ಸತಿ ಪದ್ಧತಿ ಸ್ವಾಭಿಮಾನದ ಸಂಕೇತ ಎಂದ ಅಶೋಕ್ ಗೆಹ್ಲೋಟ್ !

Update: 2019-05-19 15:54 GMT

ಜೈಪುರ, ಮೇ 19: ಐತಿಹಾಸಿಕ ಆಚರಣೆಯಾಗಿದ್ದ ಸತಿ ಸಹಗಮನ ಅಥವಾ ಜೌಹಾರ್ ನಮ್ಮ ಇತಿಹಾಸದಲ್ಲಿ ಸ್ವಾಭಿಮಾನದ ವಿಷಯವಾಗಿತ್ತು ಎಂದು ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

“ನಮ್ಮ ಇತಿಹಾಸದಲ್ಲಿ ಜೌಹಾರ್ ತ್ಯಾಗ ಮತ್ತು ಸ್ವಾಭಿಮಾನಕ್ಕೆ ಸಂಬಂಧಿಸಿದ ವಿಷಯವಾಗಿದ್ದು ಮಹಾರಾಣಾ ಪ್ರತಾಪ್ ಧೈರ್ಯ ಮತ್ತು ತ್ಯಾಗದ ಸಂಕೇತವಾಗಿದ್ದಾರೆ” ಎಂದ ಗೆಹ್ಲೋಟ್, ಬಿಜೆಪಿ ಚಾರಿತ್ರಿಕ ವಿಷಯಗಳನ್ನು ವಿರೂಪಗೊಳಿಸಿದೆ ಎಂದು ಟೀಕಿಸಿದರು. ರಾಜ್ಯದ ಶಾಲಾ ಪಠ್ಯಪುಸ್ತಕಗಳನ್ನು ಪರಿಷ್ಕರಿಸುವ ಸರಕಾರದ ನಿರ್ಧಾರದ ಕುರಿತ ವಿವಾದದ ಬಗ್ಗೆ ಅವರು ಪ್ರತಿಕ್ರಿಯಿಸುತ್ತಿದ್ದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜಸ್ತಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಚರಿತ್ರೆಯನ್ನು ವಿರೂಪಗೊಳಿಸಿದ್ದಾರೆ ಎಂದು ಆರೋಪಿಸಿದರು. ಸರಕಾರವನ್ನು ನಡೆಸುವವರು ಚಾರಿತ್ರಿಕ ವಿಷಯಗಳನ್ನು ವಿರೂಪಗೊಳಿಸುವ ಮೂಲಕ ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ ಅಥವಾ ಸದಾ ಸ್ಮರಣೀಯರಾಗಿರಲು ಸಾಧ್ಯವಿಲ್ಲ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯವರು ಯಾವುದೇ ತ್ಯಾಗ ಅಥವಾ ಬಲಿದಾನ ಮಾಡಿರದ ಕಾರಣ ಅವರು ಚಾರಿತ್ರಿಕ ವಿಷಯಗಳನ್ನು ಬದಲಿಸಲು ಮುಂದಾಗಿದ್ದಾರೆ ಎಂದವರು ಹೇಳಿದರು.

ರಾಜಸ್ತಾನದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಶಾಲಾ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲು ಕ್ರಮ ಕೈಗೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.

ಹಿಂದುತ್ವದ ಪ್ರತಿಪಾದಕ 'ವೀರ' ಸಾವರ್ಕರ್‌ರನ್ನು ವಸುಂಧರ ರಾಜೇ ನೇತೃತ್ವದ ಬಿಜೆಪಿ ಸರಕಾರದ ಅವಧಿಯಲ್ಲಿ ಪಠ್ಯಪುಸ್ತಕಗಳಲ್ಲಿ ವೈಭವೀಕರಿಸಲಾಗಿತ್ತು. ಆದರೆ ಸಾವರ್ಕರ್ ಬ್ರಿಟಿಷ್ ಸರಕಾರದ ಕ್ಷಮೆ ಯಾಚಿಸಿರುವ ಬಗ್ಗೆ ದೃಢವಾದ ಪುರಾವೆಗಳಿವೆ ಎಂದು ಮೇ 14ರಂದು ರಾಜಸ್ತಾನದ ಶಿಕ್ಷಣ ಸಚಿವ ಗೋವಿಂದ್ ಸಿಂಗ್ ದೊತ್ಸಾರ ಹೇಳಿದ್ದರು. ಈ ಹಿನ್ನೆಲೆಯಲ್ಲಿ, ಈ ಬಾರಿಯ ಶೈಕ್ಷಣಿಕ ವರ್ಷದ ಪಠ್ಯಪುಸ್ತಕಗಳಲ್ಲಿ ಕೆಲವು ಬದಲಾವಣೆ ಮಾಡಲು ಸಮಿತಿ ಸಲಹೆ ನೀಡಿದ್ದು 10ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿರುವ ಪಠ್ಯದಲ್ಲಿ ಸಾವರ್ಕರ್ ಹೆಸರಿನ ಎದುರು ಇರುವ 'ವೀರ' ಎಂಬ ಪದವನ್ನು ತೆಗೆದು ಹಾಕುವಂತೆ ಸೂಚಿಸಿದೆ. ಸಾವರ್ಕರ್ ಮಹಾತ್ಮಾ ಗಾಂಧೀಜಿಯ ಹತ್ಯೆಯ ಸಂಚು ರೂಪಿಸಿದ ಪಿತೂರಿಗಾರನಾಗಿದ್ದರು. ಆದರೆ ಬಳಿಕ ಈ ಆರೋಪದಿಂದ ಮುಕ್ತರಾದರು ಎಂದು ಈ ಪುಸ್ತಕದಲ್ಲಿ ಬರೆಯಲಾಗಿದೆ.

ಅಲ್ಲದೆ ಈ ಹಿಂದಿನ ಬಿಜೆಪಿ ಸರಕಾರ 8ನೇ ತರಗತಿಯ ಇಂಗ್ಲಿಷ್ ಪಠ್ಯಪುಸ್ತಕದಲ್ಲಿ ಆತ್ಮಾಹುತಿಯ ಕುರಿತು ಪ್ರಕಟಿಸಿದ್ದ ಚಿತ್ರವನ್ನು ರದ್ದುಗೊಳಿಸಿ ಅಲ್ಲಿ ಬೆಟ್ಟದ ಕೋಟೆಯ ಚಿತ್ರವನ್ನು ಹಾಕಲಾಗಿದೆ. ಈ ಲೇಖನದ ಜೊತೆ ಪ್ರಕಟಿಸಿರುವ ಚಿತ್ರವು ಜೌಹಾರ್ (ರಾಜ್ಯವನ್ನು ವಶಪಡಿಸಿಕೊಂಡ ಆಕ್ರಮಣಕಾರರಿಗೆ ಸೆರೆ ಸಿಕ್ಕುವ ಹಂತದಲ್ಲಿ ಮಹಿಳೆಯರು ನಡೆಸುವ ಆತ್ಮಾಹುತಿ) ಅಥವಾ ಸತಿ (ಪತಿಯ ಮರಣದ ಬಳಿಕ ಪತಿಯ ಚಿತೆಗೆ ಹಾರಿ ಮಹಿಳೆಯರು ನಡೆಸುವ ಆತ್ಮಾಹುತಿ- ಸತಿ ಸಹಗಮನ) ಆಚರಣೆಗೆ ಸಂಬಂಧಿಸಿದ್ದೇ ಎಂಬುದು ಸ್ಪಷ್ಟವಾಗಿಲ್ಲ. ಆದ್ದರಿಂದ ಚಿತ್ರವನ್ನು ಬದಲಿಸಲಾಗಿದೆ ಎಂದು ದೊತ್ಸಾರ ಹೇಳಿದ್ದಾರೆ.

   ಆದರೆ ಪಠ್ಯಪುಸ್ತಕದಲ್ಲಿ ಬದಲಾವಣೆ ತರುವ ನಿರ್ಧಾರ ಹಿಂದೂ ವಿರೋಧಿ ಕ್ರಮವಾಗಿದೆ ಎಂದು ಮಾಜಿ ಶಿಕ್ಷಣ ಸಚಿವ, ಬಿಜೆಪಿ ಮುಖಂಡ ವಾಸುದೇವ ದೇವ್ನಾನಿ ಹೇಳಿದ್ದಾರೆ. ಕಾಂಗ್ರೆಸ್ ಸರಕಾರ ತನ್ನ ಹಿಂದೂ ವಿರೋಧಿ ಧೋರಣೆಯಿಂದ ಮಹಾನ್ ಸ್ವಾತಂತ್ರ ಹೋರಾಟಗಾರ ವೀರ ಸಾವರ್ಕರ್‌ರನ್ನು ಅವಮಾನಿಸಿದೆ. ಒಂದು ಕುಟುಂಬವನ್ನು ಮಾತ್ರ ಆರಾಧಿಸುತ್ತಿರುವ ಪಕ್ಷವು ಇತರ ಮಹಾನ್ ವ್ಯಕ್ತಿಗಳ ಬಗ್ಗೆ ಈ ಹಿಂದಿನಿಂದಲೂ ಇಂತಹ ವರ್ತನೆ ತೋರುತ್ತಾ ಬಂದಿದೆ ಎಂದು ದೇವ್ನಾನಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News