ಅಬ್ಬಾ, ಕೊನೆಗೂ ಲೋಕಸಭಾ ಚುನಾವಣೆ ಮುಗಿಯಿತು: ಅಂತಿಮ ಹಂತದಲ್ಲಿ ಶೇ.61ರಷ್ಟು ಮತದಾನ

Update: 2019-05-19 17:45 GMT

ಹೊಸದಿಲ್ಲಿ,ಮೇ 19: ಏಳು ಹಂತಗಳ ಮ್ಯಾರಥಾನ್ ಲೋಕಸಭಾ ಚುನಾವಣೆ-2019 ರವಿವಾರ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರದ ಘಟನೆಗಳು ಮತ್ತು ಪಂಜಾಬಿನಲ್ಲಿ ಘರ್ಷಣೆಗಳ ನಡುವೆಯೇ ಅಂತಿಮ ಹಂತದ ಮತದಾನದೊಂದಿಗೆ ಅಂತ್ಯಗೊಂಡಿದೆ.

 ಅಲ್ಲಲ್ಲಿ ಇವಿಎಂ ತಾಂತ್ರಿಕ ದೋಷಗಳು ಮತ್ತು ಕೆಲವು ಮತಗಟ್ಟೆಗಳಲ್ಲಿ ಮತದಾನ ಬಹಿಷ್ಕಾರಗಳೂ ವರದಿಯಾಗಿವೆ. ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 59 ಲೋಕಸಭಾ ಕ್ಷೇತ್ರಗಳಲ್ಲಿ ನಡೆದ ಮತದಾನದಲ್ಲಿ ಸುಮಾರು ಶೇ.61ರಷ್ಟು ಮತದಾರರು ತಮ್ಮ ಪರಮೋಚ್ಚ ಹಕ್ಕನ್ನು ಚಲಾಯಿಸಿದರು. ಅಂತಿಮ ಮತದಾನ ಪ್ರಮಾಣವು ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ ಎಂದು ಚುನಾವಣಾ ಆಯೋಗವು ಹೇಳಿದೆ.

ಅಂತಿಮ ಹಂತದ ಮತದಾನದಲ್ಲಿ ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಲ್ಲಿ ಪುನರಾಯ್ಕೆ ಬಯಸಿರುವ ಪ್ರಧಾನಿ ನರೇಂದ್ರ ಮೋದಿ, ಬಿಹಾರದ ಪಾಟ್ನಾಸಾಹಿಬ್‌ನಲ್ಲಿ ಪರಸ್ಪರ ಸೆಣಸುತ್ತಿರುವ ಕೇಂದ್ರ ಸಚಿವ ರವಿಶಂಕರ ಪ್ರಸಾದ ಮತ್ತು ಕಾಂಗ್ರೆಸ್ ನಾಯಕ ಶತ್ರುಘ್ನ ಸಿನ್ಹಾ ಸೇರಿದಂತೆ 918 ಅಭ್ಯರ್ಥಿಗಳ ಭವಿಷ್ಯವನ್ನು ಅಂತಿಮ ಹಂತದಲ್ಲಿಯ ಮತದಾರರು ನಿರ್ಧರಿಸಿದ್ದಾರೆ. ಪಂಜಾಬ್ ಮತ್ತು ಉತ್ತರ ಪ್ರದೇಶಗಳ ತಲಾ 13,ಪಶ್ಚಿಮ ಬಂಗಾಳದ 9,ಬಿಹಾರ ಮತ್ತು ಮಧ್ಯಪ್ರದೇಶಗಳ ತಲಾ 8,ಹಿಮಾಚಲ ಪ್ರದೇಶದ 4,ಜಾರ್ಖಂಡ್‌ನ 3 ಮತ್ತು ಚಂಡಿಗಡದ ಏಕೈಕ ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಮಹೇಂದ್ರನಾಥ ಪಾಂಡೆ ಅವರು ಪುನರಾಯ್ಕೆಯನ್ನು ಬಯಸಿರುವ ಚಂದಾವ್ಲಿ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಎಸ್‌ಪಿ ಕಾರ್ಯಕರ್ತರ ನಡುವೆ ಘರ್ಷಣೆಗಳು ನಡೆದಿದ್ದು ವರದಿಯಾಗಿದೆ. ಕ್ಷೇತ್ರದ ತಾರಾ ಜೀವನಪುರ ಗ್ರಾಮದಲ್ಲಿ ದಲಿತರು ಮತ ಚಲಾಯಿಸುವ ಮೊದಲೇ ಅವರ ಬೆರಳುಗಳಿಗೆ ಶಾಯಿ ಗುರುತುಗಳನ್ನು ಹಾಕಲಾಗಿದ್ದು,ಈ ಬಗ್ಗೆ ಎಫ್‌ಐಆರ್ ದಾಖಲಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

  ಅತ್ತ ಪ.ಬಂಗಾಳದ ಉತ್ತರ ಕೋಲ್ಕತಾ ಕ್ಷೇತ್ರದ ಗಿರೀಶ ಪಾರ್ಕ್ ಬಳಿ ಮಧ್ಯಾಹ್ನ ಕಚ್ಚಾ ಬಾಂಬ್ ಎಸೆಯಲಾಗಿತ್ತು ಎಂದು ಬಿಜೆಪಿ ಅಭ್ಯರ್ಥಿ ರಾಹುಲ್ ಸಿನ್ಹಾ ಹೇಳಿದರೆ, ಆ ಪ್ರದೇಶದಲ್ಲಿ ಪಟಾಕಿಗಳನ್ನು ಸಿಡಿಸಲಾಗಿತ್ತು ಮತ್ತು ಮತದಾನ ಶಾಂತಿಯುತವಾಗಿ ನಡೆದಿದೆ ಎಂದು ಪೊಲೀಸರು ತಿಳಿಸಿದರು.

ಕೋಲ್ಕತಾ ಮತ್ತು ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಘರ್ಷಣೆಗಳು ನಡೆದಿವೆ. ಡೈಮಂಡ್ ಹಾರ್ಬರ್ ಮತ್ತು ಜಾದವಪುರ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಾದ ನೀಲಾಂಜನ ರಾಯ್ ಮತ್ತು ಅನುಪಮ್ ಹಝ್ರ ಅವರ ಕಾರುಗಳಿಗೆ ದುಷ್ಕರ್ಮಿಗಳು ಹಾನಿಯನ್ನುಂಟು ಮಾಡಿರುವುದು ವರದಿಯಾಗಿದೆ.

 ಪಂಜಾಬಿನ ಬಠಿಂಡಾದ ತಲ್ವಾಂಡಿ ಸಾಬೋದಲ್ಲಿ ಮತ್ತು ಗುರುದಾಸಪುರದಲ್ಲಿ ಕಾಂಗ್ರೆಸ್ ಮತ್ತು ಅಕಾಲಿ-ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆಗಳು ನಡೆದಿವೆ. ತಲ್ವಾಂಡಿ ಸಾಬೋದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗುಂಡುಗಳನ್ನು ಹಾರಿಸಿದ್ದರು ಎಂದು ಅಕಾಲಿಗಳು ಆರೋಪಿಸಿದ್ದಾರೆ.

ಸುಗಮ ಮತದಾನಕ್ಕಾಗಿ 1.12 ಲಕ್ಷಕ್ಕೂ ಅಧಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು,ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ರವಿವಾರ ತಮಿಳುನಾಡಿನ ನಾಲ್ಕು ಮತ್ತು ಗೋವಾದ ಒಂದು ವಿಧಾನಸಭಾ ಕ್ಷೇತ್ರಗಳಿಗಾಗಿ ಉಪಚುನಾವಣೆಗಳೂ ನಡೆದಿವೆ.

ಲೋಕಸಭಾ ಚುನಾವಣೆಗಳ ಕಳೆದ ಆರು ಹಂತಗಳಲ್ಲಿ ಸರಾಸರಿ ಶೇ.66.68ರಷ್ಟು ಮತದಾನವಾಗಿತ್ತು. ಚುನಾವಣಾ ಪ್ರಕ್ರಿಯೆ 38 ದಿನಗಳಿಗೂ ಹೆಚ್ಚು ಅವಧಿಗೆ ವಿಸ್ತರಿಸಿಕೊಂಡಿದ್ದು,ಮೇ 23ರಂದು ಮತಎಣಿಕೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News