ಮೋದಿ ಕೇದಾರನಾಥ ಭೇಟಿಗೆ ಮಾಧ್ಯಮದಲ್ಲಿ ಪ್ರಚಾರ: ಚುನಾವಣಾ ಆಯೋಗಕ್ಕೆ ಮಮತಾ ಬ್ಯಾನರ್ಜಿ ದೂರು

Update: 2019-05-19 17:08 GMT

ಕೋಲ್ಕತಾ, ಮೇ 19: ಉತ್ತರಾಖಂಡದ ಕೇದಾರನಾಥ ಗುಹಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಭೇಟಿ ನೀಡಿರುವುದು ಹಾಗೂ ಈ ಯಾತ್ರೆಗೆ ಮಾಧ್ಯಮದಲ್ಲಿ ವ್ಯಾಪಕ ಪ್ರಚಾರ ನೀಡಿರುವುದು ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಟಿಎಂಸಿ ರವಿವಾರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಲೋಕಸಭಾ ಚುನಾವಣೆಯ ಅಂತಿಮ ಹಂತದ ಚುನಾವಣೆಯ ಪ್ರಚಾರ ಕಾರ್ಯ ಮೇ 17ರಂದು ಸಂಜೆ 6 ಗಂಟೆಗೆ ಮುಕ್ತಾಯವಾಗಿದೆ. ಆದರೂ ಮೇ 18ರಂದು ಪ್ರಧಾನಿ ಮೋದಿಯ ಕೇದಾರನಾಥ ಗುಹಾ ಯಾತ್ರೆಗೆ ಸಂಬಂಧಿಸಿದ ಸುದ್ದಿಗಳನ್ನು ಎಲ್ಲಾ ರಾಷ್ಟ್ರೀಯ ಹಾಗೂ ಸ್ಥಳೀಯ ಟಿವಿ ವಾಹಿನಿಗಳಲ್ಲಿ ಕಳೆದ ಎರಡು ದಿನಗಳಿಂದ ವ್ಯಾಪಕವಾಗಿ ಪ್ರಚಾರ ಮಾಡಲಾಗುತ್ತಿದೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಟಿಎಂಸಿ ವಕ್ತಾರ ಡೆರೆಕ್ ಒ'ಬ್ರಿಯಾನ್ ಹೇಳಿದ್ದಾರೆ.

  ಗುಹೆಗೆ ಭೇಟಿ ನೀಡಿ ಅಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಗುಹೆಯ ಅಭಿವೃದ್ಧಿಗೆ ಯೋಜನೆ ರೂಪಿಸಿರುವುದಾಗಿ ಹೇಳಿಕೆ ನೀಡಿದ್ದರು. ಅಲ್ಲಿ ಅವರು ತಂಗಿದ್ದ ಅವಧಿಯ ಪ್ರತೀ ಘಳಿಗೆಯ ವಿಷಯಗಳನ್ನೂ ಮಧ್ಯಮಗಳಲ್ಲಿ ಪ್ರಸಾರ ಮಾಡಲಾಗುತ್ತಿತ್ತು. ಮೇ 19ರಂದು ನಡೆದ ಅಂತಿಮ ಹಂತದ ಮತದಾನದ ಸಂದರ್ಭ ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿವೆ ಎಂದು ಒ'ಬ್ರಿಯಾನ್ ಆರೋಪಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯ ಕಣ್ಣು ಮತ್ತು ಕಿವಿಯಾಗಿರುವ ಚುನಾವಣಾ ಆಯೋಗವು ಮೋದಿಯಿಂದ ನೀತಿ ಸಂಹಿತೆ ಉಲ್ಲಂಘನೆಯಾಗಿರುವಾಗ ಕಣ್ಣು ಮತ್ತು ಕಿವಿಯನ್ನು ಮುಚ್ಚಿಕೊಂಡಿದೆ ಎಂದು ಟಿಎಂಸಿ ದೂರಿದೆ.

   ಶನಿವಾರ ಕೇದಾರನಾಥ ದೇವಸ್ಥಾನಕ್ಕೆ ಭೇಟಿ ನೀಡಲು ಮೋದಿಗೆ ಅನುಮತಿ ನೀಡಿದ್ದ ಚುನಾವಣಾ ಆಯೋಗ, ಮಾದರಿ ನೀತಿ ಸಂಹಿತೆ ಇನ್ನೂ ಜಾರಿಯಲ್ಲಿರುವುದನ್ನು ಪ್ರಧಾನಮಂತ್ರಿ ಕಚೇರಿಗೆ ನೆನಪಿಸಿತ್ತು. ಈ ಭೇಟಿಯ ಸುದ್ದಿಯನ್ನು ಮಾಧ್ಯಮಗಳು ವ್ಯಾಪಕವಾಗಿ ಪ್ರಸಾರ ಮಾಡಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಲೇವಡಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News