ಗೋಡ್ಸೆಯನ್ನು ದೇಶಭಕ್ತ ಎಂದ ಪ್ರಜ್ಞಾ ಉಚ್ಛಾಟನೆಗೆ ಬಿಜೆಪಿ ಕಠಿಣ ನಿಲುವು ತಾಳಲಿ: ನಿತೀಶ್ ಕುಮಾರ್

Update: 2019-05-19 08:16 GMT

 ಪಾಟ್ನಾ, ಮೇ 19: ಮಹಾತ್ಮಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ‘ದೇಶ ಭಕ್ತ’ಎಂಬ ಭೋಪಾಲ್‌ನ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್ ವಿವಾದಾತ್ಮಕ ಹೇಳಿಕೆಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರವಿವಾರ ತೀವ್ರವಾಗಿ ಖಂಡಿಸಿದ್ದಾರೆ. ಪ್ರಜ್ಞಾರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಬೇಕೆಂದು ಆಗ್ರಹಿಸಿದ್ದಾರೆ.

ಬಿಜೆಪಿ ಮಿತ್ರಪಕ್ಷ ಜೆಡಿಯು ಅಧ್ಯಕ್ಷರಾಗಿರುವ ನಿತೀಶ್, ಇಂತಹ ವಿಚಾರವನ್ನು ನಮ್ಮ ಪಕ್ಷ ಸಹಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

 ‘‘ಇದೊಂದು ಅತ್ಯಂತ ಖಂಡನಾರ್ಹ ಹೇಳಿಕೆ. ಗೋಡ್ಸೆಯನ್ನು ದೇಶಭಕ್ತ ಎಂಬ ಠಾಕೂರ್ ಹೇಳಿಕೆಯನ್ನು ನಾವು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ. ಬಾಪು ರಾಷ್ಟ್ರಪಿತ ಹಾಗೂ ಗೋಡ್ಸೆ ಕುರಿತು ಈ ರೀತಿ ಮಾತನಾಡಿದರೆ ಯಾರೂ ಇಷ್ಟಪಡುವುದಿಲ್ಲ’’ ಎಂದು ಕುಮಾರ್ ಹೇಳಿದ್ದಾರೆ.

ಏಳನೇ ಹಾಗೂ ಕೊನೆಯ ಹಂತದ ಚುನಾವಣೆಯಲ್ಲಿ ರವಿವಾರ ರಾಜ್‌ಭವನ ಸಮೀಪದ ಸರಕಾರಿ ಶಾಲೆಯಲ್ಲಿ ಮತ ಚಲಾಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ್, ಪ್ರಜ್ಞಾರನ್ನು ಬಿಜೆಪಿ ತನ್ನ ಪಕ್ಷದಿಂದ ಉಚ್ಚಾಟಿಸಬೇಕೇ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ,‘‘ಅವರನ್ನು ಉಚ್ಚಾಟಿಸುವ ಸಂಬಂಧ ಕಠಿಣ ನಿಲುವು ತಾಳಬೇಕು. ಆದರೆ, ಇದು ಬಿಜೆಪಿಯ ಆಂತರಿಕ ವಿಚಾರ. ದೇಶ ಅಥವಾ ತತ್ವದ ಆಧಾರದಲ್ಲಿ ಇಂತಹ ಹೇಳಿಕೆಯನ್ನು ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News