ಬಿಜೆಪಿಗೆ ಮತ ನೀಡದಿದ್ದರೆ ಗುಂಡಿಕ್ಕುವುದಾಗಿ ಕೇಂದ್ರೀಯ ಭದ್ರತಾ ಪಡೆಗಳ ಬೆದರಿಕೆ:ತೃಣಮೂಲ ಆರೋಪ

Update: 2019-05-19 16:01 GMT

ಕೋಲ್ಕತಾ,ಮೇ 19: ಕೇಂದ್ರೀಯ ಭದ್ರತಾ ಪಡೆಗಳು ಪ.ಬಂಗಾಳದಲ್ಲಿ ಮತದಾರರನ್ನು ಹಿಂಸಿಸುತ್ತಿವೆ ಮತ್ತು ಅವರನ್ನು ಹೆದರಿಸುತ್ತಿವೆ,ಅವು ಬಿಜೆಪಿ ನಾಯಕರ ಆದೇಶಗಳಂತೆ ನಡೆದುಕೊಳ್ಳುತ್ತಿವೆ ಎಂದು ತೃಣಮೂಲ ಪಕ್ಷವು ಆರೋಪಿಸಿದೆ. ಲೋಕಸಭಾ ಚುನಾವಣೆಗಳ ಅಂತಿಮ ಹಂತದಲ್ಲಿ ರವಿವಾರ ರಾಜ್ಯದ ಒಂಭತ್ತು ಕ್ಷೇತ್ರಗಳಲ್ಲಿ ಮತದಾನ ನಡೆದಿದೆ.

 ಪ.ಬಂಗಾಳವು ಶಾಂತಿಯುತ ಮತದಾನವನ್ನು ಬಯಸುತ್ತಿದೆ,ಆದರೆ ಬಿಜೆಪಿಗೆ ಅದು ಬೇಕಾಗಿಲ್ಲ ಎಂದು ಹೇಳಿಕೆಯೊಂದರಲ್ಲಿ ತಿಳಿಸಿದ ತೃಣಮೂಲ ಸಂಸದ ಡೆರಿಕ್ ಒ’ಬ್ರಿಯಾನ್ ಅವರು,ಬಂಗಾಳದಲ್ಲಿಂದು ಕೇಂದ್ರೀಯ ಪಡೆಗಳು ಸಾಮಾನ್ಯ ನಾಗರಿಕರನ್ನು,ವಿಶೇಷವಾಗಿ ದುರ್ಬಲ ವರ್ಗಗಳ ಮತದಾರರನ್ನು ಹಿಂಸಿಸುತ್ತಿವೆ ಮತ್ತು ಬೆದರಿಕೆಗಳನ್ನೊಡ್ಡುತ್ತಿವೆ. ಅಂಗವಿಕಲ ವ್ಯಕ್ತಿಗಳಿಗೂ ಬೆದರಿಸಲಾಗುತ್ತಿದೆ. ‘ಕಮಲ್ ದಬಾವೋ ನಹೀಂ ತೋ ಠೋಕ್ ದೂಂಗಾ(ಬಿಜೆಪಿಗೆ ಮತ ಹಾಕಿ ಇಲ್ಲದಿದ್ದರೆ ಗುಂಡಿಕ್ಕುವೆ)’ ಎಂದೂ ಕೇಂದ್ರಿಯ ಪಡೆಗಳು ಮತದಾರರನ್ನು ಬೆದರಿಸುತ್ತವೆ. ಮಾಧ್ಯಮಗಳ ಬಳಿ ಇವೆಲ್ಲ ವೀಡಿಯೊಗಳಿವೆ ,ಹೆಚ್ಚಿನವು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ ಎಂದರು.

ಈ ಆರೋಪಗಳನ್ನು ಆಧಾರರಹಿತ ಎಂದು ಬಣ್ಣಿಸಿರುವ ಬಿಜೆಪಿಯು,ಮತದಾರರನ್ನು ಬೆದರಿಸಲು ಯತ್ನಿಸುತ್ತಿರುವ ಗೂಂಡಾಗಳನ್ನು ತೃಣಮೂಲ ಪಕ್ಷವು ಬೆಂಬಲಿಸುತ್ತಿದೆ ಎಂದು ಹೇಳಿದೆ.

ತೃಣಮೂಲ ಪಕ್ಷವು ಮತದಾನ ಮುಗಿದ ನಂತರ ಮತದಾರರ ಒಂದು ವರ್ಗವನ್ನು ಗುರಿಯಾಗಿಸಿಕೊಳ್ಳಬಹುದು ಎಂಬ ಕಳವಳವಿರುವುದರಿಂದ ನೀತಿ ಸಂಹಿತೆ ಜಾರಿಯಲ್ಲಿರುವವರೆಗೂ ಪ.ಬಂಗಾಳದಲ್ಲಿ ಕೇಂದ್ರೀಯ ಪಡೆಗಳ ನಿಯೋಜನೆಯನ್ನು ಮುಂದುವರಿಸಬೇಕು ಎಂದು ದಿಲ್ಲಿಯಲ್ಲಿ ಬಿಜೆಪಿ ನಾಯಕಿ ಹಾಗೂ ರಕ್ಷಣ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News