ಕೋಮುಗಲಭೆ ತೀವ್ರತೆಗೆ ಸರಕಾರದ ಒತ್ತಡವೇ ಕಾರಣ: ತೀಸ್ತಾ ಸೆಟಲ್ವಾಡ್

Update: 2019-05-19 11:20 GMT

ಮಂಗಳೂರು, ಮೇ 19: ಸರಕಾರ ಒತ್ತಡವಿಲ್ಲದೆ ಇದ್ದಲ್ಲಿ ಯಾವುದೇ ಕೋಮು ಗಲಭೆಯೂ 24 ಗಂಟೆಗಿಂತ ಹೆಚ್ಚು ಕಾಲ ಮುಂದುವರಿಯದು. ಇದರ ಜತೆಗೆ ಪೊಲೀಸ್ ಪಡೆಯಲ್ಲಿಯೂ ಕೋಮುವಾದಿಗಳು ಸೇರಿಕೊಂಡಿರುವುದು ಗಲಭೆ ತೀವ್ರಗೊಳ್ಳಲು ಕಾರಣವಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತೆ, ಪತ್ರಕರ್ತೆ ತೀಸ್ತಾ ಸೆಟಲ್ವಾಡ್ ವಿಶ್ಲೇಷಿಸಿದ್ದಾರೆ.

ನಗರದ ಸೈಂಟ್ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ಇಂದು ಪತ್ರಕರ್ತೆ ಸತ್ಯಾ ಎಸ್.ರವರು ಅನುವಾದಿಸಿರುವ ‘ಸಂವಿಧಾನದ ಕಾಲಾಳು’ ತೀಸ್ತಾ ಸೆಟಲ್ವಾಡ್ ರವರ ನೆನಪುಗಳು ಎಂಬ ಕೃತಿ ಬಿಡುಗಡೆ ಸಮಾರಂಭದಲ್ಲಿ ಆಯೋಜಿಸಲಾದ ‘ಜಾತ್ಯತೀತತೆಯ ರಕ್ಷಣೆಯಲ್ಲಿ ನಾವು- ನೀವು’ ಎಂಬ ವಿಚಾರ ಸಂಕಿರಣ ಉದ್ದೇಶಿಸಿ ಅವರು ಮಾತನಾಡಿದರು.

ಪೊಲೀಸರ ಮೇಲೆ ಸಜ್ಜನರು, ಜಾತ್ಯತೀತವಾದಿಗಳು ಒತ್ತಡ ಹಾಕುವ ಮೂಲಕ ಶಾಂತಿ ಕಾಪಾಡಲು ಪ್ರೇರೇಪಿಸಬೇಕು ಎಂದು ಹೇಳಿದ ಅವರು, ಜಾತ್ಯತೀತೆಯನ್ನು ರಕ್ಷಿಸಲು ಸ್ಥಳೀಯ ಹೋರಾಟ ಅತ್ಯಗತ್ಯ ಎಂದರು.

ಜಾತ್ಯತೀತತೆಯ ರಕ್ಷಣೆಗೆ ಸಂಬಂಧಿಸಿ ಚರ್ಚೆ 50 ವರ್ಷಗಳ ಹಿಂದಕ್ಕೆ ಸಾಗಿದೆ. ಋಣಾತ್ಮಕ, ಏಕಮುಖ ಚರ್ಚೆಗಳು ಇಂದು ನಡೆಯುತ್ತಿವೆ. ನಮ್ಮ ಪರಂಪರೆ, ಇತಿಹಾಸದ ಸಮರ್ಪಕ ಗ್ರಹಿಕೆ ಇಲ್ಲದೆ ನಡೆಯುತ್ತಿರುವ ಚರ್ಚೆಗೆ ವಿರುದ್ಧವಾಗಿ ಇತಿಹಾಸ ಪ್ರಜ್ಞೆಯನ್ನು ಯುವ ಜನರಲ್ಲಿ ಮೂಡಿಸುವ ವೇದಿಕೆ ಕಲ್ಪಿಸಬೇಕು. ಬಹುಸಂಖ್ಯಾತರ ಕೋಮುವಾದವನ್ನು ವಿರೋಧಿಸುವ ಜತೆಯಲ್ಲೇ ಅಲ್ಪಸಂಖ್ಯಾತರ ಕೋಮುವಾದವನ್ನು ವಿರೋಧಿಬೇಕು ಎಂದು ಅವರು ಹೇಳಿದರು.

ಜಾತ್ಯತೀಯತೆಗಾಗಿ ಹೋರಾಟ ಹಾಗೂ ಮತೀಯವಾದವನ್ನು ಹತ್ತಿಕ್ಕುವ ಸಂದರ್ಭ ನಾವು ದ್ವೇಷವನ್ನು ಶಾಂತಿಯ ಮೂಲಕ ಪರಿವರ್ತಿಸುವುದು ಅತ್ಯಗತ್ಯವಾಗಿದೆ. ಇಂದು ದ್ವೇಷಪೂರಿತ ಭಾಷಣಗಳ ಮೂಲಕ ದುರ್ಬಲ ವರ್ಗವನ್ನು ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಆ ದ್ವೇಷಭರಿತ ಮಾತುಗಳನ್ನು ಶಾಂತಿಯ ಸಂದೇಶದ ಮೂಲಕ ಹತ್ತಿಕ್ಕುವ ಪ್ರಯತ್ನ ಆಗಬೇಕಾಗಿದೆ ಎಂದು ಅವರು ಹೇಳಿದರು.

ಅನುವಾದಿತ ಕೃತಿಯ ಬಗ್ಗೆ ಹಿರಿಯ ಲೇಖಕ, ಚಿಂತಕ ಜಿ. ರಾಜಶೇಖರ್ ಪರಿಚಯ ನೀಡಿದರು.

ಕೃತಿಯ ಅನುವಾದಕಿ ಸತ್ಯಾ ಎಸ್. ಮಾತನಾಡಿ, ತೀಸ್ತಾರವರು ತಮ್ಮ ಮೂಲ ಕೃತಿಯಲ್ಲಿ ಯಾವುದೇ ಭಾವ ತೀವ್ರತೆ ಇಲ್ಲದೆ ಗುಜರಾತ್ ಹಿಂಸೆಯನ್ನು ವಿವರಿಸಿದ್ದಾರೆ. ಹಿಂಸೆಯ ಸಂದರ್ಭ ಮನುಷ್ಯ ಜೀವಗಳನ್ನು ರಕ್ಷಿಸಬೇಕಾದ ಸರಕಾರ ಅದನ್ನು ಮೆಟ್ಟಿ ನಿಂತು ಅಟ್ಟಹಾಸ ಮಾಡುತ್ತಿದ್ದ ಘಟನೆಗಳನ್ನು ತೀಸ್ತಾರವರು ವಿವರಿಸಿದ ರೀತಿಯನ್ನು ಶಬ್ಧಗಳಲ್ಲಿ ಹಿಡಿದಿಡಲು ತುಂಬಾನೇ ಕಷ್ಟಪಡಬೇಕಾಯಿತು. ತೀಸ್ತಾರವರು ಆ ಜನರ ನಡುವೆ ಇದ್ದು ಅವರ ಬದುಕನ್ನು ಬದುಕಿದವರು. ಹಾಗಾಗಿ ಅವರು ಅನುಭವಿಸಿದ ಕಷ್ಟದ ನಡುವೆ ಅನುವಾದದ ಸಂದರ್ಭ ನೆನೆದು ನಾನು ಹಠ ಹಿಡಿದೇ ಕೃತಿಯನ್ನು ಪೂರ್ಣಗೊಳಿಸಿದೆ ಎಂದು ಹೇಳಿದರು.

ಕೋಮುವಾದದ ಹಿಂದಿದೆ ವ್ಯಾಪಾರ: ಮಟ್ಟು

ಜನಸಾಮಾನ್ಯರು ಸಾಂಸ್ಕೃತಿಕ ರಾಜಕಾರಣವನ್ನು ಅರಿತುಕೊಂಡಾಗಲೇ ಇಂದು ಉದ್ಭವಿಸಿದ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯ. ಸಾಂಸ್ಕೃತಿಕ ರಾಜಕಾರಣವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಗುಜರಾತ್ ಮತ್ತು ಮಂಗಳೂರಲ್ಲಿ ತಿರುಗಾಡಿ ಅವಲೋಕನ ಮಾಡಬೇಕು ಎಂದು ಪತ್ರಕರ್ತ, ಚಿಂತ್ರಕ ದಿನೇಶ್ ಅಮಿನ್ ಮಟ್ಟು ಅಭಿಪ್ರಾಯಪಟ್ಟಿದ್ದಾರೆ.

ಗುಜರಾತ್ ಮತ್ತು ಮಂಗಳೂರಿಗೆ ಹಲವು ಸಾಮ್ಯತೆಗಳಿವೆ. ಗುಜರಾತಿಗಳು ಮೂಲತಃ ವ್ಯಾಪಾರಸ್ಥರು. ಮಂಗಳೂರಲ್ಲಿ ಕೋಮುವಾದದ ಹಿಂದೆ ರಾಜಕೀಯವಿದೆ ಎಂದರೆ ನಾವು ಮೂರ್ಖರು. ಆದರೆ ಕರಾವಳಿಯಲ್ಲಿ ಕೋಮುವಾದದ ಹಿಂದೆ ವ್ಯಾಪಾರ ಇದೆ. ಸುರತ್ಕಲ್‌ನಲ್ಲಿ ಕೋಮುಗಲಭೆಗಳು ನಡೆದಾಗ ಅಂಗಡಿಗಳನ್ನು ಕಳೆದುಕೊಂಡವರು ಮುಸ್ಲಿಮರು. ಓರ್ವ ಮುಸ್ಲಿಮನ ಅಂಗಡಿ ಸುಟ್ಟುಹೋದರೆ ಇನ್ನೊಬ್ಬನ ಅಂಗಡಿ ವ್ಯಾಪಾರ ಹೆಚ್ಚುತ್ತದೆ. ಇದು ವಾಸ್ತವ, ಈ ಬಗ್ಗೆ ಜಾಗೃತರಾಗುವುದು ಅಗತ್ಯ ಎಂದವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸೈಂಟ್ ಅಲೋಶಿಯಸ್ ಕಾಲೇಜಿನ ರಿಜಿಸ್ಟ್ರಾರ್ ಪ್ರೊ.ಎ.ಎಂ. ನರಹರಿ ಪುಸ್ತಕ ಬಿಡುಗಡೆ ಮಾಡಿದರು.

ಕ್ರಿಯಾ ಮಾಧ್ಯಮ, ಸಮುದಾಯ ಸಂಸ್ಥೆಯ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ವೇದಿಕೆಯಲ್ಲಿ ನಿವೃತ್ತ ಡಿವೈಎಸ್ಪಿ ಟಿ.ಸಿ.ಎಂ. ಶರೀಫ್ ಉಪಸ್ಥಿತರಿದ್ದರು. ಸಮುದಾಯ ಸಂಸ್ಥೆಯ ಅಧ್ಯಕ್ಷ ಪ್ರೊ. ರಾಜೇಂದ್ರ ಉಡುಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ರಿಯಾ ಮಾಧ್ಯಮ ನಿರ್ದೇಶಕ ಯಶವಂತ ಮರೋಳಿ ಸ್ವಾಗತಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News