ಪ್ರಧಾನಿ ಕಚೇರಿ, ನೀತಿ ಆಯೋಗಕ್ಕೆ ಕ್ಲೀನ್‌ಚಿಟ್: ಮರುಪರಿಶೀಲನೆಗೆ ಚುನಾವಣಾ ಆಯೋಗದ ನಿರ್ಧಾರ

Update: 2019-05-19 16:00 GMT

 ಹೊಸದಿಲ್ಲಿ, ಮೇ 19: 2019ರ ಲೋಕಸಭಾ ಚುನಾವಣೆ ಸಂದರ್ಭ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ನೀತಿ ಆಯೋಗ ಮತ್ತು ಪ್ರಧಾನಿ ಕಚೇರಿಗೆ ಕ್ಲೀನ್ ಚಿಟ್ ನೀಡಿರುವ ಪ್ರಕರಣಗಳ ಮರುಪರಿಶೀಲನೆಗೆ ಚುನಾವಣಾ ಆಯೋಗ ನಿರ್ಧರಿಸಿದೆ.

  ಪ್ರಧಾನಿ ಮೋದಿಯ ಭೇಟಿಗೂ ಮುನ್ನ ಗೊಂಡಿಯಾ, ವಾರ್ಧಾ ಮತ್ತು ಲಾಥೂರ್ ಸಂಸದೀಯ ಕ್ಷೇತ್ರದ ಬಗ್ಗೆ ಮಾಹಿತಿ ಕಲೆ ಹಾಕಲು ಪ್ರಧಾನಿ ಕಚೇರಿಯು ನೀತಿ ಆಯೋಗವನ್ನು ದುರುಪಯೋಗ ಪಡಿಸಿಕೊಂಡಿತ್ತು ಎಂದು ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಕಳೆದ ವಾರ ಚುನಾವಣಾ ಆಯೋಗ ತಳ್ಳಿಹಾಕಿತ್ತು. ಸುದ್ದಿಸಂಸ್ಥೆಯ ವರದಿಯನ್ನಾಧರಿಸಿ ಕಾಂಗ್ರೆಸ್ ಈ ದೂರು ಸಲ್ಲಿಸಿತ್ತು.

 ಈ ದೂರಿನ ಪರಿಶೀಲನೆ ಸಂದರ್ಭ ಚುನಾವಣಾ ಆಯುಕ್ತ ಅಶೋಕ ಲಾವಸ, ಪ್ರಧಾನಿ ಕಚೇರಿ ಈ ರೀತಿಯ ಮಾಹಿತಿ ಕೇಳಿತ್ತೇ ಎಂಬ ಬಗ್ಗೆ ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್‌ಗೆ ನೋಟಿಸ್ ನೀಡಬೇಕೆಂದು ಒತ್ತಾಯಿಸಿದ್ದರು. ಆದರೆ ಅಧಿಕೃತ ಮತ್ತು ಚುನಾವಣಾ ಭೇಟಿಯನ್ನು ಏಕಕಾಲದಲ್ಲಿ ನಡೆಸಬಹುದು ಎಂದು 2014ರ ಅಕ್ಟೋಬರ್ 7ರಂದು ಪ್ರಧಾನಿಗೆ ವಿನಾಯಿತಿ ನೀಡಿರುವುದನ್ನು ಉಲ್ಲೇಖಿಸಿದ್ದ ಮುಖ್ಯ ಚುನಾವಣಾ ಆಯುಕ್ತ ಹಾಗೂ ಮತ್ತೊಬ್ಬ ಚುನಾವಣಾ ಆಯುಕ್ತರ ಬಹುಮತದ ಅಭಿಪ್ರಾಯವನ್ನಾಧರಿಸಿ ಪ್ರಧಾನಿ ಕಚೇರಿಗೆ ಕ್ಲೀನ್ ಚಿಟ್ ನೀಡಲಾಗಿತ್ತು.

ಆದರೆ ಅಶೋಕ್ ಲಾವಸ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇದೀಗ ಚುನಾವಣಾ ಆಯೋಗವು ಅಮಿತಾಬ್ ಕಾಂತ್‌ಗೆ ನೋಟಿಸ್ ಜಾರಿಗೊಳಿಸಿದೆ. ಉತ್ತರಿಸಲು ಯಾವುದೇ ಗಡುವನ್ನು ನೋಟಿಸ್‌ನಲ್ಲಿ ನೀಡಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News