ಪ್ರಧಾನಿ ಧ್ಯಾನ ಮಾಡಿದ ಗುಹೆಗೆ ದಿನಕ್ಕೆ 990 ರೂ. ಬಾಡಿಗೆ !

Update: 2019-05-19 15:51 GMT

 ಶಿಮ್ಲಾ, ಮೇ 19: ಪ್ರಧಾನಿ ನರೇಂದ್ರ ಮೋದಿ ಅವರು ಧ್ಯಾನ ಮಾಡಿದ ಉತ್ತರಾಖಂಡದ ಕೇದಾರನಾಥದಲ್ಲಿರುವ ಗುಹೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ ಹಾಗೂ ಈ ಗುಹೆಗೆ ದಿನಕ್ಕೆ 990 ರೂಪಾಯಿ ಬಾಡಿಗೆ.

ಕಳೆದ ವರ್ಷ ಕೇದಾರನಾಥದಲ್ಲಿ ನಿರ್ಮಿಸಲಾದ ಈ ಧ್ಯಾನ ಮಾಡುವ ಗುಹೆಯನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಬಾಡಿಗೆ ಇಳಿಕೆ ಮಾಡಲಾಗಿದೆ ಹಾಗೂ ಕೆಲವು ನಿಯಮಗಳನ್ನು ಕೈ ಬಿಡಲಾಗಿದೆ ಎಂದು ಗರ್ವಾಲ್ ಮಂಡಲ್ ವಿಕಾಸ್ ನಿಗಮ (ಜಿಎಂವಿಎನ್) ತಿಳಿಸಿದೆ.

 ಕೇದಾರನಾಥ ದೇವಾಲಯದಿಂದ 1 ಕಿ.ಮೀ. ಎತ್ತರ ಪ್ರದೇಶದಲ್ಲಿ ಧ್ಯಾನ ಮಾಡುವ ಗುಹೆ ನಿರ್ಮಿಸುವಂತೆ ಮೋದಿ ಸಲಹೆ ನೀಡಿದ ಬಳಿಕ ಈ ರುದ್ರಾ ಧ್ಯಾನ ಮಾಡುವ ಗುಹೆ ನಿರ್ಮಿಸಲಾಗಿತ್ತು ಎಂದು ಜಿಎಂವಿಎನ್ ತಿಳಿಸಿದೆ.

ಆರಂಭದಲ್ಲಿ ಈ ಗುಹೆಗೆ ದಿನಕ್ಕೆ 3000 ರೂ. ಬಾಡಿಗೆ ನಿಗದಿಪಡಿಸಲಾಗಿತ್ತು. ಕಳೆದ ವರ್ಷ ಈ ಗುಹೆಗೆ ಬರುವವರ ಸಂಖ್ಯೆ ಕಡಿಮೆ ಆದ ಕಾರಣಕ್ಕೆ ಬಾಡಿಗೆಯನ್ನು 990 ರೂ.ಗೆ ಇಳಿಸಲಾಯಿತು.

ಕಳೆದ ವರ್ಷ ಈ ಗುಹೆಯ ಮುಂಗಡ ಆರಂಭವಾದ ಬಳಿಕ ಪ್ರವಾಸಿಗಳಿಂದ ಉತ್ತಮ ಪ್ರತಿಕ್ರಿಯೆ ಬರಲಿಲ್ಲ. ಅಲ್ಲದೆ, ವಾತಾವರಣ ತುಂಬಾ ತಂಪಾಗಿತ್ತು. ಅಲ್ಲದೆ ಇದರ ಬಾಡಿಗೆ ತುಂಬಾ ಹೆಚ್ಚಾಯಿತು ಎಂದು ನಮಗೆ ಮನವರಿಕೆಯಾಗಿತ್ತು ಎಂದು ಜಿಎಂವಿಎನ್‌ನ ಜನರಲ್ ಮ್ಯಾನೇಜರ್ ಬಿ.ಎಲ್. ರಾಣಾ ತಿಳಿಸಿದ್ದಾರೆ.

ಆದಾಗ್ಯೂ, ಪ್ರವಾಸಿಗಳು ಈ ಗುಹೆಯನ್ನು ಕನಿಷ್ಠ ಮೂರು ದಿನ ಅವಧಿಗೆ ಮಂಗಡ ಕಾಯ್ದಿರಿಸುವುದು ಕಡ್ಡಾಯವಾಗಿತ್ತು. ಆದರೆ, ಈ ವರ್ಷದಿಂದ ಈ ನಿಯಮವನ್ನು ತೆಗೆದು ಹಾಕಲಾಗಿದೆ ಎಂದು ರಾಣಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News