ಸಂವಿಧಾನದ ಕಾಲಾಳು ಕೃತಿ ‘ತೀಸ್ತಾ ಸ್ವಗತ’: ಜಿ. ರಾಜಶೇಖರ್

Update: 2019-05-19 11:10 GMT

ಮಂಗಳೂರು, ಮೇ 19: ಗುಜರಾತ್ ಹಿಂಸೆಯ ಬಗ್ಗೆ ತೀಸ್ತಾ ವರ್ಣನೆ, ಅನೇಕ ಕೋಮು ಹಿಂಸೆಯ ಘಟನೆಗಳು ಮಾತಿಗೆ ಮೀರಿದವು. ಅನ್ಯಾಯದ ವಿರುದ್ಧ ನಾವು ವೌನವಾಗಿರದೆ ಧ್ವನಿ ಎತ್ತುವ ಅನಿವಾರ್ಯತೆಯನ್ನು ತೀಸ್ತಾ ಅವರು ಸ್ಪಷ್ಟಪಡಿಸಿದ್ದು, ಕೃತಿಯನ್ನ್ನು ‘ತೀಸ್ತಾ ಸ್ವಗತ’ ಎಂದು ತಾನು ಕರೆಯುವುದಾಗಿ ಹಿರಿಯ ಲೇಖಕ, ಚಿಂಕ ಜಿ. ರಾಜಶೇಖರ್ ಅಭಿಪ್ರಾಯಿಸಿದ್ದಾರೆ.

ನಗರದ ಸೈಂಟ್ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ಇಂದು ಪತ್ರಕರ್ತೆ ಸತ್ಯಾ ಎಸ್.ರವರು ಅನುವಾದಿಸಿರುವ ‘ಸಂವಿಧಾನದ ಕಾಲಾಳು’ ತೀಸ್ತಾ ಸೆಟಲ್ವಾದ್‌ರವರ ನೆನಪುಗಳು ಎಂಬ ಕೃತಿ ಬಿಡುಗಡೆ ಸಮಾರಂಭದಲ್ಲಿ ಕೃತಿ ಪರಿಚಯ ನೀಡಿ ಮಾತನಾಡಿದರು.

ತೀಸ್ತಾ ಸೆಟಲ್ವಾದರ ನೆನಪುಗಳನ್ನು ಒಳಗೊಂಡ ಕೃತಿ ಸಂವಿಧಾನದ ಕಾಲಾಳು ಪುಸ್ತಕವು ಅನಂತ ಮೂರ್ತಿಯವರ ಮಾತು ಸೋತ ಭಾರತ ಕೃತಿಯನ್ನು ನೆಪಿಸುತ್ತದೆ ಎಂದವರು ಹೇಳಿದರು.

ತೀಸ್ತಾ ಅವರು ತಮ್ಮ ಆತ್ಮ ಚರಿತ್ರೆಯನ್ನು ತಮ್ಮನ್ನು ಇಲ್ಲವಾಗಿಸಿಕೊಂಡಿದ್ದಾರೆ. ಹಾಗಾಗಿ ಕೃತಿಯಲ್ಲಿ ನಮಗೆ ಕಾಣಿಸುವುದು ಕೋಮುವಾದದ ವಿವಿಧ ಮುಖಗಳೇ ಹೊರತು ತೀಸ್ತಾರಲ್ಲ. ನಾನು ಈ ಕಾಲದ ಒಂದು ಭಾಗ. ನಾನೂ ಜವಾಬ್ಧಾರಿ ಎಂಬುದನ್ನು ತಮ್ಮ ಇಡೀ ಕೃತಿಯಲ್ಲಿ ಪ್ರಸ್ತುತಪಡಿಸುವ ಪ್ರಯತ್ನವನ್ನು ಮಾಡಿದ್ದಾರೆ. ಹಾಲಿ ಸರಕಾರ ಅವರನ್ನು ರಾಷ್ಟ್ರ ವಿರೋಧಿ ಎಂಬುದಾಗಿ ಬಿಂಬಿಸಿದೆ. ಆದರೆ ಅವರ ವಂಶಾವಳಿಯನ್ನು ಗಮನಿಸಿದರೆ ಅವರ ಅಜ್ಜ ಭಾರತದ ಪ್ರಥಮ ಅಟಾರ್ನಿ ಜನರಲ್, ತಂದೆಯೂ ಅದೇ ಹಾದಿಯಲ್ಲಿ ಸಾಗಿದವರು. ಹಾಗಾಗಿ ಇಂತಹ ಒಂದು ವಂಶದ ಕುಡಿಯ ಬಗ್ಗೆ ಹಾಲಿ ಸರಕಾರ ಚರಿತ್ರೆಯ ಯಾವುದೇ ಅರಿವಿಲ್ಲದೆ ಅವರನ್ನು ದೇಶದ್ರೋಹಿ, ಅಪರಾಧಿ ಎಂಬ ರೀತಿಯಾಗಿ ಚಿತ್ರಿಸುತ್ತಿರುವುದು ವಿಷಾದದ ಸಂಗತಿ ಎಂದು ರಾಜಶೇಖರ್ ಹೇಳಿದರು.

ಕಾನೂನು ಮತ್ತು ಸಂವಿಧಾನದ ವೌಲ್ಯಗಳನ್ನು ತಮ್ಮ ಜೀವನದ ಉಸಿರು ಮಾಡಿಕೊಂಡ ಕುಟುಂಬ ನನ್ನದು. ತುರ್ತು ಪರಿಸ್ಥಿತಿ ಸಂದರ್ಭ ತಮ್ಮ ಮನೆ ಪ್ರತಿಭಟನೆಯ ಕೇಂದ್ರವಾಗಿತ್ತು ಎಂಬುದನ್ನು ತಮ್ಮ ಕೃತಿಯಲ್ಲಿ ನಿರೂಪಿಸಿದ್ದಾರೆ ಎಂದು ಕೃತಿ ಬಗ್ಗೆ ರಾಜಶೇಖರ್ ವಿವರಿಸಿದರು.

ದೇಶದಲ್ಲಿ ಇಂದು ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣವಿದೆ. ಇಂದು ನಾವು ಕಾಣುತ್ತಿರುವ ಕೋಮುವಾದ ಕೇವಲ ರಾಷ್ಟ್ರ ಪ್ರಭುತ್ವದ ಹಿಂಸೆ, ದಬ್ಬಾಳಿಕೆ ಮಾತ್ರವಲ್ಲದೆ, ನಾಗರಿಕ ಸಮಾಜದ ಪ್ರಮುಖ ಸಂಸ್ಥೆಗಳ ದಬ್ಬಾಳಿಕೆ ಹಾಗೂ ಹಿಂಸೆಯಾಗಿದೆ. ರಾಷ್ಟ್ರ ಪ್ರಭುತ್ವದ ಹಿಂಸೆ ಹಾಗೂ ನಾಗರಿಕ ಸಮಾಜದ ಹಿಂಸೆ ಇವೆರಡೂ ಏಕೀಗೂಡಿಸುವುದು ಆರೆಸ್ಸೆಸ್‌ನಲ್ಲಿ. ಹಾಗಾಗಿ ಹಿಂದುತ್ವವಾದ ಮತ್ತು ಪ್ರತಿನಿಧಿಸುವ ಆರೆಸ್ಸೆಸ್ ಇಡೀ ದೇಶದ ಪ್ರಜಾಪ್ರಭುತ್ವ, ಸ್ವಾತಂತ್ರಕ್ಕೆ, ಸಂವಿಧಾನಕ್ಕೆ ತರಬಹುದಾದ ಅಪಾಯವನ್ನು ಗ್ರಹಿಸದಿದ್ದರೆ, ಮುಂದೆ ಅತೀ ದೊಡ್ಡ ಅಪಾಯ ಕಾದಿದೆ ಎಂದು ಅವರು ಹೇಳಿದರು.

2002ರ ಗುಜರಾತ್ ಗಲಭೆಯನ್ನು ವಿರೋಧಿಸುವವರು 1984ರ ಸಿಖ್ ನರಮೇಧವನ್ನು ವಿರೋಧಿಸಿದ್ದರು. ಆದರೆ ಹಿಂದುತ್ವವಾದಿಗಳು ಆ ಸತ್ಯವನ್ನು ಮರೆಮಾಚುತ್ತಿದ್ದಾರೆ. ನಾವು ಅವರ ಈ ಕುತಂತ್ರವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಸಿಖ್ ನರಮೇಧವನ್ನು ಗುಜರಾತ್ ಹಿಂಸೆಗೆ ಉತ್ತರವಾಗಿ, ಪ್ರತಿಯಾಗಿ ಮಾತನಾಡುವವರು ಅಸ್ಸಾಂನ ನೆಲ್ಲಿಯಲ್ಲಿ ನಡೆದ ಘಟನೆಯನ್ನು ಯಾಕೆ ಪ್ರಸ್ತಾಪಿಸುವುದಿಲ್ಲ ಎಂಬುನ್ನು ತೀಸ್ತಾ ಅವರು ಪ್ರಶ್ನಿಸಿದ್ದಾರೆ.

1992ರ ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಅದರ ರುವಾರಿ ಎಲ್.ಕೆ. ಅಡ್ವಾಣಿಗಾಗಲಿ, ಪಾಲ್ಗೊಂಡ ಪ್ರಮುಖರಿಗಾಗಲಿ ಯಾವುದೇ ಶಿಕ್ಷೆ ಆಗಿಲ್ಲ. ಇದು ನಮ್ಮ ಕಾಲದ ವಿಪರ್ಯಾಸ. ಸಾರ್ವಜನಿಕರ ಸಮ್ಮುಖದಲ್ಲೇ ಈ ಹಿಂಸೆ ನಡೆದರೂ ಉತ್ತರ ದಾಯಿತ್ವವೇ ಇಲ್ಲದ, ಜವಾಬ್ದಾರಿ ಹೊರದ, ಶಿಕ್ಷೆಯೂ ಆಗದ ಹಿಂಸೆಗೆ ಭಾರತ ಸಾಕ್ಷಿಯಾಗಿದೆ. ಬಾಬರಿ ಮಸೀದಿ ಉರುಳಿದ ದಿನ ಸಂಜೆ ಮುಂಬೈನಲ್ಲಿ ಆರಂಭವಾದ ಗಲಭೆ 1993ರ ಜನವರಿಗೂ ಹಬ್ಬಿದ ಕೋಮು ಹಿಂಸಾಚಾರವನ್ನೂ ಪುಸ್ತಕದಲ್ಲಿ ತೀಸ್ತಾರವರು ಉಲ್ಲೇಖಿಸಿದ್ದಾರೆ ಎಂದು ರಾಜಶೇಖರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News