿದೆ. ಕಳೆದ ಮಾರ್ಚ್ ತಿಂಗಳಿನಿಂದೀಚೆಗೆ ಕ್ಯಾನ್ಸರ್ ಚಿಕಿತ್ಸೆಯ ಔಷಧಿಗಳ ಬೆಲೆಯನ್ನು ಎನ್‌ಪಿಪಿಎ ಕಡಿತಗೊಳಿಸುತ್ತಾ ಬಂದಿದೆ. ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿ ಔಷಧಗಳ (ಬೆಲೆ ನಿಯಂತ್ರಣ) ಆದೇಶ- 2013ರಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಔಷಧಿಗಳ ಮಾರಾಟದಲ್ಲಿನ ಲಾಭವನ್ನು ಶೇಕಡ 30ಕ್ಕೆ ಮಿತಿಗೊಳಿಸಿದೆ. ಇದರಿಂದಾಗಿ 72 ಔಷಧಿಗಳ ಬೆಲೆ ಇಳಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News