ಪ್ರಜ್ಞಾ ಹೇಳಿಕೆಗೆ ಮೋದಿಯ ಅಸಮ್ಮತಿಯಲ್ಲಿ ಬದ್ಧತೆಯ ಕೊರತೆಯಿತ್ತು: ಅಗ್ನಿವೇಶ್

Update: 2019-05-19 15:58 GMT

ಹೊಸದಿಲ್ಲಿ, ಮೇ 19: ಗೋಡ್ಸೆಯನ್ನು ದೇಶಭಕ್ತ ಎಂದು ಬಣ್ಣಿಸಿದ ಬಿಜೆಪಿ ನಾಯಕಿ ಪ್ರಜ್ಞಾ ಸಿಂಗ್ ಹೇಳಿಕೆಗೆ ಪ್ರಧಾನಿ ಮೋದಿ ವ್ಯಕ್ತಪಡಿಸಿದ ಅಸಮ್ಮತಿಯಲ್ಲಿ ಬದ್ಧತೆಯ ಕೊರತೆಯಿತ್ತು ಎಂದು ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್ ಹೇಳಿದ್ದಾರೆ.

ಮಹಾತ್ಮಾ ಗಾಂಧಿಯ ಹಂತಕ ಗೋಡ್ಸೆ ದೇಶಭಕ್ತ ಎಂದಿರುವ ಪ್ರಜ್ಞಾ ಸಿಂಗ್‌ರನ್ನು ತಾನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಶುಕ್ರವಾರ ಪ್ರಧಾನಿ ಮೋದಿ ಹೇಳಿದ್ದರು. ಕಳೆದ ಐದು ವರ್ಷದಲ್ಲಿ ನಡೆದಿರುವುದನ್ನು ಗಮನಿಸಿದರೆ ಹಾಗೂ ಅವರ ಹಲವು ಸಹೋದ್ಯೋಗಿಗಳು ನೀಡಿರುವ ಇದೇ ರೀತಿಯ ಹೇಳಿಕೆಗಳ ಬಗ್ಗೆ ಪ್ರಧಾನಿಯ ಸಹಿಷ್ಣುತೆಯನ್ನು ಗಮನಿಸಿದರೆ ಇದು ಕೇವಲ ಮುಖ ಉಳಿಸಿಕೊಳ್ಳುವ ತಂತ್ರವಾಗಿದೆ. ಅವರ ಹೇಳಿಕೆಯಲ್ಲಿ ಸ್ಪಷ್ಟತೆ ಅಥವಾ ಬದ್ಧತೆಯ ಕೊರತೆಯಿದೆ ಎಂದು ಅಗ್ನಿವೇಶ್ ಹೇಳಿದ್ದಾರೆ.

ತನ್ನ ಹೇಳಿಕೆ ಬಿಜೆಪಿಯ ಹಿರಿಯ ನಾಯಕರಿಗೆ ಇಷ್ಟವಾಗದು ಎಂದು ತಿಳಿದಿದ್ದರೆ ಪ್ರಜ್ಞಾ ಸಿಂಗ್ ಇಂತಹ ಹೇಳಿಕೆ ನೀಡುತ್ತಿರಲಿಲ್ಲ. ಬಾಯಿಗೆ ಬಂದಂತೆ ಹೇಳಿಕೆ ನೀಡುವ ಪ್ರಜ್ಞಾ ಸಿಂಗ್‌ರನ್ನು ತಡೆಯಲು ಮೋದಿಗೆ ಮನಸಿದ್ದರೆ, ಹೇಮಂತ್ ಕರ್ಕರೆ ಕುರಿತು ಪ್ರಜ್ಞಾ ಅಸಂಬದ್ಧ ಹೇಳಿಕೆ ನೀಡಿದಾಗಲೇ ಆಕೆಗೆ ಎಚ್ಚರಿಕೆ ನೀಡಬೇಕಿತ್ತು ಎಂದು ಅಗ್ನಿವೇಶ್ ಹೇಳಿದ್ದಾರೆ.

   ಇಲ್ಲಿರುವ ವಿಷಯ ಹಿಂದುತ್ವದ ಕುರಿತಾದದ್ದಲ್ಲ, ಇದು ಹಿಂಸಾಚಾರದ ಸಿದ್ಧಾಂತದ ವಿಷಯವಾಗಿದೆ. ಮಹಾತ್ಮಾ ಗಾಂಧೀಜಿಯ ಹತ್ಯೆಯು ಭಾರತದ ಚೈತನ್ಯದ ಮೇಲೆ ಹಿಂಸಾಚಾರದ ಸಿದ್ಧಾಂತದ ಪ್ರತಿಪಾದನೆಯ ಸಂಕೇತವಾಗಿದೆ ಎಂದರು. ಲೋಕಸಭಾ ಚುನಾವಣೆಯ ಸಂದರ್ಭ ಚುನಾವಣಾ ಆಯೋಗದ ಪಕ್ಷಪಾತ ಬಯಲಾಗಿದೆ. ಕೋಮು ದೃವೀಕರಣದ ರಾಜಕೀಯದ ಮೂಲಕ ಮೋದಿ ಮತ್ತು ಶಾ ಸೃಷ್ಟಿಸಿರುವ ಗಾಯಗಳು ವಾಸಿಯಾಗಬೇಕಿದ್ದರೆ ಹಲವು ದಶಕಗಳೇ ಬೇಕಾಗಬಹುದು. ಕೋಮುವಾದಿ ರಾಜಕೀಯಕ್ಕೆ ಮಾನ್ಯತೆ ಮತ್ತು ಮಹತ್ವ ನೀಡುವವರು ಮಹಾತ್ಮಾ ಗಾಂಧೀಜಿಯ ಬದಲು ಗೋಡ್ಸೆಯನ್ನು ದೇಶದ ಮಹಾತ್ಮಾ ಎಂದು ಕಾಣಬಯಸುತ್ತಾರೆ ಎಂದರು.

ಬಿಜೆಪಿ ಪ್ರಜ್ಞಾ ಠಾಕೂರ್‌ಗೆ ನೋಟಿಸ್ ಕಳಿಸಿರಬಹುದು. ಆದರೆ ದೇಶದ ಜನತೆ ಶಾ ಮತ್ತು ಮೋದಿಗೆ ನೋಟಿಸ್ ಕಳಿಸಬೇಕು ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News