ಬಿಜೆಪಿ, ಆರೆಸ್ಸೆಸ್ ಸದಸ್ಯರಿಂದ ನನ್ನ ತಂದೆಯ ಹತ್ಯೆ: ಗೋರಕ್ಷಕರ ಗುಂಡಿಗೆ ಬಲಿಯಾದ ವ್ಯಕ್ತಿಯ ಪುತ್ರಿಯ ಆರೋಪ

Update: 2019-05-19 15:34 GMT

ಶ್ರೀನಗರ, ಮೇ 19: ದನಗಳನ್ನು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ನನ್ನ ತಂದೆಯನ್ನು ಆರೆಸ್ಸೆಸ್ ಹಾಗೂ ಬಿಜೆಪಿ ಸದಸ್ಯರು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಇದು ಅಮಾನುಷ ಹತ್ಯೆ. ನನ್ನ ತಂದೆಯನ್ನು ಹತ್ಯೆಗೈದ ಆರೋಪಿಗಳನ್ನು ನೇಣಿಗೇರಿಸಬೇಕು ಎಂದು ಹತ್ಯೆಯಾದ ಸ್ಥಳೀಯ ನಿವಾಸಿ ನಯೀಮ್ ಅಹ್ಮದ್ ಶಾ ಅವರ ಪುತ್ರಿ ಹುಮೈರಾ ಹೇಳಿದ್ದಾರೆ.

  ಗೋರಕ್ಷಕರಿಂದ ಸ್ಥಳೀಯ ನಿವಾಸಿ ನಯೀಮ್ ಅಹ್ಮದ್ ಶಾ ಹತ್ಯೆಯಾದ ಹಾಗೂ ಅವರ ಸಹವರ್ತಿ ಝಹೂರ್ ಅಹ್ಮದ್ ಗಾಯಗೊಂಡ ಬಳಿಕ ಪಟ್ಟಣದಲ್ಲಿ ಸಾಮೂಹಿಕ ಪ್ರತಿಭಟನೆ ನಡೆದಿದೆ. ಇದರೊಂದಿಗೆ ಕೋಮು ಹಿಂಸಾಚಾರ ಭುಗಿಲೆದ್ದಿದೆ.

 ಆದರೆ, ಈ ಹತ್ಯೆ ಹಿಂದೆ ಗೋರಕ್ಷಕರ ಕೈವಾಡ ಇದೆ ಎಂಬ ವರದಿಯನ್ನು ಜಿಲ್ಲಾಡಳಿತ ನಿರಾಕರಿಸಿದೆ. ಜಿಲ್ಲಾಡಳಿತದ ಈ ಪ್ರತಿಪಾದನೆ ನಿರಾಕರಿಸಿರುವ ನಯೀಮ್ ಕುಟುಂಬ, ಜಿಲ್ಲಾಡಳಿತ ಕೋಮುವಾದಿ ಪಡೆಯ ಪ್ರಭಾವದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಆರೋಪಿಸಿದ್ದಾರೆ ಹಾಗೂ ಹತ್ಯೆ ಬಗ್ಗೆ ಸ್ವತಂತ್ರ ಹಾಗೂ ಪಾರದರ್ಶಕ ತನಿಖೆ ನಡೆಸುವಂತೆ ಆಗ್ರಹಿಸಿದೆ.

''ನನ್ನ ತಂದೆ ಸರ್ಸಾಲ್ ಗ್ರಾಮದಿಂದ ಗೋವುಗಳೊಂದಿಗೆ ಮನೆಗೆ ಹಿಂದಿರುಗುತ್ತಿದ್ದಾಗ ಸಂಘ ಪರಿವಾರದ ಸದಸ್ಯರು ಅವರ ಮೇಲೆ ಗುಂಡು ಹಾರಿಸಿ ಹತ್ಯೆಗೈದರು'' ಎಂದು ನಯೀಮ್ ಅವರ ಪುತ್ರಿ ಹುಮೈರಾ ಹೇಳಿದ್ದಾರೆ.

 ಹತ್ಯೆಗೆ ಸಂಬಂಧಿಸಿ ಕೆಲವು ಶಂಕಿತ ವ್ಯಕ್ತಿಗಳನ್ನು ಜಮ್ಮು ಹಾಗೂ ಕಾಶ್ಮೀರ ಪೊಲೀಸರು ವಶಕ್ಕೆ ತೆಗೆದುಕೊಂಡ ಹೊರತಾಗಿಯೂ ಜಿಲ್ಲಾಡಳಿತ ಕರ್ಫ್ಯೂ ಹೇರಿದೆ ಹಾಗೂ ಪರಿಸ್ಥಿತಿ ನಿಯಂತ್ರಣಕ್ಕೆ ಸೇನೆಗೆ ಕರೆ ನೀಡಿದೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ನಿಲ್ಲಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.

ಘಟನೆಗೆ ಸಂಬಂಧಿಸಿ 8 ಮಂದಿ ಶಂಕಿತರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಪೊಲೀಸ್ ಹಾಗೂ ಜಿಲ್ಲಾಡಳಿತ ಆರೋಪಿಗಳ ಹಿತಾಸಕ್ತಿ ಅನುಸರಿಸಿ ಕಾರ್ಯ ನಿರ್ವಹಿಸುತ್ತಿದೆ ಎಂದು ನಯೀಮ್ ಕುಟುಂಬ ಆರೋಪಿಸಿದೆ.

 ''ಹತ್ಯೆಯ ಹಿಂದೆ ಯಾರಿದ್ದಾರೆ ಎಂದು ಪೊಲೀಸರಿಗೆ ತಿಳಿದಿದೆ. ಆದರೆ, ಅವರು ಆರೋಪಿಗಳನ್ನು ಬಂಧಿಸುತ್ತಿಲ್ಲ.'' ಎಂದು ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಿಂದ ಪಾರಾದ ಝಹೂರ್ ಅಹ್ಮದ್ ಅವರ ಪುತ್ರ ಮುಹಮ್ಮದ್ ಸಮೀರ್ ತಿಳಿಸಿದ್ದಾರೆ.

ಆರೋಪಿಗಳು ಟಾರ್ಚ್ ಹಾಯಿಸಿದರು. ಅನಂತರ ನೇರವಾಗಿ ನಯೀಮ್‌ಗೆ ಗುಂಡಿಕ್ಕಿದರು. ನಯೀಮ್ ಅವರನ್ನು ಕೊಲ್ಲುವುದೇ ಅವರ ಉದ್ದೇಶವಾಗಿತ್ತು ಎಂದು ಸಮೀರ್ ಹೇಳಿದ್ದಾರೆ.

ಚೇನಬ್ ಕಣಿವೆಯಿಂದ ಮುಸ್ಲಿಂ ಸಮುದಾಯವನ್ನು ತೆರವುಗೊಳಿಸುವುದು ಸಂಘಪರಿವಾರದ ಉದ್ದೇಶ. ಅದಕ್ಕಾಗಿ ಅವರು ಇಂತಹ ಕೃತ್ಯಗಳನ್ನು ಎಸಗುತ್ತಿದ್ದಾರೆ. ದೇಶಾದ್ಯಂತ ಮುಸ್ಲಿಮರ ಹತ್ಯೆಗೈಯಲಾಗುತ್ತಿದೆ. ಆದರೆ, ಇದನ್ನು ಅಧಿಕಾರಿಗಳು ಮೂಕಪ್ರೇಕ್ಷಕರಾಗಿ ನೋಡುತ್ತಿದ್ದಾರೆ ಎಂದು ಸಮೀರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News